ಸಿದ್ಧಸಿರಿ ಎಥೆನಾಲ್ ಉತ್ಪಾದನೆ ನಿಷೇಧಕ್ಕೆ ವಿರೋಧ: ಕಬ್ಬಿನ ದರ ಹೆಚ್ಚಳಕ್ಕೆ ಗಂಜಗಿರಿ ಆಗ್ರಹ

ಕಲಬುರಗಿ, ನ.14: ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಸಿದ್ಧಸಿರಿ ಎಥೆನಾಲ್ ಕಾರ್ಖಾನೆ ಕಬ್ಬು ಬೆಳೆಗಾರರ ಜೀವನಾಧಾರವಾಗಿದೆ. ಆದರೆ, ಏಕಾಏಕಿ ಎಥೆನಾಲ್ ಉತ್ಪಾದನೆ ಮಾಡಬಾರದು ಮತ್ತು ಸಕ್ಕರೆ ಉತ್ಪಾದಿಸಬೇಕು ಎಂಬ ಕೇಂದ್ರ ಸರ್ಕಾರದ ಆದೇಶದ ಜೊತೆಗೆ, ಪ್ರತಿ ಟನ್ ಕಬ್ಬಿಗೆ ಅತ್ಯಂತ ಕಡಿಮೆ ದರ ನಿಗದಿಪಡಿಸಿರುವುದು ಹಿಂದುಳಿದ ಪ್ರದೇಶದ ಕಬ್ಬು ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಕೂಡಲೇ ರೈತರ ಹಿತದೃಷ್ಟಿಯಿಂದ ಎಥೆನಾಲ್ ಕಾರ್ಖಾನೆಯನ್ನು ಪುನರಾರಂಭಿಸಿ, ಕಬ್ಬಿನ ದರ ಹೆಚ್ಚಿಸಬೇಕು ಎಂದು ಮೂಲನಿವಾಸಿ ಕಬ್ಬು ಬೆಳೆಗಾರರ ಸಂಘಟನೆಯ ಸಂಚಾಲಕ ಮಾರುತಿ ಗಂಜಗಿರಿ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಭಯ ತಾಲ್ಲೂಕುಗಳಲ್ಲಿ ಕಟಾವಿಗೆ ಬಂದಿರುವ ಕಬ್ಬನ್ನು ತಕ್ಷಣ ಕಟಾವು ಮಾಡಲು ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು. ಚಂದ್ರಂಪಳ್ಳಿ ಜಲಾಶಯದಿಂದ ಮುಲ್ಲಾಮಾರಿ ನದಿಗೆ ನೀರು ಹರಿಸಬೇಕು. ಸಿದ್ಧಸಿರಿ ಎಥೆನಾಲ್ ಕಾರ್ಖಾನೆ ನಿಗದಿಪಡಿಸಿರುವ ಕಡಿಮೆ ಕಬ್ಬಿನ ದರವನ್ನು ಹೆಚ್ಚಿಸಿ ರೈತರಿಗೆ ನ್ಯಾಯಸಮ್ಮತ ಬೆಲೆ ನೀಡಬೇಕು ಎಂದು ಒತ್ತಾಯಿಸಿದರು.
ಚಿಂಚೋಳಿ ಮತ್ತು ಕಾಳಗಿ ತಾಲ್ಲೂಕುಗಳ ಕಬ್ಬು ಬೆಳೆಗಾರರು ಅತ್ಯಂತ ಗಂಭೀರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಒಂದು ವರ್ಷದ ಶ್ರಮ, ಅಪಾರ ಬಂಡವಾಳ ಹಾಗೂ ಸಾಲದ ಹಣ ಹೂಡಿ ಬೆಳೆದ ಕಬ್ಬು ಕಟಾವಿಗೆ ಬಂದು ಒಣಗುವ ಹಂತ ತಲುಪಿದೆ. ಕಬ್ಬು ಕಟಾವು ವಿಳಂಬವಾದರೆ ರೈತರಿಗೆ ಅಪಾರ ಆರ್ಥಿಕ ನಷ್ಟ ಉಂಟಾಗುವುದಲ್ಲದೆ, ಅವರ ಜೀವನೋಪಾಯವೇ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಯಿದೆ.
