ಜಿಲ್ಲಾಸುದ್ದಿ

ಬಿಸಿಯೂಟದ ಹೊಣೆ ಅಡುಗೆ ಸಿಬ್ಬಂದಿಗೆ ವಹಿಸಲು ಒತ್ತಾಯಿಸಿ ಪ್ರತಿಭಟನೆ

ಕಲಬುರಗಿ, ನ.14: ಸರ್ಕಾರಿ ಶಾಲೆಗಳಲ್ಲಿ ಕ್ಲಸ್ಟರ್ ಅಡುಗೆ ಪದ್ಧತಿ ಜಾರಿಗೆ ತರಬಾರದು ಹಾಗೂ ಮಧ್ಯಾಹ್ನದ ಬಿಸಿಯೂಟದ ಸಂಪೂರ್ಣ ಜವಾಬ್ದಾರಿಯನ್ನು ಈಗಿರುವ ಅಡುಗೆ ಸಿಬ್ಬಂದಿಗೆ ವಹಿಸಬೇಕು ಎಂದು ಒತ್ತಾಯಿಸಿ ಸಿಐಟಿಯು ಕಾರ್ಯಕರ್ತರು ಸೋಮವಾರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಬಿಸಿಯೂಟ ನೌಕರರ ಸಂಘದ ಜಿಲ್ಲಾಧ್ಯಕ್ಷೆ ವಿಜಯಲಕ್ಷ್ಮಿ ಹಿರೇಮಠ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನಾಗಮ್ಮ ನರಿಬೋಳ, ಸಿದ್ದಮ್ಮ, ಪಾರ್ವತಿ, ಸುನೀತಾ ಗುತೇದಾರ, ಶಾಂತಾ ಘಂಟೆ, ಸಂಗೀತಾ ವಿ. ಗುತೇದಾರ, ವಿಜಯಲಕ್ಷ್ಮಿ ಓಂಕಾರ, ಸುಶೀಲಾ ಡೊಂಗರಗಾಂವ, ಅಂಜನಾ ಹೆಬ್ಬಾಳ, ಸುನೀತಾ, ಗೌರಮ್ಮ ಪಾಟೀಲ, ರೇಖಾ ರಂಗನ್, ಸಿದ್ದಮ್ಮ ನಾಗೂರ, ಶರಣಮ್ಮ, ನಾಗಮ್ಮ ಗುತೇದಾರ, ಕಾಂಚನಾ, ಎಂ.ಬಿ. ಸಜ್ಜನ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರತಿಭಟನಾಕಾರರು ಅಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ, ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ ಯೋಜನೆಯಡಿ ಕ್ಲಸ್ಟರ್ ಅಡುಗೆ ವ್ಯವಸ್ಥೆ ರೂಪಿಸುವುದು ಹಾಗೂ ಬಿಸಿಯೂಟದ ಜವಾಬ್ದಾರಿಯನ್ನು ಸರ್ಕಾರೇತರ ಸಂಸ್ಥೆಗಳಿಗೆ ನೀಡುವ ಕುರಿತು ರಾಜ್ಯದ ಎಲ್ಲ ಜಿಲ್ಲೆಗಳ ಉಪನಿರ್ದೇಶಕರು ಮತ್ತು ಶಿಕ್ಷಣಾಧಿಕಾರಿಗಳಿಂದ ಅಭಿಪ್ರಾಯ ಸಂಗ್ರಹಿಸಲು ಶಿಕ್ಷಣ ಇಲಾಖೆ ಮುಂದಾಗಿರುವುದನ್ನು ತೀವ್ರವಾಗಿ ಖಂಡಿಸಿದರು.

