ಗೃಹ ಸಚಿವ ಖರ್ಗೆ ಟೀಕಿಸಿದ ಮಣಿಕಂಠಗೆ ಲಚ್ಚಪ್ಪ ಜಮಾದಾರ್ ತರಾಟೆ..!
ಕಲಬುರ್ಗಿಯಲ್ಲಿ ಜುಲೈ ೭ರಂದು ಆರ್‌ಎಸ್‌ಎಸ್ ಹಠಾವ್, ದೇಶ್ ಬಚಾವ್ ಚಳುವಳಿ

ಕಲಬುರ್ಗಿ, ಜು.೧- ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಕ್ರಮವನ್ನು ಬೆಂಬಲಿಸಿ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡತ್ವದಲ್ಲಿ ಜುಲೈ ೭ರಂದು ಆರ್‌ಎಸ್‌ಎಸ್ ಹಠಾವ್ ದೇಶ್ ಬಚಾವ್ ಎಂಬ ಘೋಷಗಳೊಂದಿಗೆ ನಗರದ ತಿಮ್ಮಾಪೂರ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಕೋಲಿ, ಕಬ್ಬಲಿಗ ಎಸ್‌ಟಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಲಚ್ಚಪ್ಪ ಎಸ್. ಜಮಾದಾರ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್‌ಎಸ್‌ಎಸ್ ನೊಂದಣಿ ಕುರಿತು ಮೋಹನ್ ಭಾಗವತ್ ಅವರಿಗೆ ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆಯವರು ಪತ್ರ ಬರೆದರೆ ಅದಕ್ಕೆ ಸರಿಯಾಘಿ ಉತ್ತರಿಸದೇ ಇರುವುದು ಖಂಡನಾರ್ಹ. ನಾವೇ ದೇಶ ಭಕ್ತರೆಂದು ದೇಶದಲ್ಲಿ ಮತ್ತು ರಾಜ್ಯದಲ್ಲಿ ಕೋಮು ಗಲಬೆ ಹಬ್ಬಿಸುತ್ತಿರುವ ಆರ್‌ಎಸ್‌ಎಸ್‌ನ ಮುಖ್ಯಸ್ಥನೆಂದು ಮುಖವಾಡಿ ಹಾಕಿ ದೇಶದಲ್ಲಿ ಅಶಾಂತಿ ವಾತಾವರಣ ನಿರ್ಮಾಣ ಮಾಡುತ್ತಿರುವ ಮೋಹನ್ ಭಾಗವತಗೆ ಈ ದೇಶದ ಕಾನೂನಿನ ಬಗ್ಗೆ ಸಾಮಾನ್ಯ ಜ್ಞಾನವು ಇಲ್ಲವೇ ಇವರಿಗೆ ಎಂದು ಗೊತ್ತಾಗುತ್ತದೆ, ತಕ್ಷಣವೇ ಆರ್‌ಎಸ್‌ಎಸ್ ನೊಂದಣಿ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಸಂಘ-ಸಂಸ್ಥೆಗಳು, ಸರ್ಕಾರೇತರ ಸಂಸ್ಥೆಗಳು ಟ್ರಸ್ಟ್ಗಳು ಹಾಗೂ ಸ್ವಸಹಾಯ ಸಂಘಗಳು ಸೇರಿದಂತೆ ಸಾರ್ವಜನಿಕರಿಂದ ದೇಣಿಗೆ ಅಥವಾ ಆರ್ಥಿಕ ಸಹಾಯ ಪಡೆಯುವ ಬಹುತೇಕ ಸಂಸ್ಥೆಗಳು ಕಾನೂನಿನ ಪ್ರಕಾರ ನೋಂದಣಿ ಹಾಗೂ ಹಣಕಾಸು ಲೆಕ್ಕಪತ್ರ ನಿರ್ವಹಣೆಗೆ ಒಳಪಡುತ್ತವೆ. ಆದರೆ ರಾಷ್ಟ್ರೀಯ ಸ್ವಯಂಸೇವಕ ಸಂಘ ನೋಂದಣಿಯಿಂದ ಹೊರಗಿರುವುದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹಲವಾರು ಪ್ರಶ್ನೆಗಳು ಉದ್ಭವಿಸುತ್ತಿವೆ. ಸಾರ್ವಜನಿಕರಿಂದ ದೇಣಿಗೆ ಪಡೆಯುವ ಅಥವಾ ಸಾರ್ವಜನಿಕ ಜೀವನದ ಮೇಲೆ ಪ್ರಭಾವ ಬೀರುವ ಯಾವುದೇ ಸಂಸ್ಥೆಯು ತನ್ನ ಆದಾಯ, ವೆಚ್ಚ, ದೇಣಿಗೆ ಮೂಲಗಳು ಹಾಗೂ ಲೆಕ್ಕಪರಿಶೋಧನಾ ವಿವರಗಳನ್ನು ಪಾರದರ್ಶಕವಾಗಿ ಪ್ರಕಟಿಸಬೇಕೆಂಬುದು ಪ್ರಜಾಪ್ರಭುತ್ವದ ಮೂಲಭೂತ ಆಶಯವಾಗಿದೆ. ಈ ಹಿನ್ನೆಲೆಯಲ್ಲಿ ದೇಶದ ಎಲ್ಲ ಸಂಘ-ಸಂಸ್ಥೆಗಳಿಗೆ ಅನ್ವಯವಾಗುವ ನಿಯಮಗಳು ಮತ್ತು ಪಾರದರ್ಶಕತಾ ಮಾನದಂಡಗಳು ಒಂದೇ ರೀತಿಯಲ್ಲಿ ಜಾರಿಯಾಗಬೇಕು ಎಂದು ಅವರು ಹೇಳಿದರು.
ಇತ್ತೀಚೆಗೆ ಅಯೋಧ್ಯೆಯ ರಾಮಮಂದಿರದಲ್ಲಿ ಭಕ್ತರ ದೇಣಿಗೆ ಹಣದ ದುರ್ಬಳಕೆ ಕುರಿತು ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿವೆ. ಈ ಪ್ರಕರಣದಲ್ಲಿ ಸಂಬAಧಪಟ್ಟ ತನಿಖೆಯನ್ನು ಸಂಪೂರ್ಣ ಪಾರದರ್ಶಕವಾಗಿ ನಡೆಸಿ, ತಪ್ಪಿತಸ್ಥರು ಯಾರು ಎಂಬುದನ್ನು ಕಾನೂನಿನ ಪ್ರಕಾರ ನಿರ್ಧರಿಸಿ, ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ ವಿಶೇಷ ವಿನಾಯಿತಿ ನೀಡದೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದೇಶದ ಎಲ್ಲ ಸಂಘ-ಸಂಸ್ಥೆಗಳು, ಟ್ರಸ್ಟ್ಗಳು ಹಾಗೂ ಸಾರ್ವಜನಿಕ ದೇಣಿಗೆ ಸ್ವೀಕರಿಸುವ ಸಂಘಟನೆಗಳಿಗೆ ಒಂದೇ ರೀತಿಯ ನೋಂದಣಿ, ಲೆಕ್ಕಪರಿಶೋಧನೆ ಮತ್ತು ಹಣಕಾಸು ಬಹಿರಂಗಪಡಿಸುವ ನಿಯಮಗಳನ್ನು ಕಡ್ಡಾಯಗೊಳಿಸುವ ಕುರಿತು ಚಿಂತನೆ ನಡೆಸಬೇಕು ಎಂದು ಆಗ್ರಹಿಸಿದ ಅವರು, ರಾಷ್ಟ್ರಪತಿಗಳು ಈ ಸಂಘ ನೊಂದಣಿ ಮಡಿಕೊಳ್ಳದಿದ್ದರೆ, ಬ್ಯಾನ್ ಮಾಡಬೇಕೆಂದು ಭಾರತ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಹಾಗೂ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆರ್‌ಎಸ್‌ಎಸ್ ಬ್ಯಾನ್ ಮಾಡಬೇಕು ನೊಂದಣಿ ಇಲ್ಲದೇ ಆರ್‌ಎಸ್‌ಎಸ್ ರಾಜ್ಯದಲ್ಲಿ ತನ್ನ ಚಟುವಟಿಕೆ ಮುಂದುವರೆಯಿಸಿದರೆ ಅವರ ಮೇಲೆ ದೇಶದ್ರೋಹಿ ಕೇಸ್ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಉಡುಪಿ ಮಠದ ಪೇಜಾವರ ಶ್ರೀಗಳು ಆರ್‌ಎಸ್‌ಎಸ್ ನೊಂದಣಿ ಮಾಡಿಕೊಂಡರೆ ಒಳ್ಳೆಯದು ಇಲ್ಲದಿದ್ದರೆ, ಇದಕ್ಕೆ ಕೆಟ್ಟ ಹೆಸರು ಬರುತ್ತದೆ ಎಂದು ಹೇಳಿಕೆ ನೀಡಿದ್ದು ಸ್ವಾಗತಾರ್ಹ ಎಂದು ಹೇಳಿದ ಅವರು, ಅಂದಿನ ಪ್ರತಿಭಟನೆಯಲ್ಲಿ ಸಮಾಜ ಚಿಂತಕರು, ಅಹಿಂದ್ ಪ್ರಮುಖ ನಾಯಕರುಗಳೊಂದಿಗೆ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಬಾಲಿಶ ಎಂದು ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ಅವರು ಟೀಕಿಸಿದ್ದಕ್ಕೆ ಆಕ್ಷೇಪಿಸಿದ ಲಚ್ಚಪ್ಪ ಜಮಾದಾರ್ ಅವರು, ಪ್ರಿಯಾಂಕ್ ಖರ್ಗೆಯವರು ರಾಜ್ಯದ ಗೃಹ ಸಚಿವರು. ಅವರ ಕುರಿತು ಅಕ್ಕಿ ಕಳ್ಳ, ಹಾಲಿನ ಪೌಡರ್ ಕಳ್ಳ ಮಣಿಕಂಠ ರಾಠೋಡ್ ಟೀಕಿಸುವುದಕ್ಕೆ ಯಾವುದೇ ರೀತಿಯಲ್ಲಿ ನೈತಿಕ ಹಕ್ಕಿಲ್ಲ. ಮಣಿಕಂಠ ವಿರುದ್ಧ ಈಗಾಗಲೇ ಅವರ ದುರ್ವರ್ತನೆಗೆ ಅನೇಕ ಪ್ರಕರಣಗಳು ದಾಖಲಾಗಿವೆ. ಆದಾಗ್ಯೂ, ಇನ್ನೂ ಬುದ್ದಿ ಬಂದಿಲ್ಲ. ನೂರಾರು ಇಲಿಗಳನ್ನು ತಿಂದ ಬೆಕ್ಕು ಕಾಶಿಗೆ ಹೋದ ರೀತಿಯಲ್ಲಿ ಹಲವಾರು ಪ್ರಕರಣಗಳನ್ನು ಹೊಂದಿರುವ ಮಣಿಕಂಠ ರಾಠೋಡ್ ರಾಜ್ಯದ ಗೃಹ ಸಚಿವರನ್ನು ಟೀಕಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಸುದ್ದಿಗೋಷ್ಠಿಯಲ್ಲಿ ಭೀಮಶಾ ಖನ್ನಾ, ದೇವಿಂದ್ರ ಜಮಾದಾರ್, ಗೋವಿಂದ್ ಯಾದವ್, ಅಮಬಾರಾಯ್ ಜವಳಗಾ, ಸಿದ್ದಪ್ಪ ಪೂಜಾರಿ ಹಾಗರಗಾ, ಪರಮೇಶ್ವರ್ ಅಷ್ಟಂದ್, ಶಿವರಾಜ್ ಹಿಂಜಗೇರಿ, ಉಮೇಶ್ ಕುರಿಕೋಟಾ, ಯಲ್ಲಪ್ಪ ಯಾದವ್, ಅರುಣಕುಮಾರ್ ಇನಾಮದಾರ್, ಅಭಿಷೇಕ್ ಉಪಾಧ್ಯಾಯ, ಮಡಿವಾಳಪ್ಪ ಕಟ್ಟಿಮನಿ ಮುಂತಾದವರು ಉಪಸ್ಥಿತರಿದ್ದರು.



