ಕೆ.ಕೆ.ಆರ್.ಡಿ.ಬಿ. ಸಮಗ್ರ ತಾಂತ್ರಿಕ ಕಾರ್ಯಾಗಾರ ಯಶಸ್ವಿ; 800ಕ್ಕೂ ಹೆಚ್ಚು ಇಂಜಿನಿಯರ್ಗಳಿಗೆ ತರಬೇತಿ
ಗುಣಮಟ್ಟದ ಕಾಮಗಾರಿ ಹಾಗೂ ದೋಷರಹಿತ ಕ್ರಿಯಾ ಯೋಜನೆಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ನಲಿನ್ ಅತುಲ್ ಕರೆ

ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯು ಲೋಕೋಪಯೋಗಿ ಇಲಾಖೆಯ ಈಶಾನ್ಯ ವಲಯದ ಸಹಯೋಗದಲ್ಲಿ ಆಯೋಜಿಸಿದ್ದ ಎರಡು ದಿನಗಳ ಸಮಗ್ರ ತಾಂತ್ರಿಕ ಕಾರ್ಯಾಗಾರವು ಶನಿವಾರ ಕಲಬುರಗಿಯ ಜೆಸ್ಟ್ ಕ್ಲಬ್ನಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿತು. ಮೂಲಸೌಕರ್ಯ ಕಾಮಗಾರಿಗಳ ಅನುಷ್ಠಾನದ ಜವಾಬ್ದಾರಿ ಹೊಂದಿರುವ ವಿವಿಧ ಇಲಾಖೆಗಳ ಸುಮಾರು 800 ಇಂಜಿನಿಯರ್ಗಳು ಕಾರ್ಯಾಗಾರದಲ್ಲಿ ಭಾಗವಹಿಸಿದರು.
ಎರಡು ದಿನಗಳ ಕಾಲ ಬೆಳಿಗ್ಗೆ 9 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ನಿರಂತರ ತಾಂತ್ರಿಕ ಅಧಿವೇಶನಗಳು ನಡೆದವು. ನಿವೃತ್ತ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅನ್ವರ್ ಅವರು ಕಟ್ಟಡ, ರಸ್ತೆ ಹಾಗೂ ಸೇತುವೆ ಕಾಮಗಾರಿಗಳ ವಿವರವಾದ ಯೋಜನಾ ವರದಿ, ಏಕರೂಪದ ದರಗಳು ಮತ್ತು ಟೆಂಡರ್ ಪ್ರಕ್ರಿಯೆಗಳ ಕುರಿತು ಮಾಹಿತಿ ನೀಡಿದರು. ತಾಂತ್ರಿಕ ತಜ್ಞ ಯಳಸಂಗಿ ಮಠ ಅವರು ಗ್ರಾಮೀಣ ರಸ್ತೆ, ರಾಜ್ಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿ, ಪ್ರಮುಖ ಜಿಲ್ಲಾ ರಸ್ತೆಗಳು ಹಾಗೂ ಸೇತುವೆಗಳ ವಿನ್ಯಾಸದ ಕುರಿತು ವಿವರಿಸಿದರು.
ನಿವೃತ್ತ ಮುಖ್ಯ ಇಂಜಿನಿಯರ್ ಎಂ. ನಾರಾಯಣ್ ಅವರು ರಸ್ತೆ, ಕಟ್ಟಡ ಹಾಗೂ ಪಾದಚಾರಿ ಮಾರ್ಗಗಳ ಗುಣಮಟ್ಟ ಕಾಪಾಡುವ ವಿಧಾನಗಳ ಕುರಿತು ಉಪನ್ಯಾಸ ನೀಡಿದರೆ, ಕಲಬುರಗಿಯ ಎ.ಪಿ.ಪಿ. ಇಂಜಿನಿಯರಿಂಗ್ ಕಾಲೇಜಿನ ಪ್ರಾಧ್ಯಾಪಕ ಡಾ. ಸಿದ್ರಾಮಪ್ಪ ಅವಂಟಿ ಅವರು ಗಟ್ಟಿಮುಟ್ಟಾದ ಸೇತುವೆ ಮತ್ತು ಪಾದಚಾರಿ ಮಾರ್ಗಗಳ ವಿನ್ಯಾಸ, ನಿರ್ಮಾಣ ಹಾಗೂ ನಿರ್ವಹಣೆ ಕುರಿತು ಸವಿಸ್ತಾರ ಮಾಹಿತಿ ನೀಡಿ ಇಂಜಿನಿಯರ್ಗಳ ಪ್ರಶ್ನೆಗಳಿಗೆ ಉತ್ತರಿಸಿದರು.