ಸರ್ಕಾರಿ ಶಾಲಾ ಮಕ್ಕಳ ಗ್ರಹಣಶಕ್ತಿ ಹೆಚ್ಚಿಸುವುದು, ಮಧ್ಯಾಹ್ನದ ನಂತರದ ಶಾಲಾ ಚಟುವಟಿಕೆಗಳಲ್ಲಿ ಮಕ್ಕಳ ಸಕ್ರಿಯ ಭಾಗವಹಿಸುವಿಕೆ ಹೆಚ್ಚಿಸುವುದು, ಗೈರುಹಾಜರಾತಿ ತಡೆಗಟ್ಟುವುದು ಹಾಗೂ ಲಿಂಗ ಮತ್ತು ಜಾತಿ ತಾರತಮ್ಯ ಕಡಿಮೆ ಮಾಡುವುದು ಬಿಸಿಯೂಟ ಯೋಜನೆಯ ಪ್ರಮುಖ ಉದ್ದೇಶಗಳಾಗಿವೆ. ಮಕ್ಕಳಿಗೆ ಪೌಷ್ಟಿಕ ಆಹಾರವನ್ನು ಅವರು ಓದುವ ಶಾಲೆಯಲ್ಲಿಯೇ ತಯಾರಿಸಿ ತಾಜಾ ಹಾಗೂ ಬಿಸಿಯಾದ ಊಟ ನೀಡಬೇಕು ಎಂಬ ಸುಪ್ರೀಂ ಕೋರ್ಟ್‌ನ ಆದೇಶವೂ ಇದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಈ ಯೋಜನೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾವಿರಾರು ಕೋಟಿ ರೂಪಾಯಿ ವೆಚ್ಚ ಮಾಡಿದ್ದು, ಪ್ರತಿ ಶಾಲೆಯ ಆವರಣದಲ್ಲಿ ಅಡುಗೆ ಕೋಣೆಗಳನ್ನು ನಿರ್ಮಿಸಿ, ಅಗತ್ಯ ಪಾತ್ರೆಗಳು, ಅನಿಲ ಸಂಪರ್ಕ ಸೇರಿದಂತೆ ಅಡುಗೆಗೆ ಬೇಕಾದ ಸೌಲಭ್ಯಗಳನ್ನು ಒದಗಿಸಿವೆ. ಯೋಜನೆಯ ಅನುಷ್ಠಾನ ಮತ್ತು ಮೇಲ್ವಿಚಾರಣೆಗಾಗಿ ಪ್ರತ್ಯೇಕ ನಿರ್ದೇಶನಾಲಯವೂ ಕಾರ್ಯನಿರ್ವಹಿಸುತ್ತಿದೆ. ಇಂತಹ ವ್ಯವಸ್ಥೆ ಇರುವಾಗ ಕ್ಲಸ್ಟರ್ ಅಡುಗೆ ಪದ್ಧತಿ ಹಾಗೂ ಹೊರಗಿನ ಸಂಸ್ಥೆಗಳಿಗೆ ಜವಾಬ್ದಾರಿ ವಹಿಸುವ ಅಗತ್ಯವೇನಿದೆ ಎಂದು ಪ್ರಶ್ನಿಸಿದರು.

ಶಿಕ್ಷಕರು ಶಾಲಾ ಪಠ್ಯಕ್ರಮದ ಬೋಧನೆಗೆ ಹೆಚ್ಚಿನ ಗಮನ ನೀಡಬೇಕು ಎಂಬ ಉದ್ದೇಶದಿಂದಲೇ ಅಡುಗೆ ಮತ್ತು ಬಿಸಿಯೂಟ ವಿತರಣೆ ಕಾರ್ಯವನ್ನು ಶಿಕ್ಷಕರಿಗೆ ವಹಿಸುವುದನ್ನು ಸಂಘಟನೆ ಮೊದಲಿನಿಂದಲೂ ವಿರೋಧಿಸುತ್ತಾ ಬಂದಿದೆ. ಬಿಸಿಯೂಟ ನೌಕರರೇ ಅಡುಗೆ ತಯಾರಿಸಿ ಮಕ್ಕಳಿಗೆ ಬಡಿಸುವುದು ಅವರ ಮೂಲ ಕರ್ತವ್ಯವಾಗಿದ್ದು, ಈ ವ್ಯವಸ್ಥೆಯನ್ನು ಮುಂದುವರಿಸಬೇಕು ಎಂದು ಆಗ್ರಹಿಸಿದರು.

2012ರ ಜೂನ್ 4ರಂದು ಸಾರ್ವಜನಿಕ ಶಿಕ್ಷಣ ಇಲಾಖೆ ಬಿಸಿಯೂಟ ಯೋಜನೆಯನ್ನು ಸ್ವಯಂಸೇವಾ ಸಂಸ್ಥೆಗಳಿಗೆ ವಹಿಸುವುದನ್ನು ನಿಷೇಧಿಸಿ ಸುತ್ತೋಲೆ ಹೊರಡಿಸಿತ್ತು. ಅದೇ ವರ್ಷದ ಡಿಸೆಂಬರ್ 17ರಂದು ಹೊರಡಿಸಿದ ಇಲಾಖೆಯ ಆದೇಶದಂತೆ ಅಕ್ಷರ ದಾಸೋಹ ಯೋಜನೆಯ ಜಂಟಿ ಖಾತೆ ನಿರ್ವಹಣೆ, ಅಡುಗೆ ಸಿಬ್ಬಂದಿ ಹಾಗೂ ಶಾಲಾಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷರ ಜವಾಬ್ದಾರಿಗಳ ಕುರಿತು ಸ್ಪಷ್ಟ ನಿರ್ದೇಶನ ನೀಡಲಾಗಿತ್ತು. ಮುಖ್ಯ ಶಿಕ್ಷಕರು ಅಡುಗೆ ಸಿಬ್ಬಂದಿಯ ಜವಾಬ್ದಾರಿಯನ್ನು ನಿರ್ವಹಿಸುವಂತೆ ಒತ್ತಾಯಿಸುವ ಬದಲು, ಅಡುಗೆ ಸಿಬ್ಬಂದಿ ಮತ್ತು ಸಮಿತಿ ಅಧ್ಯಕ್ಷರ ಹೆಸರಿನಲ್ಲಿ ಜಂಟಿ ಖಾತೆ ತೆರೆಯಲು ಅವಕಾಶವಿದೆ ಎಂದು ತಿಳಿಸಿದರು.

