ಜುಲೈ 6ರಂದು ಕಲಬುರಗಿಯಲ್ಲಿ 5ನೇ ವಿಭಾಗೀಯ ಮಟ್ಟದ ಕಾನೂನು ಕಾರ್ಯಗಾರ; 1,000ಕ್ಕೂ ಅಧಿಕ ವಿದ್ಯಾರ್ಥಿಗಳ ಭಾಗಿ
ಕಾಲೇಜುಗಳಲ್ಲಿ ಕಾನೂನು ನೆರವು ಕೇಂದ್ರಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶ; ‘ತರಗತಿಯಿಂದ ನ್ಯಾಯಾಲಯದವರೆಗೆ’ ವಿಷಯದಡಿ ಕಾರ್ಯಾಗಾರ

ಕಲಬುರಗಿ, ಜುಲೈ 4: ಕಾಲೇಜುಗಳಲ್ಲಿ ಕಾನೂನು ನೆರವು ಕೇಂದ್ರಗಳನ್ನು ಸ್ಥಾಪಿಸಿ, ವಿದ್ಯಾರ್ಥಿಗಳ ಮೂಲಕ ಸಾರ್ವಜನಿಕರಿಗೆ ಉಚಿತ ಕಾನೂನು ಸೇವೆ ಮತ್ತು ನೆರವು ಒದಗಿಸುವ ಜಾಗೃತಿ ಮೂಡಿಸುವ ಉದ್ದೇಶದಿಂದ ಜುಲೈ 6ರಂದು ಕಲಬುರಗಿಯಲ್ಲಿ 5ನೇ ವಿಭಾಗೀಯ ಮಟ್ಟದ ಕಾನೂನು ಕಾರ್ಯಗಾರ ಆಯೋಜಿಸಲಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ ನವಲೆ ತಿಳಿಸಿದ್ದಾರೆ.
ನಗರದ ಜಿಲ್ಲಾ ನ್ಯಾಯಾಲಯದ ಆವರಣದ ಎಡಿಆರ್ ಕಟ್ಟಡದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಹಾಗೂ ವಿಭಾಗದ 25 ಕಾನೂನು ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ “ತರಗತಿಯಿಂದ ನ್ಯಾಯಾಲಯದವರೆಗೆ: ಸಾಮಾಜಿಕ ನ್ಯಾಯದ ವೇಗವರ್ಧಕರಾಗಿ ಕಾನೂನು ವಿದ್ಯಾರ್ಥಿಗಳು” (From Classroom to Courtroom: Law Students as Catalysts for Social Justice) ಎಂಬ ವಿಷಯದಡಿ ಈ ವಿಭಾಗೀಯ ಕಾರ್ಯಾಗಾರ ನಡೆಯಲಿದೆ ಎಂದು ತಿಳಿಸಿದರು.
ನಗರದ ಪಿ.ಡಿ.ಎ. ಎಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ಜುಲೈ 6ರಂದು ಬೆಳಿಗ್ಗೆ 9.30 ಗಂಟೆಗೆ ಕಾರ್ಯಕ್ರಮ ಉದ್ಘಾಟನೆಯಾಗಲಿದೆ. ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ವಿಭು ಬಾಖ್ರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷೆ ನ್ಯಾಯಮೂರ್ತಿ ಅನು ಶಿವರಾಮನ್ ಉಪಸ್ಥಿತರಿರಲಿದ್ದಾರೆ. ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ಆರ್. ದೇವದಾಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಜಿ.ಎಲ್. ಲಕ್ಷ್ಮೀನಾರಾಯಣ, ಕರ್ನಾಟಕ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಎಂ. ಚಂದ್ರಶೇಖರ ರೆಡ್ಡಿ, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ. (ಡಾ.) ಸಿ. ಬಸವರಾಜು, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೆಚ್. ಶಶೀಧರ ಶೆಟ್ಟಿ, ಎಚ್ಕೆಇ ಸೊಸೈಟಿ ಅಧ್ಯಕ್ಷ ರಾಜಕುಮಾರ ಕಡಗಂಚಿ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ.
ಈ ಕಾರ್ಯಾಗಾರದಲ್ಲಿ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ ಹಾಗೂ ಗಂಗಾವತಿ ಭಾಗಗಳ 25 ಕಾನೂನು ಕಾಲೇಜುಗಳಿಂದ ಸುಮಾರು 1,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರು ಪಾಲ್ಗೊಳ್ಳಲಿದ್ದಾರೆ. ಪ್ರತಿ ಕಾಲೇಜಿನಿಂದ 40 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದ್ದು, ಈಗಾಗಲೇ ನೋಂದಾಯಿಸಿಕೊಂಡಿರುವ ವಿದ್ಯಾರ್ಥಿಗಳಿಗೆ ಕಾರ್ಯಕ್ರಮದ ದಿನ ಮರುನೋಂದಣಿ ಪ್ರಕ್ರಿಯೆ ನಡೆಯಲಿದೆ.
ಕಾರ್ಯಾಗಾರದಲ್ಲಿ ವಿವಿಧ ವಿಷಯಗಳ ಕುರಿತು ತಜ್ಞ ಸಂಪನ್ಮೂಲ ವ್ಯಕ್ತಿಗಳು ತಲಾ 45 ನಿಮಿಷಗಳ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಕಾನೂನು ಶಿಕ್ಷಣವನ್ನು ನ್ಯಾಯಾಲಯದ ಪ್ರಾಯೋಗಿಕ ಅನುಭವದೊಂದಿಗೆ ಹೇಗೆ ಜೋಡಿಸಬೇಕು ಹಾಗೂ ಸಾಮಾಜಿಕ ನ್ಯಾಯ ಸಾಧನೆಯಲ್ಲಿ ಕಾನೂನು ವಿದ್ಯಾರ್ಥಿಗಳ ಪಾತ್ರ ಏನಿರಬೇಕು ಎಂಬ ವಿಷಯಗಳ ಕುರಿತು ಮಾರ್ಗದರ್ಶನ ನೀಡಲಾಗುತ್ತದೆ.
ಇದಲ್ಲದೆ, ಕಾರ್ಯಕ್ರಮದ ಕೊನೆಯಲ್ಲಿ ಹಿರಿಯ ನ್ಯಾಯಮೂರ್ತಿಗಳು ಹಾಗೂ ಕಾನೂನು ತಜ್ಞರೊಂದಿಗೆ ವಿದ್ಯಾರ್ಥಿಗಳ ಪ್ರಶ್ನೋತ್ತರ ಮತ್ತು ಸಂವಾದ ಏರ್ಪಡಿಸಲಾಗಿದ್ದು, ಕಾನೂನು ಸಂಬಂಧಿತ ಸಂಶಯಗಳಿಗೆ ನೇರ ಉತ್ತರ ಪಡೆಯುವ ಅವಕಾಶವೂ ಕಲ್ಪಿಸಲಾಗಿದೆ ಎಂದು ಶ್ರೀನಿವಾಸ ನವಲೆ ತಿಳಿಸಿದರು.