ಕಲಬುರಗಿ, ಬೀದರ, ಯಾದಗಿರಿ, ಕೊಪ್ಪಳ, ಬಳ್ಳಾರಿ, ರಾಯಚೂರು ಹಾಗೂ ವಿಜಯನಗರ ಜಿಲ್ಲೆಗಳ ಲೋಕೋಪಯೋಗಿ, ಪಂಚಾಯತ್ ರಾಜ್ ಇಂಜಿನಿಯರಿಂಗ್, ಸಣ್ಣ ಮತ್ತು ಮಧ್ಯಮ ನೀರಾವರಿ, ನಗರಾಭಿವೃದ್ಧಿ, ಆರೋಗ್ಯ, ಗ್ರಾಮೀಣ ಕುಡಿಯುವ ನೀರು ಸರಬರಾಜು, ಗೃಹ ಮಂಡಳಿ, ನಿರ್ಮಿತಿ ಕೇಂದ್ರ ಸೇರಿದಂತೆ ವಿವಿಧ ಇಲಾಖೆಗಳ ಇಂಜಿನಿಯರ್ಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡು ತಾಂತ್ರಿಕ ತರಬೇತಿ ಪಡೆದರು.
ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಪ್ರಮಾಣಪತ್ರ ವಿತರಿಸಿದ ಕೆ.ಕೆ.ಆರ್.ಡಿ.ಬಿ. ಕಾರ್ಯದರ್ಶಿ ನಲಿನ್ ಅತುಲ್ ಅವರು, ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದಲ್ಲಿ ದೋಷರಹಿತ ಕ್ರಿಯಾ ಯೋಜನೆ ರೂಪಿಸುವುದರೊಂದಿಗೆ ಗುಣಮಟ್ಟದ ಕಾಮಗಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು.
ಕಾಮಗಾರಿ ಆರಂಭಿಸುವ ಮುನ್ನ ಸ್ಥಳದ ಎಲ್ಲ ಸಮಸ್ಯೆಗಳನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು. ನಗರ ಪ್ರದೇಶಗಳಲ್ಲಿ ಒಳಚರಂಡಿ ವ್ಯವಸ್ಥೆ ಪೂರ್ಣಗೊಳ್ಳುವ ಮೊದಲು ರಸ್ತೆ ನಿರ್ಮಿಸಿ ನಂತರ ಮತ್ತೆ ರಸ್ತೆ ಅಗೆದಂತಹ ತಪ್ಪು ನಿರ್ಧಾರಗಳನ್ನು ಕೈಗೊಳ್ಳಬಾರದು. ಪ್ರತಿಯೊಂದು ಹಂತದಲ್ಲೂ ಪಾರದರ್ಶಕತೆ ಕಾಪಾಡಿ, ಸಂಬಂಧಿತ ಅಧಿಕಾರಿಗಳು ಪರಿಶೀಲನೆಯ ಬಳಿಕವೇ ದಾಖಲೆಗಳಿಗೆ ಸಹಿ ಮಾಡಬೇಕು ಎಂದು ಅವರು ಸೂಚಿಸಿದರು.
ಗ್ರಾಮೀಣ ರಸ್ತೆ ನಿರ್ಮಾಣದ ವೇಳೆ ಉಂಟಾಗುವ ಭೂ ವಿವಾದಗಳನ್ನು ತಹಶೀಲ್ದಾರ್ ಮಟ್ಟದಲ್ಲಿ ಬಗೆಹರಿಸಲಾಗದಿದ್ದರೆ ವಿಳಂಬ ಮಾಡದೆ ಸಹಾಯಕ ಆಯುಕ್ತರ ಗಮನಕ್ಕೆ ತಂದು ಶೀಘ್ರ ಪರಿಹಾರ ಕಂಡುಕೊಳ್ಳಬೇಕು ಎಂದು ಇಂಜಿನಿಯರ್ಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಕೆ.ಕೆ.ಆರ್.ಡಿ.ಬಿ. ಉಪ ಕಾರ್ಯದರ್ಶಿ ಸುರೇಖಾ ಕಿರಣಗಿ, ಹೆಚ್ಚುವರಿ ನಿರ್ದೇಶಕಿ ಪ್ರವೀಣಾ ಪ್ರಿಯ ಡೇವಿಡ್, ಹಣಕಾಸು ನಿಯಂತ್ರಕ ಪವನಕುಮಾರ, ಅಧೀಕ್ಷಕ ಇಂಜಿನಿಯರ್ ಆನಂದ ಕಮಲಾಪೂರಕರ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.



