ಜಿಲ್ಲಾಸುದ್ದಿ

ಅಂಗನವಾಡಿ, ಆಶಾ, ಬಿಸಿಯೂಟ ಕಾರ್ಯಕರ್ತೆಯರ ಖಾಯಂಗೊಳಿಸುವಿಕೆಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ, ನ.14: ಅಂಗನವಾಡಿ, ಆಶಾ, ಬಿಸಿಯೂಟ ಸೇರಿದಂತೆ ವಿವಿಧ ಯೋಜನೆಗಳಡಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರನ್ನು ಖಾಯಂಗೊಳಿಸಬೇಕು ಹಾಗೂ ಕನಿಷ್ಠ ವೇತನ, ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಯೋಜನಾ ಕಾರ್ಮಿಕರು ಶುಕ್ರವಾರ ಸಂಸದೆ ರಾಧಾಕೃಷ್ಣ ದೊಡ್ಡಮನಿ ಅವರ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಶ್ರೀಮತಿ ಶಾಂತಾ ಘಂಟೆ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಗೌರಮ್ಮ ಪಾಟೀಲ, ಬಿಸ್ಮಿಲ್ಲಾ ಖೇಡ, ಸಂಗೀತಾ ಗುತ್ತೇದಾರ್, ವಿಜಯಲಕ್ಷ್ಮಿ ಹಿರೇಮಠ, ಮಲ್ಲಮ್ಮ ಹೆಬಳಿ, ಮೈತ್ರಾ ಶಹಾಬಾದ್, ಗಜರಾಬಾಯಿ, ಕಮಲಾಬಾಯಿ, ದ್ರೌಪದಿ ಚಿಂಚೋಳಿ, ಮಹಾನಂದಾ ಚಿಂಚೋಳಿ, ರಾಜಮತಿ ಬಿ. ಪಾಟೀಲ, ಮಲ್ಲಮ್ಮ ಎಸ್. ಬಿರೇದಾರ್, ಶರಣಮ್ಮ ಖನ್ನಾ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಕಡಿಮೆ ಗೌರವಧನ, ಹೆಚ್ಚಿನ ಕೆಲಸದ ಹೊರೆ

ಅಂಗನವಾಡಿ, ಆಶಾ ಮತ್ತು ಬಿಸಿಯೂಟ ಕಾರ್ಯಕರ್ತೆಯರು ದಿನಕ್ಕೆ 10ರಿಂದ 12 ಗಂಟೆಗಳ ಕಾಲ ಕೆಲಸ ಮಾಡುತ್ತಿದ್ದಾರೆ. ಅನೇಕ ಸಂದರ್ಭಗಳಲ್ಲಿ ಆನ್‌ಲೈನ್ ಹಾಗೂ ಕ್ಷೇತ್ರಮಟ್ಟದ ಕೆಲಸಗಳ ಜೊತೆಗೆ ವಿವಿಧ ಸರ್ಕಾರಿ ಕಾರ್ಯಕ್ರಮಗಳಿಗೆ ಅಗತ್ಯವಿರುವ ವಸ್ತುಗಳನ್ನು ಖರೀದಿಸಲು ಮತ್ತು ಅಡುಗೆಗೆ ಬೇಕಾದ ಸಾಮಗ್ರಿಗಳನ್ನು ಒದಗಿಸಲು ಸ್ವಂತ ಹಣವನ್ನೇ ಖರ್ಚು ಮಾಡಬೇಕಾಗಿದೆ. ತೀವ್ರ ಶೋಷಣೆ, ಕಿರುಕುಳ ಹಾಗೂ ಹೆಚ್ಚುವರಿ ಕೆಲಸದ ಹೊರೆಯನ್ನು ಎದುರಿಸುತ್ತಿದ್ದರೂ, ತಮ್ಮನ್ನು ನೌಕರರು ಅಥವಾ ಕಾರ್ಮಿಕರೆಂದು ಗುರುತಿಸದೆ ಸ್ವಯಂಸೇವಕರೆಂದು ಪರಿಗಣಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.

ಸುಮಾರು 27 ಲಕ್ಷ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ನೀಡಲಾಗುವ ಗೌರವಧನ ಕ್ರಮವಾಗಿ ತಿಂಗಳಿಗೆ 2,700 ಹಾಗೂ 1,350 ರೂಪಾಯಿಗಳಷ್ಟಿದ್ದು, 2018ರಿಂದ ಇದರಲ್ಲಿ ಯಾವುದೇ ಹೆಚ್ಚಳವಾಗಿಲ್ಲ. ಸುಮಾರು 10 ಲಕ್ಷ ಆಶಾ ಕಾರ್ಯಕರ್ತೆಯರು ಮತ್ತು ಫೆಸಿಲಿಟೇಟರ್‌ಗಳಿಗೆ ತಿಂಗಳಿಗೆ 2,000 ರೂಪಾಯಿ ಗೌರವಧನ ನೀಡಲಾಗುತ್ತಿದ್ದು, ಇದೂ 2018ರಿಂದ ಹೆಚ್ಚಳ ಕಂಡಿಲ್ಲ ಎಂದು ಅವರು ದೂರಿದರು.

