ಕಲ್ಯಾಣ ಕರ್ನಾಟಕ

ಬರಪೀಡಿತ ಜಿಲ್ಲೆಯಾಗಿ ಘೋಷಿಸಿ, ವಿಶೇಷ ಪ್ಯಾಕೇಜ್ ಬಿಡುಗಡೆಗೆ ಆಗ್ರಹ

ಕಲಬುರಗಿ, ಸೆ. 8: ಜಿಲ್ಲೆಯಲ್ಲಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಶೇ.60ಕ್ಕೂ ಅಧಿಕ ಪ್ರದೇಶದಲ್ಲಿ ಬಿತ್ತನೆಯಾದ ಬೆಳೆಗಳು ನಷ್ಟವಾಗಿದ್ದು, ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಕಲಬುರಗಿ ಜಿಲ್ಲೆಯ ಎಲ್ಲ ತಾಲ್ಲೂಕುಗಳನ್ನೂ ತಕ್ಷಣ ಬರಪೀಡಿತವೆಂದು ಘೋಷಿಸಿ, ವಿಶೇಷ ಪರಿಹಾರ ಪ್ಯಾಕೇಜ್ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಸೋಶಿಯಲಿಸ್ಟ್ ಯುನಿಟಿ ಸೆಂಟರ್ ಆಫ್ ಇಂಡಿಯಾ (ಕಮ್ಯುನಿಸ್ಟ್) ಪಕ್ಷದ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು.

ಪಕ್ಷದ ಮುಖಂಡ ರಮಣ ಇಬ್ರಾಹಿಂಪುರ ಮಾತನಾಡಿ, ರಾಜ್ಯ ಸರ್ಕಾರ ಜಿಲ್ಲೆಯ ಆರು ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಗುರುತಿಸಿ ಗ್ರೌಂಡ್ ಸರ್ವೆಗೆ ಆದೇಶಿಸಿರುವುದು ಸ್ವಾಗತಾರ್ಹ. ಆದರೆ ಜಿಲ್ಲೆಯ ಎಲ್ಲ ತಾಲ್ಲೂಕುಗಳೂ ಬರದ ಹೊಡೆತಕ್ಕೆ ಸಿಲುಕಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಕಲಬುರಗಿ ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಶೇ.60ರಿಂದ 65ರಷ್ಟು ಮಳೆ ಕೊರತೆಯಾಗಿದೆ. ಜಿಲ್ಲೆಯ ಸುಮಾರು 8.5 ಲಕ್ಷ ಹೆಕ್ಟೇರ್ ಕೃಷಿಯೋಗ್ಯ ಭೂಮಿಯಲ್ಲಿ ಬಿತ್ತನೆಯಾದ ಬೆಳೆಗಳು ಒಣಗಿ ಹೋಗುತ್ತಿವೆ. ನಿರಂತರ ಅತಿವೃಷ್ಟಿ ಹಾಗೂ ಅನಾವೃಷ್ಟಿಯಿಂದ ರೈತರ ಪರಿಸ್ಥಿತಿ ಹದಗೆಟ್ಟಿದ್ದು, ನೀರಾವರಿ ವೈಫಲ್ಯ ಮತ್ತು ಜಿಲ್ಲಾಡಳಿತದ ನಿರ್ಲಕ್ಷ್ಯವೂ ಸಂಕಷ್ಟಕ್ಕೆ ಕಾರಣವಾಗಿದೆ ಎಂದು ಆರೋಪಿಸಿದರು.

ಕಾಮ್ರೇಡ್ ಎಸ್.ಎಂ. ಶರ್ಮಾ ಮಾತನಾಡಿ, ಜಿಲ್ಲೆಯಲ್ಲಿ ಬಿತ್ತನೆ ಕುಂಠಿತವಾಗಿದ್ದು ಕೋಟ್ಯಂತರ ರೂಪಾಯಿ ಮೌಲ್ಯದ ಬೆಳೆ ನಷ್ಟವಾಗಿದೆ. ‘ತೊಗರಿ ಕಣಜ’ ಎಂದೇ ಹೆಸರಾಗಿರುವ ಕಲಬುರಗಿಯಲ್ಲಿ ಸುಮಾರು 4.8 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆಯ ಗುರಿ ಹೊಂದಲಾಗಿತ್ತು. ಆದರೆ ಮಳೆ ಕೊರತೆಯಿಂದ ಶೇ.40ರಷ್ಟು ಪ್ರದೇಶದಲ್ಲೂ ಸಮರ್ಪಕ ಬಿತ್ತನೆಯಾಗಿಲ್ಲ. ಬಿತ್ತನೆಯಾದ ಪ್ರದೇಶದಲ್ಲಿಯೂ ತೇವಾಂಶದ ಕೊರತೆಯಿಂದ ಶೇ.65ಕ್ಕೂ ಹೆಚ್ಚು ತೊಗರಿ ಬೆಳೆ ಒಣಗಿದೆ ಎಂದು ತಿಳಿಸಿದರು.

ಆರಂಭಿಕ ಮಳೆಯನ್ನು ನಂಬಿ ಬಿತ್ತನೆ ಮಾಡಿದ್ದ ಹೆಸರು ಹಾಗೂ ಉದ್ದು ಬೆಳೆಗಳು ಶೇ.80ರಷ್ಟು ಒಣಗಿದ್ದು, ರೈತರಿಗೆ ಪ್ರತಿ ಎಕರೆಗೆ ₹12 ಸಾವಿರದಿಂದ ₹15 ಸಾವಿರದವರೆಗೆ ನೇರ ಹೂಡಿಕೆ ನಷ್ಟವಾಗಿದೆ. ಜಿಲ್ಲೆಯ ಕೃಷಿ ವಲಯದಲ್ಲಿ ಈಗಾಗಲೇ ಸುಮಾರು ₹800 ಕೋಟಿಯಿಂದ ₹1,000 ಕೋಟಿಯಷ್ಟು ಬೆಳೆ ನಷ್ಟ ಸಂಭವಿಸಿರುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.

