
ಕಲಬುರಗಿ, ಆ.3: ಒಳಮೀಸಲಾತಿ ಹಾಗೂ ರೋಸ್ಟರ್ ಪದ್ಧತಿಯಲ್ಲಿ ಅಗತ್ಯ ತಿದ್ದುಪಡಿಗಳನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ಬಂಜಾರಾ ಸಮುದಾಯದ ನಿಯೋಗ ತೆರಳಲು ನಿರ್ಧರಿಸಲಾಗಿದೆ.
ನಗರದ ಬಂಜಾರಾ ಭವನದಲ್ಲಿ ಜುಡಿಯೋ ಬಂಜಾರಾ ಫೌಂಡೇಶನ್ ಸಂಘದ ವತಿಯಿಂದ ಒಳಮೀಸಲಾತಿ ಹಾಗೂ ರೋಸ್ಟರ್ ಪದ್ಧತಿಗೆ ಸಂಬಂಧಿಸಿದ ವಿಷಯಗಳ ಕುರಿತು ಆಯೋಜಿಸಿದ್ದ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಯಿತು.
ಅನಿಲ್ ಮಹಾರಾಜ ಅವರ ದಿವ್ಯ ಸಾನ್ನಿಧ್ಯದಲ್ಲಿ ಹಾಗೂ ಮಾಜಿ ಸಚಿವ ರೇವು ನಾಯಕ್ ಬೆಳಮಗಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಸಮಾಜದ ಹಕ್ಕುಗಳ ರಕ್ಷಣೆಗೆ ಸಂಘಟಿತವಾಗಿ ಕಾರ್ಯನಿರ್ವಹಿಸುವುದು, ಒಳಮೀಸಲಾತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವುದು ಹಾಗೂ ರೋಸ್ಟರ್ ಪದ್ಧತಿಯಲ್ಲಿ ಅಗತ್ಯ ತಿದ್ದುಪಡಿಗಳನ್ನು ಜಾರಿಗೆ ತರಲು ಸರ್ಕಾರವನ್ನು ಒತ್ತಾಯಿಸುವ ಕುರಿತು ಚರ್ಚೆ ನಡೆಯಿತು.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಶೀಘ್ರದಲ್ಲೇ ಭೇಟಿ ಮಾಡಿ ಸಮುದಾಯದ ಬೇಡಿಕೆಗಳನ್ನು ಒಳಗೊಂಡ ಮನವಿ ಪತ್ರ ಸಲ್ಲಿಸಲು ಸಭೆಯಲ್ಲಿ ಸರ್ವಾನುಮತದಿಂದ ನಿರ್ಧರಿಸಲಾಯಿತು.
ಸಭೆಯಲ್ಲಿ ಮಾಜಿ ಸಂಸದ ಡಾ. ಉಮೇಶ್ ಜಾಧವ್, ವಕೀಲರಾದ ಖೇಮಸಿಂಗ್ ರಾಠೋಡ್ ಹಾಗೂ ವಿನೋದ್ ಚವಾಣ್, ಚಂದು ಜಾಧವ್, ಶಾಮರಾವ್ ಪವಾರ್, ರಾಜು ಪವಾರ್, ರವಿ ರಾಠೋಡ್, ಕೃಷ್ಣ ನಾಯಕ್ ಸೇರಿದಂತೆ ವಿವಿಧ ಬಂಜಾರಾ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸಮಾಜದ ಮುಖಂಡರು ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.



