ಕಮಲನಗರ ರೈತರಿಗೆ ಶೀಘ್ರ ಬೆಳೆ ವಿಮೆ ಪರಿಹಾರ ಬಿಡುಗಡೆ ಮಾಡಿ: ಶಾಸಕ ಪ್ರಭು ಚವ್ಹಾಣ್
ಬೆಳೆ ವಿಮೆ ಪರಿಹಾರ ವಿಳಂಬಕ್ಕೆ ಆಕ್ರೋಶ; ಅರ್ಹ ರೈತರ ಖಾತೆಗಳಿಗೆ ಜುಲೈ ಅಂತ್ಯದೊಳಗೆ ಹಣ ಜಮೆಯಾಗುವಂತೆ ಅಧಿಕಾರಿಗಳಿಗೆ ಸೂಚನೆ

ಕಮಲನಗರ, ಜು.11: ತಾಲ್ಲೂಕಿನ ರೈತರಿಗೆ ಬೆಳೆ ವಿಮೆ ಪರಿಹಾರದ ಹಣ ಇನ್ನೂ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಶಾಸಕ ಹಾಗೂ ಮಾಜಿ ಸಚಿವ ಪ್ರಭು ಬಿ. ಚವ್ಹಾಣ್ ಅವರು ಕೃಷಿ ಇಲಾಖೆಯ ಆಯುಕ್ತರು, ನಿರ್ದೇಶಕರು ಹಾಗೂ ಜಿಲ್ಲಾ ಜಂಟಿ ನಿರ್ದೇಶಕರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿ, ಅರ್ಹ ರೈತರಿಗೆ ಶೀಘ್ರದಲ್ಲೇ ಪರಿಹಾರ ಧನ ಬಿಡುಗಡೆ ಮಾಡುವಂತೆ ಒತ್ತಾಯಿಸಿದರು.
ಬೆಳೆ ವಿಮೆ ಪರಿಹಾರ ಬಿಡುಗಡೆಯಲ್ಲಿ ಉಂಟಾಗಿರುವ ವಿಳಂಬಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ರಾಜ್ಯದ ಇತರೆ ಭಾಗಗಳ ರೈತರಿಗೆ ಈಗಾಗಲೇ ಪರಿಹಾರದ ಹಣ ಬಿಡುಗಡೆಯಾಗಿದ್ದರೂ, ಕಮಲನಗರ ತಾಲ್ಲೂಕಿನ ರೈತರನ್ನು ನಿರ್ಲಕ್ಷಿಸಿರುವುದು ಸರಿಯಲ್ಲ ಎಂದು ಅಧಿಕಾರಿಗಳ ಗಮನ ಸೆಳೆದರು. ಯಾವುದೇ ವಿಳಂಬವಿಲ್ಲದೆ ಅರ್ಹ ರೈತರ ಬ್ಯಾಂಕ್ ಖಾತೆಗಳಿಗೆ ಪರಿಹಾರದ ಹಣ ಜಮೆಯಾಗುವಂತೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಕಳೆದ ವರ್ಷದ ಅತಿವೃಷ್ಟಿ ಹಾಗೂ ಭಾರಿ ಮಳೆಯಿಂದ ಕಮಲನಗರ ತಾಲ್ಲೂಕಿನ ಅನೇಕ ರೈತರ ಬೆಳೆಗಳು ಹಾನಿಗೊಳಗಾಗಿ ದೊಡ್ಡ ಪ್ರಮಾಣದ ನಷ್ಟ ಉಂಟಾಗಿದೆ. ಬೆಳೆ ಹಾನಿಯಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ಸಾಲದ ಹೊರೆ, ಕುಟುಂಬ ನಿರ್ವಹಣೆ ಹಾಗೂ ಕೃಷಿ ಚಟುವಟಿಕೆಗಳನ್ನು ಮುಂದುವರಿಸಲು ತೊಂದರೆ ಅನುಭವಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಬೆಳೆ ವಿಮೆ ಪರಿಹಾರದ ಹಣ ಸಿಗದ ಕಾರಣ ಮುಂಗಾರು ಹಂಗಾಮಿನ ಬಿತ್ತನೆ, ಬೀಜ, ರಸಗೊಬ್ಬರ ಹಾಗೂ ಕೃಷಿ ಕಾರ್ಮಿಕರ ವೆಚ್ಚ ಭರಿಸುವುದಕ್ಕೂ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪರಿಹಾರ ಧನ ಬಿಡುಗಡೆ ವಿಳಂಬವಾಗುತ್ತಿರುವುದು ರೈತರ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತಿದೆ ಎಂದು ಅವರು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಇಲಾಖೆಯ ಅಧಿಕಾರಿಗಳು, ರಾಜ್ಯಾದ್ಯಂತ ಹಂತ ಹಂತವಾಗಿ ಪರಿಹಾರದ ಹಣ ಬಿಡುಗಡೆ ಮಾಡಲಾಗುತ್ತಿದೆ. ಕಮಲನಗರ ತಾಲ್ಲೂಕಿನ ಅರ್ಹ ರೈತರ ಖಾತೆಗಳಿಗೆ ಜುಲೈ ಅಂತ್ಯದೊಳಗೆ ಬೆಳೆ ವಿಮೆ ಪರಿಹಾರದ ಹಣ ಜಮೆಯಾಗುವಂತೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ನಮ್ಮ ಭಾಗದ ರೈತರಿಗೆ ಯಾವುದೇ ರೀತಿಯ ಅನ್ಯಾಯವಾಗಬಾರದು. ಬೆಳೆ ಹಾನಿಗೊಳಗಾದ ಎಲ್ಲ ಅರ್ಹ ರೈತರಿಗೆ ಪರಿಹಾರದ ಹಣ ತಲುಪಲೇಬೇಕು. ಜುಲೈ ಅಂತ್ಯದೊಳಗೆ ಹಣ ಜಮೆಯಾಗದಿದ್ದರೆ ವಿಷಯವನ್ನು ಮತ್ತೊಮ್ಮೆ ಸರ್ಕಾರ ಹಾಗೂ ಸಂಬಂಧಿತ ಇಲಾಖೆಯ ಉನ್ನತ ಅಧಿಕಾರಿಗಳ ಗಮನಕ್ಕೆ ತಂದು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಪ್ರಭು ಚವ್ಹಾಣ್ ಎಚ್ಚರಿಸಿದರು.



