ಜುಲೈ 16ರಂದು ಕಲಬುರಗಿಯಲ್ಲಿ ಪಂಡಿತ ಪುಟ್ಟರಾಜ ಗವಾಯಿಗಳ ಸ್ಮರಣಾರ್ಥ ವಿಶೇಷ ಕಾರ್ಯಕ್ರಮ
ಸಂಗೀತ, ಸಾಹಿತ್ಯ ಹಾಗೂ ಸಮಾಜಸೇವೆಗೆ ಗೌರವ; 31 ಗಣ್ಯ ಪ್ರವಚನಕಾರರಿಗೆ ‘ಪ್ರವಚನ ಪ್ರವೀಣ’ ಪ್ರಶಸ್ತಿ ಪ್ರದಾನ

ಕಲಬುರಗಿ, ಜುಲೈ 14: ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿಗಳ ಅಪೂರ್ವ ಸೇವೆ, ಸಂಗೀತ ಸಾಧನೆ ಹಾಗೂ ಸಮಾಜಮುಖಿ ಬದುಕನ್ನು ಸ್ಮರಿಸುವ ಉದ್ದೇಶದಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಶ್ರೀ ರಾಗ ಸಂಗಮ ಸೇವಾ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ‘ಪುಟ್ಟರಾಜ ಕೊಟ್ಟ ಜ್ಞಾನ – ಗಾನ, ಮಾನ, ದಾತ, ನಾದದ ನವನೀತ’ ವಿಶೇಷ ಕಾರ್ಯಕ್ರಮವನ್ನು ಜುಲೈ 16ರಂದು ಸಂಜೆ 4.45ಕ್ಕೆ ನಗರದ ಕನ್ನಡ ಭವನದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ಈ ಕುರಿತು ಮಾಹಿತಿ ನೀಡಿರುವ ಅವರು, ಪಂಡಿತ ಪುಟ್ಟರಾಜ ಗವಾಯಿಗಳು ಸಂಗೀತ ಕ್ಷೇತ್ರದ ಮಹಾನ್ ಸಾಧಕರಾಗಿದ್ದು, ಸಾವಿರಾರು ಅಂಧ, ಅನಾಥ ಹಾಗೂ ಅಂಗವಿಕಲ ಮಕ್ಕಳಿಗೆ ಶಿಕ್ಷಣ, ಆಶ್ರಯ ಮತ್ತು ಬದುಕಿನ ದಾರಿ ತೋರಿದ ಮಹಾನ್ ಸಮಾಜಸೇವಕರಾಗಿದ್ದರು ಎಂದು ಸ್ಮರಿಸಿದರು.
ಸಂಗೀತದ ಜೊತೆಗೆ ಕನ್ನಡ ಸಾಹಿತ್ಯಕ್ಕೂ ಅವರು ನೀಡಿದ ಕೊಡುಗೆ ಅಪಾರವಾಗಿದ್ದು, ಅವರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮವು ಚಿನ್ಮಯಗಿರಿ ಮಹಾಂತೇಶ್ವರ ಮಠದ ಶ್ರೀ ವೀರ ಮಹಾಂತ ಶಿವಾಚಾರ್ಯರ ದಿವ್ಯ ಸಾನ್ನಿಧ್ಯದಲ್ಲಿ ನಡೆಯಲಿದ್ದು, ಡಿಸಿಸಿ ಬ್ಯಾಂಕ್ ನಿರ್ದೇಶಕ ಗೌತಮ ವೈಜನಾಥ ಪಾಟೀಲ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಚನ್ನಮಲ್ಲಯ್ಯ ಹಿರೇಮಠ ಜೇವರ್ಗಿ, ಚಿಂತಕ ಡಿ.ಕೆ. ದವಲಸಾಬ್ ಕೊಡೇಕಲ್, ಸಂಗೀತ ಕಲಾವಿದ ಜಗದೀಶ್ ಶರಣರು, ಮಹಿಳಾ ಸಂಘಟಕಿ ಜಯಶ್ರೀ ಮುಚಳಂಬಿ ಹಾಗೂ ಶ್ರೀ ರಾಗ ಸಂಗಮ ಸೇವಾ ಟ್ರಸ್ಟ್ ಅಧ್ಯಕ್ಷೆ ಶ್ವೇತಾ ಆರ್. ಪಾಟೀಲ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಹಲವು ವರ್ಷಗಳಿಂದ ಆಧ್ಯಾತ್ಮಿಕ ಮೌಲ್ಯಗಳು, ಸಾಮಾಜಿಕ ಜಾಗೃತಿ ಹಾಗೂ ಸಾಂಸ್ಕೃತಿಕ ಅರಿವು ಮೂಡಿಸುತ್ತಿರುವ 31 ಹಿರಿಯ ಹಾಗೂ ಖ್ಯಾತ ಪ್ರವಚನಕಾರರಿಗೆ ‘ಪ್ರವಚನ ಪ್ರವೀಣ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.