ಮಧ್ಯಾಹ್ನದ ಬಿಸಿಯೂಟದ ಅಡುಗೆ ಸಿಬ್ಬಂದಿಗೆ 2009ರಿಂದ ಯಾವುದೇ ಗೌರವಧನ ಹೆಚ್ಚಳ ಮಾಡಿಲ್ಲ. ವರ್ಷಕ್ಕೆ ಕೇವಲ 10 ತಿಂಗಳು ಮಾತ್ರ ತಿಂಗಳಿಗೆ 1,000 ರೂಪಾಯಿ ನೀಡಲಾಗುತ್ತಿದೆ. ಇತರ ಯಾವುದೇ ಸೌಲಭ್ಯಗಳೂ ಲಭ್ಯವಿಲ್ಲ. ಯೋಜನಾ ಕಾರ್ಮಿಕರಿಗೆ ನಿವೃತ್ತಿ ಸೌಲಭ್ಯ, ಸಾಮಾಜಿಕ ಭದ್ರತೆ ಅಥವಾ ಪಿಂಚಣಿ ದೊರೆಯುತ್ತಿಲ್ಲ. ಮಾತೃತ್ವ ಸೌಲಭ್ಯಗಳಿಗೂ ಅರ್ಹರಾಗಿದ್ದರೂ ಸಮರ್ಪಕವಾಗಿ ಒದಗಿಸಲಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

45ನೇ ಕಾರ್ಮಿಕ ಸಮ್ಮೇಳನದ ಶಿಫಾರಸು ಜಾರಿಗೆ ಒತ್ತಾಯ

45ನೇ ಭಾರತೀಯ ಕಾರ್ಮಿಕ ಸಮ್ಮೇಳನವು ಯೋಜನಾ ಕಾರ್ಮಿಕರನ್ನು ಖಾಯಂಗೊಳಿಸುವುದು, ಕನಿಷ್ಠ ವೇತನ, ಸಾಮಾಜಿಕ ಭದ್ರತೆ ಮತ್ತು ಪಿಂಚಣಿ ಸೌಲಭ್ಯ ಕಲ್ಪಿಸುವಂತೆ ಸರ್ವಾನುಮತದಿಂದ ಶಿಫಾರಸು ಮಾಡಿ 13 ವರ್ಷಗಳಾಗಿವೆ. ಆದರೆ ಈ ಶಿಫಾರಸುಗಳನ್ನು ಜಾರಿಗೊಳಿಸುವ ಬದಲು ಕೇಂದ್ರ ಸರ್ಕಾರ ಭಾರತೀಯ ಕಾರ್ಮಿಕ ಸಮ್ಮೇಳನವನ್ನೇ ನಡೆಸುವುದನ್ನು ನಿಲ್ಲಿಸಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

2022ರಲ್ಲಿ ಸುಪ್ರೀಂ ಕೋರ್ಟ್ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಗ್ರಾಚ್ಯುಟಿ ನೀಡುವಂತೆ ಆದೇಶಿಸಿದ್ದರೂ, ಸರ್ಕಾರ ಅದನ್ನು ಜಾರಿಗೊಳಿಸಲು ನಿರಾಕರಿಸುತ್ತಿದೆ ಎಂದು ದೂರಿದರು.

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಕನಿಷ್ಠ ವೇತನ ನೀಡುವಂತೆ ಗುಜರಾತ್ ಹೈಕೋರ್ಟ್ ನೀಡಿರುವ ಆದೇಶವನ್ನೂ ಸರ್ಕಾರಗಳು ನ್ಯಾಯಾಲಯಗಳಲ್ಲಿ ಪ್ರಶ್ನಿಸಿವೆ. 2025ರ ಮಾರ್ಚ್‌ನಲ್ಲಿಯೇ ಆರೋಗ್ಯ ಸಚಿವರು ಆಶಾ ಕಾರ್ಯಕರ್ತೆಯರ ನಿಗದಿತ ಪ್ರೋತ್ಸಾಹಧನ ಹಾಗೂ ಇತರ ಪ್ರೋತ್ಸಾಹಧನಗಳನ್ನು ಹೆಚ್ಚಿಸುವುದಾಗಿ ಘೋಷಿಸಿದ್ದರೂ, ಇದುವರೆಗೆ ಒಂದು ರೂಪಾಯಿಯನ್ನೂ ಹೆಚ್ಚಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯೋಜನೆಗಳನ್ನು ಬಲಪಡಿಸಿ ಗುಣಮಟ್ಟದೊಂದಿಗೆ ಶಾಶ್ವತಗೊಳಿಸುವ ಬದಲು ಸರ್ಕಾರ ಡಿಜಿಟಲೀಕರಣದ ಹೆಸರಿನಲ್ಲಿ ಇ-ಕೆವೈಸಿ, ಎಫ್‌ಆರ್‌ಎಸ್, ಆಧಾರ್ ಜೋಡಣೆ ಹಾಗೂ ಮೊಬೈಲ್ ಒಟಿಪಿ ಪರಿಶೀಲನೆಯಂತಹ ಕ್ರಮಗಳನ್ನು ಜಾರಿಗೆ ತಂದು ಕಾರ್ಯಕರ್ತೆಯರಿಗೆ ಮತ್ತಷ್ಟು ಕಿರುಕುಳ ನೀಡುತ್ತಿದೆ ಎಂದು ಆರೋಪಿಸಿದರು.