ಚಿಂಚೋಳಿ ತಾಲ್ಲೂಕಿನಲ್ಲಿ ಸುಮಾರು 2,500 ಹೆಕ್ಟೇರ್ ಹಾಗೂ ಕಾಳಗಿ ತಾಲ್ಲೂಕಿನಲ್ಲಿ ಸುಮಾರು 650ರಿಂದ 700 ಹೆಕ್ಟೇರ್ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗಿದೆ. ಸಾವಿರಾರು ರೈತ ಕುಟುಂಬಗಳು ಕಬ್ಬು ಬೆಳೆಯನ್ನೇ ಅವಲಂಬಿಸಿ ಜೀವನ ನಡೆಸುತ್ತಿವೆ. ತಮ್ಮ ಮಕ್ಕಳ ಶಿಕ್ಷಣ, ಮದುವೆ, ಕುಟುಂಬ ನಿರ್ವಹಣೆ ಹಾಗೂ ಕೃಷಿಗಾಗಿ ಪಡೆದ ಸಾಲದ ಮರುಪಾವತಿಗೆ ಕಬ್ಬಿನಿಂದ ಬರುವ ಆದಾಯವನ್ನೇ ನಿರೀಕ್ಷಿಸುತ್ತಿದ್ದಾರೆ ಎಂದರು.
ಕಬ್ಬು ಖರೀದಿ ಮತ್ತು ಕಟಾವು ವ್ಯವಸ್ಥೆಯಲ್ಲಿನ ಅನಿಶ್ಚಿತತೆ ಹಾಗೂ ಕಬ್ಬಿಗೆ ನಿಗದಿಪಡಿಸಿರುವ ಕಡಿಮೆ ದರದಿಂದ ರೈತರು ಆತಂಕ ಮತ್ತು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ರೈತರ ಉತ್ಪಾದನಾ ವೆಚ್ಚ, ಶ್ರಮ ಹಾಗೂ ಪ್ರಸ್ತುತ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸದೆ ಕಡಿಮೆ ದರ ನಿಗದಿಪಡಿಸಿರುವುದು ಕಬ್ಬು ಬೆಳೆಗಾರರ ಹಿತಾಸಕ್ತಿಗೆ ವಿರುದ್ಧವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಮತ್ತು ಜಿಲ್ಲಾಡಳಿತ ತಕ್ಷಣ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಬ್ಬು ಕಟಾವಿಗೆ ತಕ್ಷಣ ವ್ಯವಸ್ಥೆ ಕಲ್ಪಿಸುವಂತೆ ಚಿಂಚೋಳಿ ಮತ್ತು ಕಾಳಗಿ ತಾಲ್ಲೂಕುಗಳ ಕಬ್ಬು ಬೆಳೆಗಾರರ ಕಬ್ಬನ್ನು ತುರ್ತಾಗಿ ಕಟಾವು ಮಾಡಲು ಜಿಲ್ಲಾಡಳಿತ ವಿಶೇಷ ಕ್ರಮ ಕೈಗೊಳ್ಳಬೇಕು. ಕಬ್ಬು ಒಣಗಿ ರೈತರಿಗೆ ನಷ್ಟವಾಗದಂತೆ ತಕ್ಷಣ ಕಾರ್ಯಯೋಜನೆ ರೂಪಿಸಬೇಕು. ಪರ್ಯಾಯ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಸಲು ಕ್ರಮ ಕೈಗೊಳ್ಳಬೇಕು. ಕಬ್ಬು ಖರೀದಿಗೆ ಅಡಚಣೆ ಉಂಟಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಹಾಗೂ ಸಮೀಪದ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಕ್ಕರೆ ಕಾರ್ಖಾನೆಗಳೊಂದಿಗೆ ಸಮನ್ವಯ ಸಾಧಿಸಿ ರೈತರ ಕಬ್ಬನ್ನು ಖರೀದಿಸಿ ಕಟಾವು ಮಾಡುವ ವ್ಯವಸ್ಥೆ ಕಲ್ಪಿಸಬೇಕು ಎಂದರು.
