ಜಿಲ್ಲಾಸುದ್ದಿ

ಕರ್ನಾಟಕ ಸಣ್ಣ ಮತ್ತು ಜಿಲ್ಲಾ ಸಂಪಾದಕರ ಸಂಘದ ಕಲಬುರಗಿ ಜಿಲ್ಲಾ ಘಟಕ ಅಸ್ತಿತ್ವಕ್ಕೆ

ಸಣ್ಣ ಪತ್ರಿಕೆಗಳ ಹಕ್ಕುಗಳ ರಕ್ಷಣೆ ಹಾಗೂ ಪತ್ರಕರ್ತರ ಸಂಘಟನೆ ಬಲವರ್ಧನೆಗೆ ಹೊಸ ಹೆಜ್ಜೆ

ಕಲಬುರಗಿ, ಆ.1: ರಾಜ್ಯದ ಸಣ್ಣ ಹಾಗೂ ಜಿಲ್ಲಾ ಮಟ್ಟದ ಪತ್ರಿಕೆಗಳ ಹಕ್ಕುಗಳ ರಕ್ಷಣೆ, ಪತ್ರಕರ್ತರ ವೃತ್ತಿಪರ ಹಿತಾಸಕ್ತಿ ಮತ್ತು ಸಂಘಟನೆಯ ಬಲವರ್ಧನೆಗೆ ಹೊಸ ಚೈತನ್ಯ ತುಂಬುವ ಉದ್ದೇಶದಿಂದ ಕರ್ನಾಟಕ ಸಣ್ಣ ಮತ್ತು ಜಿಲ್ಲಾ ಸಂಪಾದಕರ ಸಂಘದ ಕಲಬುರಗಿ ಜಿಲ್ಲಾ ಘಟಕವನ್ನು ಅಧಿಕೃತವಾಗಿ ರಚಿಸಲಾಯಿತು.

ನಗರದಲ್ಲಿ ನಡೆದ ಸಂಘದ ಸಭೆಯಲ್ಲಿ ರಾಜ್ಯದ ಹಿರಿಯ ಪದಾಧಿಕಾರಿಗಳಾದ ಸಿದ್ದು ಸುಬೇದಾರ್, ಆನಂದ್ ಪಿ. ಮಣ್ಣೂರ ಹಾಗೂ ಗುರುರಾಜ್ ಜಯಪ್ರಕಾಶ್ ಕುಲಕರ್ಣಿ ಅವರ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಪತ್ರಿಕೆಗಳ ಸಂಪಾದಕರು ಮತ್ತು ಹಿರಿಯ ಪತ್ರಕರ್ತರು ಭಾಗವಹಿಸಿದರು. ಸಭೆಯಲ್ಲಿ ಸಣ್ಣ ಪತ್ರಿಕೆಗಳು ಎದುರಿಸುತ್ತಿರುವ ಸವಾಲುಗಳು, ಮಾಧ್ಯಮ ಕ್ಷೇತ್ರದಲ್ಲಿನ ಬದಲಾವಣೆಗಳು, ಪತ್ರಕರ್ತರ ಹಕ್ಕುಗಳ ರಕ್ಷಣೆ ಹಾಗೂ ಸಂಘಟನೆಯನ್ನು ಇನ್ನಷ್ಟು ಬಲಪಡಿಸುವ ಕುರಿತು ಸುದೀರ್ಘ ಚರ್ಚೆ ನಡೆಯಿತು.

