ಜಿಲ್ಲಾಸುದ್ದಿ

ಮಳೆ ಕೊರತೆಯಿಂದ ಕಾರಂಜಾ ಜಲಾಶಯ ಖಾಲಿಯಾಗುವ ಆತಂಕ; ರೈತರಲ್ಲಿ ಚಿಂತೆ

ಜೀವಕಳೆ ಕಳೆದುಕೊಂಡ ಜಲಾಶಯ; ಕುಡಿಯುವ ನೀರಿಗೆ ಆದ್ಯತೆ ನೀಡಿ ಕಾಲುವೆಗೆ ನೀರು ಸ್ಥಗಿತ

ಬೀದರ್, ಜು.11: ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಜಿಲ್ಲೆಯ ಪ್ರಮುಖ ನೀರಿನ ಮೂಲವಾದ ಕಾರಂಜಾ ಜಲಾಶಯದಲ್ಲಿ ನೀರಿನ ಮಟ್ಟ ಆತಂಕಕಾರಿಯಾಗಿ ಕುಸಿದಿದ್ದು, ರೈತರಲ್ಲಿ ತೀವ್ರ ಚಿಂತೆ ಮೂಡಿಸಿದೆ.

ಭಾಲ್ಕಿ ತಾಲ್ಲೂಕಿನ ಹಾಲಹಳ್ಳಿ ಗ್ರಾಮದ ಸಮೀಪದ ಕಾರಂಜಾ ಜಲಾಶಯಕ್ಕೆ ಒಳಹರಿವು ಸಂಪೂರ್ಣ ಸ್ಥಗಿತಗೊಂಡಿದೆ. 7.65 ಟಿಎಂಸಿ ಸಂಗ್ರಹ ಸಾಮರ್ಥ್ಯ ಹೊಂದಿರುವ ಜಲಾಶಯದಲ್ಲಿ ಪ್ರಸ್ತುತ 4.5 ಟಿಎಂಸಿ ನೀರು ಮಾತ್ರ ಉಳಿದಿದ್ದು, ಅದರಲ್ಲಿ ಸುಮಾರು 1 ಟಿಎಂಸಿ ಡೆಡ್ ಸ್ಟೋರೇಜ್ ಆಗಿದೆ. ಬಳಕೆಗೆ ಲಭ್ಯವಿರುವುದು ಕೇವಲ 3 ಟಿಎಂಸಿ ನೀರಷ್ಟೇ. ಇದೇ ಪರಿಸ್ಥಿತಿ ಮುಂದುವರಿದು ಈ ತಿಂಗಳಲ್ಲಿಯೂ ಸಮರ್ಪಕ ಮಳೆಯಾಗದಿದ್ದರೆ ಜಲಾಶಯ ಬಹುತೇಕ ಖಾಲಿಯಾಗುವ ಸಾಧ್ಯತೆ ಇದೆ.

ಪ್ರಸ್ತುತ ಜಿಲ್ಲೆಯ ಜನರಿಗೆ ಕುಡಿಯುವ ನೀರಿನ ಪೂರೈಕೆಗೆ ಆದ್ಯತೆ ನೀಡಲಾಗುತ್ತಿದ್ದು, ಸರ್ಕಾರದ ನಿರ್ದೇಶನದಂತೆ ಕಾರಂಜಾ ಜಲಾಶಯದಿಂದ ಕಾಲುವೆಗಳಿಗೆ ನೀರು ಬಿಡುವುದನ್ನು ಸ್ಥಗಿತಗೊಳಿಸಲಾಗಿದೆ. ಇದರಿಂದ ಜಲಾಶಯದ ನೀರನ್ನು ನಂಬಿ ಬೆಳೆ ಬೆಳೆದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕಾರಂಜಾ ಜಲಾಶಯದ ನೀರಿನಿಂದ ಭಾಲ್ಕಿ ತಾಲ್ಲೂಕಿನ ಸುಮಾರು 29 ಸಾವಿರ ಹೆಕ್ಟೇರ್ ಪ್ರದೇಶದ ಕೃಷಿ ಭೂಮಿಗೆ ನೀರಾವರಿ ಒದಗಿಸಲಾಗುತ್ತಿತ್ತು. ಆದರೆ ಮಳೆಯ ಕೊರತೆಯಿಂದ ನೀರಾವರಿ ಸಂಪೂರ್ಣ ಸ್ಥಗಿತಗೊಂಡಿದ್ದು, ಬೆಳೆಗಳು ಒಣಗುವ ಭೀತಿ ಎದುರಾಗಿದೆ.

ಬೀದರ್ ನಗರ, ಚಿಟಗುಪ್ಪ, ಹುಮನಾಬಾದ್ ಸೇರಿದಂತೆ ಹಲವು ಪಟ್ಟಣಗಳು ಹಾಗೂ ಗ್ರಾಮೀಣ ಪ್ರದೇಶಗಳಿಗೆ ಇದೇ ಜಲಾಶಯದಿಂದ ಕುಡಿಯುವ ನೀರು ಪೂರೈಕೆಯಾಗುತ್ತಿದೆ. ಭವಿಷ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ನೀರಾವರಿಗೆ ನೀರು ಬಿಡುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button