ಕಲಬುರಗಿ: ಪ್ರತ್ಯೇಕ ಸ್ಥಳಗಳಲ್ಲಿ ಇಬ್ಬರ ಹತ್ಯೆ

ಕಲಬುರಗಿ, ಸೆ.19: ಜಿಲ್ಲೆಯ ಎರಡು ಪ್ರತ್ಯೇಕ ಸ್ಥಳಗಳಲ್ಲಿ ಇಬ್ಬರು ವ್ಯಕ್ತಿಗಳ ಹತ್ಯೆ ನಡೆದಿರುವ ಘಟನೆ ವರದಿಯಾಗಿದೆ.
ಭೂಪಾಲ ತೆಗನೂರ ಗ್ರಾಮದ ಧನರಾಜ ಅಲಿಯಾಸ್ ಚಿನ್ನ್ಯ ಮೈಲಾರಿ ಶೆಳ್ಳಗಿ (34) ಹಾಗೂ ನಗರದ ರಾಮನಗರದ ಎಸ್ಬಿ ಕಾಲೇಜು ರಸ್ತೆಯಲ್ಲಿರುವ ನೀರಿನ ಟ್ಯಾಂಕ್ ಸಮೀಪದ ನಿವಾಸಿ ವಿಜಯಕುಮಾರ ತಂದೆ ಬಾಬುರಾವ್ ಯಾದಗೀರ್ (26) ಹತ್ಯೆಯಾದವರು.
ಜಮೀನು ವಿವಾದಕ್ಕೆ ಕೊಲೆ
ಭೂಪಾಲ ತೆಗನೂರಿನಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಧನರಾಜ ಅಲಿಯಾಸ್ ಚಿನ್ನ್ಯ ಮೈಲಾರಿ ಶೆಳ್ಳಗಿ ಅವರನ್ನು ಅವರ ಸಹೋದರ ಶಿವರಾಜ ಮೈಲಾರಿ ಶೆಳ್ಳಗಿ ಕಲ್ಲಿನಿಂದ ಹೊಡೆದು ಕೊಲೆ ಮಾಡಿರುವುದಾಗಿ ಆರೋಪಿಸಲಾಗಿದೆ.
ಹೊಲದಲ್ಲಿ ಜಗಳ ಹಾಗೂ ಉಳಿಮೆ ಮಾಡುವ ವಿಚಾರವಾಗಿ ಸಹೋದರರ ನಡುವೆ ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಆಕ್ರೋಶಗೊಂಡ ಶಿವರಾಜ ಕಲ್ಲಿನಿಂದ ಧನರಾಜ ಅವರ ತಲೆಗೆ ಹೊಡೆದಿದ್ದಾನೆ ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡ ಧನರಾಜ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಮೃತರ ಪತ್ನಿ ಶ್ರೀಮತಿ ಭಾಗ್ಯಶ್ರೀ ದೂರು ನೀಡಿದ್ದು, ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಾಕುವಿನಿಂದ ಇರಿದು ಯುವಕನ ಕೊಲೆ
ನಗರದ ರಾಮನಗರದ ಎಸ್ಬಿ ಕಾಲೇಜು ರಸ್ತೆಯಲ್ಲಿರುವ ನೀರಿನ ಟ್ಯಾಂಕ್ ಸಮೀಪ ವಿಜಯಕುಮಾರ (26) ಅವರನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ವರದಿಯಾಗಿದೆ.
ಸೆ.18ರಂದು ಮಧ್ಯಾಹ್ನ 1ರ ಸುಮಾರಿಗೆ ಸಾವಿತ್ರಿ ಸಮಾಜದ ವತಿಯಿಂದ ಆಯೋಜಿಸಿದ್ದ ಐದು ದಿನಗಳ ಗಣಪತಿ ವಿಸರ್ಜನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಸಮಾಜದ ಭವನದಲ್ಲಿ ವಿಜಯಕುಮಾರ ಮಲಗಿದ್ದರು ಎನ್ನಲಾಗಿದೆ. ಈ ವೇಳೆ ಎಬ್ಬಿಸಿದ ರವಿ ಎಂಬಾತ, ತಂದೆ ಭೀಮಶ್ಯಾ ಜೀಲಕರ್ ಅವರ ಕೈಯಲ್ಲಿದ್ದ ಹಾಕಿ ಸ್ಟಿಕ್ನಿಂದ ವಿಜಯಕುಮಾರ ಅವರಿಗೆ ಹೊಡೆದಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಹಲ್ಲೆಯಿಂದ ತಪ್ಪಿಸಿಕೊಳ್ಳಲು ವಿಜಯಕುಮಾರ ಓಡಿಹೋದಾಗ ರಾಮ ಮಂದಿರದ ಸಮೀಪ ಅವರನ್ನು ಹಿಂಬಾಲಿಸಿದ ರವಿ ಚಾಕುವಿನಿಂದ ಎದೆಗೆ ಇರಿದು ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಬಳಿಕ ರವಿ ತನ್ನೊಂದಿಗೆ ಇದ್ದವರೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ.
ಘಟನೆ ಕುರಿತು ಮೃತರ ಸಹೋದರ ಅಜಯಕುಮಾರ ತಂದೆ ಬಾಬುರಾವ್ ಯಾದಗೀರ್ ಅವರು ಸ್ಟೇಷನ್ ಬಜಾರ್ ಪೊಲೀಸ್ ಠಾಣೆಯಲ್ಲಿ ರಾಮನಗರದ ರವಿ, ತಂದೆ ಭೀಮಶ್ಯಾ ಜೀಲಕರ್ ಹಾಗೂ ಇತರರ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.