ಸಭೆಯ ಅಂತ್ಯದಲ್ಲಿ ಜಿಲ್ಲಾ ಘಟಕದ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಅಜೀಜುಲ್ಲಾ ಸರಮಸ್ತ್, ಉಪಾಧ್ಯಕ್ಷರಾಗಿ ಚಂದ್ರಕಾಂತ್ ಬಿರಾದಾರ್, ಪ್ರಧಾನ ಕಾರ್ಯದರ್ಶಿಯಾಗಿ ಚಂದ್ರಕಾಂತ್ ಹಾವನೂರು, ಖಜಾಂಚಿಯಾಗಿ ಅವಿನಾಶ್ ಕೋಲೂರು, ಜಂಟಿ ಕಾರ್ಯದರ್ಶಿಯಾಗಿ ಜಯಪ್ರಕಾಶ್ ಪೂಜಾರಿ, ಸಂಘಟನಾ ಕಾರ್ಯದರ್ಶಿಯಾಗಿ ಸಿದ್ದಣ್ಣಗೌಡ ಯಡಹಳ್ಳಿ, ಕಾರ್ಯದರ್ಶಿಗಳಾಗಿ ಭರತ್ ಖಮಿತ್ಕರ್ ಹಾಗೂ ವಿಜಯಕುಮಾರ್ ಜಿಡಗಿ ಅವರನ್ನು ಆಯ್ಕೆ ಮಾಡಲಾಯಿತು.

ಸಂಘದ ಮಾರ್ಗದರ್ಶನ ಮಂಡಳಿಗೆ ಮಾಜಿ ರಾಜ್ಯಾಧ್ಯಕ್ಷ ಸಿದ್ದು ಸುಬೇದಾರ್ ಹಾಗೂ ಹಿರಿಯ ಪತ್ರಕರ್ತ ಶರಣಪ್ಪ ಜಿಡಗಾ ಅವರನ್ನು ನೇಮಕ ಮಾಡಲಾಯಿತು.

ಈ ಸಂದರ್ಭದಲ್ಲಿ ರಾಜ್ಯದ ಮುಖಂಡರು ಮಾತನಾಡಿ, ಸಣ್ಣ ಹಾಗೂ ಜಿಲ್ಲಾ ಪತ್ರಿಕೆಗಳು ಸಮಾಜದ ನೈಜ ಧ್ವನಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮೀಣ ಮತ್ತು ಪ್ರಾದೇಶಿಕ ಸಮಸ್ಯೆಗಳನ್ನು ಜನಪ್ರತಿನಿಧಿಗಳು ಹಾಗೂ ಸರ್ಕಾರದ ಗಮನಕ್ಕೆ ತರುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಹೇಳಿದರು. ಪತ್ರಕರ್ತರ ಹಕ್ಕುಗಳ ರಕ್ಷಣೆ, ಮಾಧ್ಯಮ ಸ್ವಾತಂತ್ರ್ಯದ ಸಂರಕ್ಷಣೆ, ವೃತ್ತಿಪರ ತರಬೇತಿ ಮತ್ತು ಸಣ್ಣ ಪತ್ರಿಕೆಗಳ ಅಭಿವೃದ್ಧಿಗೆ ಸಂಘವು ಆದ್ಯತೆ ನೀಡಲಿದೆ ಎಂದು ತಿಳಿಸಿದರು.

ನೂತನ ಅಧ್ಯಕ್ಷ ಅಜೀಜುಲ್ಲಾ ಸರಮಸ್ತ್ ಮಾತನಾಡಿ, ಜಿಲ್ಲೆಯ ಎಲ್ಲಾ ಸಣ್ಣ ಹಾಗೂ ಜಿಲ್ಲಾ ಪತ್ರಿಕೆಗಳ ಸಂಪಾದಕರನ್ನು ಒಂದೇ ವೇದಿಕೆಗೆ ತಂದು ಸಂಘವನ್ನು ಮತ್ತಷ್ಟು ಬಲಿಷ್ಠವಾಗಿ ರೂಪಿಸುವುದಾಗಿ ಹಾಗೂ ಪತ್ರಕರ್ತರ ನ್ಯಾಯಸಮ್ಮತ ಬೇಡಿಕೆಗಳ ಈಡೇರಿಕೆಗೆ ನಿರಂತರವಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು.

ಸಭೆಯಲ್ಲಿ ಭಾಗವಹಿಸಿದ್ದ ಸಂಪಾದಕರು ಮತ್ತು ಪತ್ರಕರ್ತರು ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿ, ಸಂಘದ ಬೆಳವಣಿಗೆ ಹಾಗೂ ಪತ್ರಕರ್ತರ ಹಿತಾಸಕ್ತಿ ಕಾಪಾಡುವ ಕಾರ್ಯಗಳಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button