ರೈತರಿಗೆ ₹50 ಸಾವಿರ ಪರಿಹಾರಕ್ಕೆ ಆಗ್ರಹ

ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಿ ಪರಿಹಾರ ಕಾಮಗಾರಿಗಳನ್ನು ಆರಂಭಿಸಬೇಕು. ಬೆಳೆ ನಷ್ಟಕ್ಕೊಳಗಾದ ರೈತರಿಗೆ ಪ್ರತಿ ಎಕರೆಗೆ ₹50 ಸಾವಿರ ಪರಿಹಾರ ನೀಡಬೇಕು. ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆಯಡಿ ಬೆಳೆ ವಿಮೆ ಮಾಡಿಸಿರುವ ಎಲ್ಲ ರೈತರಿಗೆ ಕೂಡಲೇ ಸಂಪೂರ್ಣ ಬೆಳೆ ನಷ್ಟ ಪರಿಹಾರ ಪಾವತಿಸಲು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ರಾಷ್ಟ್ರೀಕೃತ, ಗ್ರಾಮೀಣ ಹಾಗೂ ಸಹಕಾರಿ ಬ್ಯಾಂಕ್‌ಗಳಲ್ಲಿರುವ ರೈತರ ಸಾಲವನ್ನು ಪ್ರಸಕ್ತ ವರ್ಷಕ್ಕೆ ಸಂಪೂರ್ಣ ಮನ್ನಾ ಮಾಡಬೇಕು. ಮುಂದಿನ ಹಿಂಗಾರು ಹಂಗಾಮಿಗೆ ರೈತರು ಸಿದ್ಧರಾಗಲು ಪ್ರತಿ ಎಕರೆಗೆ ₹20 ಸಾವಿರದಂತೆ ಶೂನ್ಯ ಬಡ್ಡಿದರದಲ್ಲಿ ಹೊಸ ಸಾಲ ನೀಡಬೇಕು. ಬ್ಯಾಂಕ್‌ಗಳಿಂದ ರೈತರಿಗೆ ನೀಡಲಾಗುತ್ತಿರುವ ನೋಟಿಸ್‌ಗಳನ್ನು ತಡೆಹಿಡಿದು, ಬಲವಂತದ ಸಾಲ ವಸೂಲಾತಿಯನ್ನು ಅಪರಾಧವೆಂದು ಪರಿಗಣಿಸಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಕೆಲಸದ ದಿನಗಳನ್ನು ಕನಿಷ್ಠ 200ಕ್ಕೆ ಹೆಚ್ಚಿಸಿ, ದಿನಗೂಲಿಯನ್ನು ₹600ಕ್ಕೆ ಏರಿಸಬೇಕು. ಜಿಲ್ಲೆಯ ಪ್ರತಿ ಹೋಬಳಿ ಮಟ್ಟದಲ್ಲಿ ತಕ್ಷಣವೇ ಗೋಮೇವು ಬ್ಯಾಂಕ್‌ಗಳನ್ನು ತೆರೆದು ರೈತರಿಗೆ ಉಚಿತವಾಗಿ ಮೇವು ವಿತರಿಸಬೇಕು. ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಟ್ಯಾಂಕರ್‌ಗಳ ಮೂಲಕ ಪ್ರತಿದಿನ ಉಚಿತ ಕುಡಿಯುವ ನೀರು ಪೂರೈಸಬೇಕು ಎಂದು ಮನವಿ ಮಾಡಿದರು.

ಕೃಷಿ ಬಿಕ್ಕಟ್ಟು ಮತ್ತು ಸಾಲದ ಸುಳಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿರುವ ರೈತ ಕುಟುಂಬಗಳಿಗೆ ತಕ್ಷಣ ತಲಾ ₹10 ಲಕ್ಷ ಆರ್ಥಿಕ ನೆರವು ನೀಡಬೇಕು. ಮೃತ ರೈತರ ಮಕ್ಕಳ ಸಂಪೂರ್ಣ ಶಿಕ್ಷಣದ ಜವಾಬ್ದಾರಿಯನ್ನು ಸರ್ಕಾರವೇ ವಹಿಸಿಕೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಸೀಮಾ ದೇಶಪಾಂಡೆ, ಮಹೇಶ್ ಎಸ್.ಬಿ., ಜಗನ್ನಾಥ್ ಎಸ್.ಎಚ್., ಹನುಮಂತ ಎಸ್.ಎಚ್., ಸಂತೋಷ್ ಹಿರ್ವೆ, ರಾಘವೇಂದ್ರ ಎಂ.ಜಿ., ಭಾಗಣ್ಣ ಬುಕ್ಕ, ತುಳಜಾರಾಮ್ ಎನ್.ಕೆ., ಪ್ರೀತಿ ದೊಡ್ಡಮನಿ, ಗೋವಿಂದ ಯಾಳವಾರ್, ವೆಂಕಟೇಶ್ ದೇವದುರ್ಗ, ಕಾ. ಈಶ್ವರ, ಕಾ. ರಘು ಪವಾರ್, ನೀಲಕಂಠ ಹುಲಿ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು, ರೈತ-ಕಾರ್ಮಿಕರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button