ಸರ್ಕಾರಿ ಶಾಲೆಗಳು ಇರುವವರೆಗೆ ಮಕ್ಕಳಿಗೆ ಬಿಸಿಯೂಟ ಒದಗಿಸುವುದು ಅವರ ಮೂಲಭೂತ ಹಕ್ಕಾಗಿದೆ. ಬಿಸಿಯೂಟ ನೌಕರರ ಮುಖ್ಯ ಕೆಲಸ ಅಡುಗೆ ತಯಾರಿಸಿ ಮಕ್ಕಳಿಗೆ ಊಟ ಬಡಿಸುವುದಾಗಿದೆ. ಆದ್ದರಿಂದ ಬಿಸಿಯೂಟದ ಸಂಪೂರ್ಣ ಜವಾಬ್ದಾರಿಯನ್ನು ಅಡುಗೆ ಸಿಬ್ಬಂದಿಗೇ ವಹಿಸಬೇಕು ಎಂದು ಒತ್ತಾಯಿಸಿದರು.

ಬಿಸಿಯೂಟ ಅಡುಗೆ ಸಿಬ್ಬಂದಿಯಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಹತೆ ಹೊಂದಿರುವವರೂ ಇದ್ದಾರೆ. ಅವರಿಗೆ ಅಡುಗೆ ಕಾರ್ಯ ನಿರ್ವಹಿಸುವ ಅರ್ಹತೆ ಮತ್ತು ಅನುಭವವಿದೆ. ಇಲಾಖೆಯು ಅವರ ಅನುಭವವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಅಗತ್ಯವಿದ್ದರೆ ಅಡುಗೆ ಸಿಬ್ಬಂದಿಯ ಕೆಲಸದ ಅವಧಿಯನ್ನು ವಿಸ್ತರಿಸಬಹುದು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಶಾಲಾ ಶಿಕ್ಷಕರು ಪ್ರಮುಖವಾಗಿ ವಿರೋಧಿಸುತ್ತಿರುವ ಸಮಸ್ಯೆಗಳಲ್ಲಿ ಕೋಳಿ ಮೊಟ್ಟೆಯ ಬೆಲೆ ಏರಿಕೆಯೂ ಒಂದಾಗಿದೆ. ಶಾಲೆಗಳಿಗೆ ಮೊಟ್ಟೆ ಪೂರೈಸುವ ಜವಾಬ್ದಾರಿಯನ್ನು ಕುಕ್ಕುಟ ಮಹಾಮಂಡಳಿಗೆ ವಹಿಸುವಂತೆ ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಬಹುದು. ಇದರಿಂದ ಶಿಕ್ಷಕರ ಮೇಲಿನ ಹೆಚ್ಚುವರಿ ಹೊರೆ ಕಡಿಮೆಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಕೇಂದ್ರ ಅಡುಗೆ ಮನೆ ವ್ಯವಸ್ಥೆ ಜಾರಿಗೆ ತರುವುದರಿಂದ ಧಾರ್ಮಿಕ, ಜಾತಿ ಹಾಗೂ ಖಾಸಗಿ ಸಂಸ್ಥೆಗಳ ಹಸ್ತಕ್ಷೇಪಕ್ಕೆ ಅವಕಾಶ ಕಲ್ಪಿಸಿದಂತಾಗುತ್ತದೆ. ಅಲ್ಲದೆ, ಶಾಲಾ ಮಕ್ಕಳಿಗೆ ಸ್ಥಳದಲ್ಲಿಯೇ ತಯಾರಿಸಿದ ತಾಜಾ ಆಹಾರ ನೀಡುವ ಮೂಲ ಉದ್ದೇಶಕ್ಕೂ ಧಕ್ಕೆಯಾಗುತ್ತದೆ. ಆದ್ದರಿಂದ ಯಾವುದೇ ಕಾರಣಕ್ಕೂ ಕೇಂದ್ರ ಅಡುಗೆ ಮನೆ ಪದ್ಧತಿಯನ್ನು ಜಾರಿಗೆ ತರಬಾರದು. ಈಗಿರುವ ಬಿಸಿಯೂಟ ವ್ಯವಸ್ಥೆಯನ್ನೇ ಮುಂದುವರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

Related Articles

Leave a Reply

Your email address will not be published. Required fields are marked *

Back to top button