ಗಣೇಶೋತ್ಸವ: ಕಟ್ಟುನಿಟ್ಟಿನ ನಿಯಮ ಪಾಲನೆಗೆ ಡಿಜೆ ಮಾಲೀಕರಿಗೆ ಪೊಲೀಸ್ ಆಯುಕ್ತರ ಸೂಚನೆ

ಕಲಬುರ್ಗಿ, ಸೆ.೧೦- ಮುಂಬರುವ ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ, ನಗರದಲ್ಲಿ ಶಾಂತಿ ಮತ್ತು ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ನಗರ ಪೊಲೀಸ್ ಆಯುಕ್ತಾಲಯದಲ್ಲಿ ಗುರುವಾರ ಡಿಜೆ ಹಾಗೂ ಸೌಂಡ್ ಸಿಸ್ಟಮ್ ಮಾಲೀಕರ ವಿಶೇಷ ಸಭೆ ಜರುಗಿತು. ಸಭೆಯಲ್ಲಿ ಸೌಂಡ್ ಸಿಸ್ಟಮ್ ಮಾಲೀಕರಿಗೆ ನಗರ ಪೋಲಿಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ., ಅವರು ಪ್ರಮುಖ ಸೂಚನೆಗಳನ್ನು ನೀಡಿದರು.
ಗಣೇಶ ಮೂರ್ತಿ ಪ್ರತಿಷ್ಠಾಪನೆ ಹಾಗೂ ವಿಸರ್ಜನೆ ಮೆರವಣಿಗೆಯ ಸಂದರ್ಭದಲ್ಲಿ ಯಾವುದೇ ಧರ್ಮ ಅಥವಾ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವಂತಹ ಅಥವಾ ಕೋಮು ಸೌಹಾರ್ದತೆಯನ್ನು ಕೆಡಿಸುವಂತಹ ಹಾಡುಗಳನ್ನು ಯಾವುದೇ ಕಾರಣಕ್ಕೂ ಹಾಕಬಾರದು. ಧ್ವನಿವರ್ಧಕಗಳನ್ನು ಸರ್ಕಾರ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ನಿಗದಿಪಡಿಸಿದ ಡೆಸಿಬಲ್ ಮಿತಿಯೊಳಗಡೆ ಮಾತ್ರ ಬಳಸಬೇಕು ಎಂದು ಅವರು ಸೂಚಿಸಿದರು.
ನಿಗದಿಪಡಿಸಿದ ಸಮಯದ ಒಳಗಾಗಿ ಮಾತ್ರ ಸೌಂಡ್ ಸಿಸ್ಟಮ್ಗಳನ್ನು ಬಳಸತಕ್ಕದ್ದು. ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ ಅವರು, ಹಬ್ಬವನ್ನು ಶಾಂತಿಯುತವಾಗಿ ಮತ್ತು ಸೌಹಾರ್ದಯುತವಾಗಿ ಆಚರಿಸಲು ಸಾರ್ವಜನಿಕರು ಹಾಗೂ ಧ್ವನಿವರ್ಧಕಗಳ ಮಾಲೀಕರು ಪೊಲೀಸ್ ಇಲಾಖೆಯೊಂದಿಗೆ ಸಂಪೂರ್ಣವಾಗಿ ಸಹಕರಿಸಬೇಕಾಗಿ ಕೋರಿದರು. ನಗರ ಪೋಲಿಸ್ ಉಪ ಆಯುಕ್ತೆ ಶ್ರೀಮತಿ ಶಾಲೂ ಅವರು ಉಪಸ್ಥಿತರಿದ್ದರು.



