ಕ್ರೀಡೆ

ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಪ್ರವೀಣ್ ಚಿತ್ರವೇಲ್‌ಗೆ ಬೆಳ್ಳಿ ಪದಕ

ಕೃಷಿ ಕೂಲಿ ಕಾರ್ಮಿಕನ ಪುತ್ರನ ಸಾಧನೆಗೆ ಕುಟುಂಬದ ಸಂಭ್ರಮ; ‘ಮುಂದಿನ ಬಾರಿ ಚಿನ್ನ ಗೆಲ್ಲುತ್ತಾನೆ’ ಎಂದ ತಂದೆ

ಗ್ಲಾಸ್ಗೋ, ಆ.2: 2026ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತದ ತ್ರಿವಳಿ ಜಿಗಿತ (ಟ್ರಿಪಲ್ ಜಂಪ್) ಅಥ್ಲೀಟ್ ಪ್ರವೀಣ್ ಚಿತ್ರವೇಲ್ ಪುರುಷರ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಈ ಸಾಧನೆಯೊಂದಿಗೆ ತಮಿಳುನಾಡಿನ ಸೆಟ್ಟಿಸತ್ತಿರಂ ಗ್ರಾಮದ ಅವರ ಮನೆಯಲ್ಲಿ ಸಂಭ್ರಮ ಮನೆಮಾಡಿದ್ದು, ಕುಟುಂಬಸ್ಥರು, ನೆರೆಹೊರೆಯವರು ಹಾಗೂ ಅಭಿಮಾನಿಗಳು ಸೇರಿ ಸಂತಸ ಹಂಚಿಕೊಂಡರು.

ಕಠಿಣ ಹವಾಮಾನ ಪರಿಸ್ಥಿತಿಯ ನಡುವೆಯೂ ಪ್ರವೀಣ್ ತಮ್ಮ ಅತ್ಯುತ್ತಮ 16.58 ಮೀಟರ್ ಜಿಗಿತ ದಾಖಲಿಸಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಅಲ್ಪ ಅಂತರದಲ್ಲಿ ಚಿನ್ನದ ಪದಕ ಕೈತಪ್ಪಿದರೂ ಅವರ ಪ್ರದರ್ಶನಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗಿದೆ.

ಪ್ರವೀಣ್ ಅವರ ತಂದೆ ಚಿತ್ರವೇಲ್, ಕೃಷಿ ಕೂಲಿ ಕಾರ್ಮಿಕರಾಗಿದ್ದು, ಕುಟುಂಬದ ಆರ್ಥಿಕ ಸಂಕಷ್ಟಗಳ ನಡುವೆಯೂ ಮಗನ ಕ್ರೀಡಾ ಕನಸಿಗೆ ಬೆಂಬಲ ನೀಡಿದ ದಿನಗಳನ್ನು ಸ್ಮರಿಸಿದರು. ಬಾಲ್ಯದಲ್ಲಿ ಪ್ರವೀಣ್ ಅವರನ್ನು ತಮ್ಮ ಸೈಕಲ್‌ನಲ್ಲಿ ತರಬೇತಿ ಮತ್ತು ಸ್ಪರ್ಧೆಗಳಿಗೆ ಕರೆದೊಯ್ಯುತ್ತಿದ್ದೆ. ನಿರಂತರ ಪ್ರೋತ್ಸಾಹ ಹಾಗೂ ಶ್ರಮದಿಂದ ಆತ ಇಂದು ಅಂತರರಾಷ್ಟ್ರೀಯ ಮಟ್ಟದ ಅಥ್ಲೀಟ್ ಆಗಿ ಬೆಳೆದಿದ್ದಾನೆ ಎಂದು ಹೆಮ್ಮೆಯಿಂದ ಹೇಳಿದರು.

“ಚಿನ್ನದ ಪದಕ ಸ್ವಲ್ಪ ಅಂತರದಲ್ಲಿ ತಪ್ಪಿರುವುದು ಬೇಸರದ ಸಂಗತಿಯೇ ಸರಿ. ಆದರೆ ಬೆಳ್ಳಿ ಪದಕವೂ ನಮಗೆ ಹೆಮ್ಮೆಯ ವಿಷಯ. ಮುಂದಿನ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ಪ್ರವೀಣ್ ಖಂಡಿತವಾಗಿಯೂ ಚಿನ್ನದ ಪದಕ ಗೆದ್ದು ಭಾರತ ಹಾಗೂ ತಮಿಳುನಾಡಿಗೆ ಇನ್ನಷ್ಟು ಕೀರ್ತಿ ತಂದುಕೊಡುತ್ತಾನೆ ಎಂಬ ವಿಶ್ವಾಸವಿದೆ” ಎಂದು ಚಿತ್ರವೇಲ್ ಹೇಳಿದರು.

ಪ್ರವೀಣ್ ಅವರ ಸಾಧನೆ ದೇಶದ ಯುವ ಅಥ್ಲೀಟ್‌ಗಳಿಗೆ ಪ್ರೇರಣೆಯಾಗಿದ್ದು, ಪರಿಶ್ರಮ, ತ್ಯಾಗ ಮತ್ತು ಕುಟುಂಬದ ಬೆಂಬಲದಿಂದ ವಿಶ್ವಮಟ್ಟದಲ್ಲಿ ಯಶಸ್ಸು ಸಾಧಿಸಬಹುದು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.

Related Articles

Leave a Reply

Your email address will not be published. Required fields are marked *

Back to top button