ಸಾಂಸ್ಕೃತಿಕಸಾಹಿತ್ಯ

ಕನಕದಾಸರಿಂದ ಸಮಾಜ ಶುದ್ಧೀಕರಣದ ಕೆಲಸ: ಪತ್ರಕರ್ತ ಶೇರಿಕಾರ್

ಜಾತಿ–ಮತದ ಸಂಕೋಲೆ ಕಳಚಿ ಸಮಾನತೆ ಸಾರಿದ ಕನಕದಾಸರ ಸಂದೇಶ ಇಂದಿಗೂ ಪ್ರಸ್ತುತ

ಚಿಂಚೋಳಿ, ಆ.8– ಸೇನಾಧಿಕಾರಿಯಾಗಿದ್ದ ಕನಕದಾಸರು ಯುದ್ಧದಲ್ಲಿ ಸಂಭವಿಸಿದ ಸಾವಿನ ನೋವಿನಿಂದ ವೈರಾಗ್ಯ ತಾಳಿ ಧರ್ಮಪ್ರಚಾರದಲ್ಲಿ ತೊಡಗಿಸಿಕೊಂಡು ಸಮಾಜ ಶುದ್ಧೀಕರಣದ ಮಹತ್ವದ ಕಾರ್ಯ ಮಾಡಿದರು ಎಂದು ಹಿರಿಯ ಪತ್ರಕರ್ತ ಜಗನ್ನಾಥ ಶೇರಿಕಾರ್ ಹೇಳಿದರು.

ಪಟ್ಟಣದ ಸರ್ಕಾರಿ ಪಿಯು ಕಾಲೇಜಿನಲ್ಲಿ ಕರ್ನಾಟಕ ಸರ್ಕಾರದ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸಾಗರದ ಕಲಾ ನಿಕೇತನ ಟ್ರಸ್ಟ್‌ ಜಂಟಿಯಾಗಿ ಆಯೋಜಿಸಿದ್ದ ಕನಕದರ್ಶನ ಕಾರ್ಯಕ್ರಮದಲ್ಲಿ ಶುಕ್ರವಾರ ವಿಶೇಷ ಉಪನ್ಯಾಸ ನೀಡಿದ ಅವರು, ಕನಕದಾಸರ ಜೀವನ ಜ್ಞಾನ, ಭಕ್ತಿ ಹಾಗೂ ವೈರಾಗ್ಯದ ಸಂಗಮವಾಗಿತ್ತು. ಪರಿಪೂರ್ಣ ವ್ಯಕ್ತಿತ್ವ ಹೊಂದಿದ್ದ ಅವರು ಸಾಮಾಜಿಕ ಪಿಡುಗುಗಳ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸಿ, ಜಾತಿ–ಮತದ ಸಂಕೋಲೆಗಳನ್ನು ಕಳಚಿ ಜೀವನದ ಸತ್ಯವನ್ನು ಬೋಧಿಸಿದರು ಎಂದರು.

ಕನಕದಾಸರು ಜೀವನವನ್ನು ಅರಿತುಕೊಂಡ ಮಹಾಜ್ಞಾನಿಯಾಗಿದ್ದರು. ತಮಗೆ ಸಿಕ್ಕ ಜ್ಞಾನವನ್ನು ಸಮಾಜಕ್ಕೆ ಧಾರೆ ಎರೆದು ಕನ್ನಡ ಸಾಹಿತ್ಯ ಲೋಕಕ್ಕೆ ಅಮೂಲ್ಯ ಕೃತಿಗಳನ್ನು ನೀಡುವ ಮೂಲಕ ಮುಕ್ತಿಮಾರ್ಗವನ್ನು ತೋರಿಸಿದರು. ಶ್ರೀಕೃಷ್ಣನ ದರ್ಶನಕ್ಕೆ ಅವಕಾಶ ಸಿಗದ ಸಂದರ್ಭದಲ್ಲಿ ತಮ್ಮ ಭಕ್ತಿಯ ಮೂಲಕ ಸಾಕ್ಷಾತ್ ಕೃಷ್ಣನನ್ನೇ ತಮ್ಮತ್ತ ತಿರುಗುವಂತೆ ಮಾಡಿದ ಭಕ್ತಶ್ರೇಷ್ಠರಾಗಿದ್ದರು ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ತಹಶೀಲ್ದಾರ್ ಸುಬಣ್ಣ ಜಮಖಂಡಿ, “ಕುಲ ಕುಲವೆಂದು ಹೊಡೆದಾಡದಿರಿ, ಕುಲದ ನೆಲೆ ನೀವೇನಾದರೂ ಬಲ್ಲಿರಾ” ಎಂಬ ಸಂದೇಶದ ಮೂಲಕ ಸಾಮಾಜಿಕ ತಾರತಮ್ಯ, ಅಂಧಾನುಕರಣೆ, ದಂಭಾಚಾರ ಹಾಗೂ ಮೌಢ್ಯತೆಯನ್ನು ಕಿತ್ತೊಗೆದು ಸಮಾನತೆಯ ಸಮಾಜ ನಿರ್ಮಾಣಕ್ಕೆ ಕನಕದಾಸರು ಶ್ರಮಿಸಿದರು. ಅವರ ಜೀವನ ಸಂದೇಶ ಇಂದಿಗೂ ಪ್ರಸ್ತುತವಾಗಿದೆ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಧೂಳಪ್ಪ ಮಾಳೇನೋರ್ ಮಾತನಾಡಿ, ಕನಕದಾಸರ ಜೀವನ ಹಾಗೂ ಆದರ್ಶಗಳನ್ನು ವಿದ್ಯಾರ್ಥಿಗಳು ಅರಿತುಕೊಂಡು ಸಮಾಜದಲ್ಲಿ ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಕರ್ನಾಟಕ ಪ್ರದೇಶ ಕುರುಬ ಸಂಘದ ತಾಲ್ಲೂಕು ಅಧ್ಯಕ್ಷ ಹಣಮಂತ ಪೂಜಾರಿ ಮಾತನಾಡಿದರು. ಪ್ರಾಂಶುಪಾಲ ಮಲ್ಲಿಕಾರ್ಜುನ ಪಾಲಾಮೂರ್ ಮಾತನಾಡಿ, ವೀರ ಕನಕದಾಸರು ವೈರಾಗ್ಯ ಹೊಂದಿ ಭಗವಂತನ ದಾಸರಾಗಿ ಮಾನವ ಜೀವನದ ಅಂತಿಮ ಸತ್ಯವನ್ನು ಅರಿತ ಪಂಡಿತೋತ್ತಮರಾಗಿದ್ದರು. ಅವರ ಭಕ್ತಿ ಹಾಗೂ ಸಂದೇಶ ಎಲ್ಲರಿಗೂ ಅನುಕರಣೀಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ಕಾಶೀನಾಥ ಧನ್ನಿ, ಉಪನ್ಯಾಸಕ ಹಣಮಂತ ಕೋರೆ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಬಸವರಾಜ ಶಿಣ್ಣೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಚಕ್ರವರ್ತಿ ಸ್ವಾಗತಿಸಿದರು. ಮಧುಕರ ಕಾರ್ಯಕ್ರಮ ನಿರೂಪಿಸಿದರು. ಅಮಿತಕುಮಾರ್ ವಂದಿಸಿದರು.

Related Articles

Leave a Reply

Your email address will not be published. Required fields are marked *

Back to top button