ತಿಂಗಳಿಗೆ ₹42 ಸಾವಿರ ಕನಿಷ್ಠ ವೇತನಕ್ಕೆ ಆಗ್ರಹ

ಯೋಜನಾ ಕಾರ್ಮಿಕರನ್ನು ಖಾಯಂಗೊಳಿಸುವವರೆಗೆ ತಿಂಗಳಿಗೆ ಕನಿಷ್ಠ 42 ಸಾವಿರ ರೂಪಾಯಿ ವೇತನ, 21 ಸಾವಿರ ರೂಪಾಯಿ ಪಿಂಚಣಿ ಹಾಗೂ ಸುಪ್ರೀಂ ಕೋರ್ಟ್ ಆದೇಶದಂತೆ ಗ್ರಾಚ್ಯುಟಿ ನೀಡಬೇಕು. ಎಲ್ಲ ಯೋಜನಾ ಕಾರ್ಮಿಕರನ್ನು ಖಾಯಂಗೊಳಿಸಲು ಪ್ರತ್ಯೇಕ ವೇತನ ಆಯೋಗ ರಚಿಸಬೇಕು. ದೇಶದ ಎಲ್ಲ ರಾಜ್ಯಗಳಲ್ಲಿ ಪ್ರತಿ ವರ್ಗದ ಯೋಜನಾ ಕಾರ್ಮಿಕರಿಗೆ ಏಕರೂಪದ ಸೇವಾ ನಿಯಮಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಯೋಜನೆಯಲ್ಲಿ ನಿಗದಿಪಡಿಸಿರುವ ಕೆಲಸಗಳನ್ನು ಹೊರತುಪಡಿಸಿ ಹೆಚ್ಚುವರಿ ಕೆಲಸಗಳನ್ನು ವಹಿಸಬಾರದು. ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳನ್ನು ಹಿಂಪಡೆಯಬೇಕು ಹಾಗೂ ಯೋಜನಾ ಕಾರ್ಮಿಕರನ್ನು ಕಾರ್ಮಿಕ ಕಾನೂನುಗಳ ವ್ಯಾಪ್ತಿಗೆ ತರಬೇಕು ಎಂದು ಆಗ್ರಹಿಸಿದರು.

ವಿವಿಧ ರೂಪಗಳಲ್ಲಿ ನಡೆಯುತ್ತಿರುವ ಯೋಜನೆಗಳ ಖಾಸಗೀಕರಣ ಮತ್ತು ಸ್ವಯಂಸೇವಾ ಸಂಸ್ಥೆಗಳ ಮೂಲಕ ನಿರ್ವಹಿಸುವ ಕ್ರಮವನ್ನು ನಿಲ್ಲಿಸಬೇಕು. ಸಾರ್ವಜನಿಕ ವಲಯದ ಉದ್ಯಮಗಳು ಹಾಗೂ ಸೇವೆಗಳ ಖಾಸಗೀಕರಣವನ್ನು ತಡೆಯಬೇಕು. ಡಿಜಿಟಲೀಕರಣದ ಹೆಸರಿನಲ್ಲಿ ಇ-ಕೆವೈಸಿ, ಎಫ್‌ಆರ್‌ಎಸ್ ಸೇರಿದಂತೆ ವಿವಿಧ ಕ್ರಮಗಳ ಮೂಲಕ ಫಲಾನುಭವಿಗಳನ್ನು ಸಾಮೂಹಿಕವಾಗಿ ಪಟ್ಟಿಯಿಂದ ತೆಗೆದುಹಾಕುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.

ಕಾರ್ಮಿಕರಿಗೆ ಆಹಾರ, ಉದ್ಯೋಗ, ಆರೋಗ್ಯ, ಶಿಕ್ಷಣ, ಸಾಮಾಜಿಕ ಭದ್ರತೆ, ಪಿಂಚಣಿ ಹಾಗೂ ವಸತಿ ಸೇರಿದಂತೆ ಮೂಲಭೂತ ಹಕ್ಕುಗಳನ್ನು ಖಾತರಿಪಡಿಸಬೇಕು. ಈ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಲು ಅಗತ್ಯವಿರುವ ಹಣಕಾಸಿನ ಸಂಪನ್ಮೂಲ ಸಂಗ್ರಹಿಸಲು ದೇಶದ ಅತಿ ಶ್ರೀಮಂತರಿಗೆ ತೆರಿಗೆ ವಿಧಿಸಬೇಕು. ಈ ಕುರಿತು ಕೇಂದ್ರ ಸರ್ಕಾರ ಗಮನಹರಿಸಬೇಕು ಎಂದು ಸಂಸದರನ್ನು ಒತ್ತಾಯಿಸಿದರು.

Related Articles

Leave a Reply

Your email address will not be published. Required fields are marked *

Back to top button