ಗ್ರಾಮವಾರು ಕಬ್ಬು ಕಟಾವು ಯೋಜನೆ ರೂಪಿಸಿ, ಕಬ್ಬು ಕಟಾವು ಮಾಡುವ ಯಂತ್ರಗಳು, ಲಾರಿಗಳು ಹಾಗೂ ಅಗತ್ಯ ಸಾರಿಗೆ ವ್ಯವಸ್ಥೆಯನ್ನು ಗ್ರಾಮವಾರು ಪಟ್ಟಿ ಸಿದ್ಧಪಡಿಸಿ ನ್ಯಾಯಸಮ್ಮತವಾಗಿ ಹಂಚಿಕೆ ಮಾಡಬೇಕು. ಯಾವುದೇ ರೈತರ ಕಬ್ಬು ಕಟಾವಾಗದೆ ಉಳಿಯದಂತೆ ಜಿಲ್ಲಾಡಳಿತ ನಿರಂತರ ಮೇಲ್ವಿಚಾರಣೆ ನಡೆಸಬೇಕು. ರೈತರ ನಷ್ಟ ತಪ್ಪಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಬ್ಬು ಒಣಗಿ ನಷ್ಟವಾಗುವ ಮುನ್ನವೇ ಸಂಬಂಧಪಟ್ಟ ಅಧಿಕಾರಿಗಳು, ರೈತ ಸಂಘಟನೆಗಳು ಹಾಗೂ ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳೊಂದಿಗೆ ತುರ್ತು ಸಭೆ ನಡೆಸಿ, ಸ್ಪಷ್ಟ ಹಾಗೂ ಕಾಲಮಿತಿಯ ಕಾರ್ಯಯೋಜನೆ ಪ್ರಕಟಿಸಬೇಕು. ಸಿದ್ಧಸಿರಿ ಎಥೆನಾಲ್ ಕಾರ್ಖಾನೆ ನಿಗದಿಪಡಿಸಿರುವ ಕಡಿಮೆ ಕಬ್ಬಿನ ದರವನ್ನು ಮರುಪರಿಶೀಲಿಸಿ, ರೈತರ ಉತ್ಪಾದನಾ ವೆಚ್ಚ, ಕಾರ್ಮಿಕ ವೆಚ್ಚ ಹಾಗೂ ಪ್ರಸ್ತುತ ಆರ್ಥಿಕ ಪರಿಸ್ಥಿತಿಯನ್ನು ಪರಿಗಣಿಸಿ ನ್ಯಾಯಸಮ್ಮತ ಮತ್ತು ಲಾಭದಾಯಕ ದರ ನಿಗದಿಪಡಿಸಬೇಕು. ರೈತರೊಂದಿಗೆ ಚರ್ಚಿಸದೆ ಅವರ ಹಿತಾಸಕ್ತಿಗೆ ಧಕ್ಕೆಯಾಗುವ ರೀತಿಯಲ್ಲಿ ದರ ನಿಗದಿಪಡಿಸಬಾರದು ಎಂದರು.
ಮುಲ್ಲಾಮಾರಿ ನದಿಯಲ್ಲಿ ನೀರಿನ ಹರಿವು ತೀವ್ರವಾಗಿ ಕಡಿಮೆಯಾಗಿದ್ದು, ನದಿ ತೀರದ ಗ್ರಾಮಗಳಲ್ಲಿ ಕುಡಿಯುವ ನೀರು, ಜಾನುವಾರುಗಳಿಗೆ ನೀರು ಹಾಗೂ ಕೃಷಿ ಚಟುವಟಿಕೆಗಳಿಗೆ ಗಂಭೀರ ಸಮಸ್ಯೆ ಉಂಟಾಗಿದೆ. ಬೋರ್ವೆಲ್ ಮತ್ತು ಬಾವಿಗಳು ಬತ್ತುತ್ತಿರುವ ಹಿನ್ನೆಲೆಯಲ್ಲಿ ಗ್ರಾಮೀಣ ಜನರು, ರೈತರು ಹಾಗೂ ಜಾನುವಾರುಗಳು ನೀರಿನ ತೀವ್ರ ಸಂಕಷ್ಟ ಎದುರಿಸುತ್ತಿವೆ. ಆದ್ದರಿಂದ ಚಂದ್ರಂಪಳ್ಳಿ ಜಲಾಶಯದಿಂದ ಮುಲ್ಲಾಮಾರಿ ನದಿಗೆ ಪರಿಸ್ಥಿತಿಗೆ ಅನುಗುಣವಾಗಿ ಅಗತ್ಯ ಪ್ರಮಾಣದ ನೀರನ್ನು ತಕ್ಷಣ ಹರಿಸಲು ಸಂಬಂಧಪಟ್ಟ ಜಲಸಂಪನ್ಮೂಲ ಇಲಾಖೆ ಹಾಗೂ ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಕಬ್ಬು ಬೆಳೆಗಾರರ ಸಂಕಷ್ಟವನ್ನು ಸರ್ಕಾರ ಮತ್ತು ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಿ ಕಬ್ಬು ಕಟಾವು, ಪರ್ಯಾಯ ಕಾರ್ಖಾನೆಗಳಿಗೆ ಪೂರೈಕೆ, ನ್ಯಾಯಸಮ್ಮತ ಕಬ್ಬಿನ ದರ ಹಾಗೂ ಮುಲ್ಲಾಮಾರಿ ನದಿಗೆ ನೀರು ಬಿಡುಗಡೆ ಕುರಿತು ತಕ್ಷಣ ಸೂಕ್ತ ಆದೇಶ ಹೊರಡಿಸಬೇಕು. ರೈತರ ಕಬ್ಬು ಒಣಗಿ ಅಪಾರ ನಷ್ಟ ಉಂಟಾಗುವ ಪರಿಸ್ಥಿತಿ ನಿರ್ಮಾಣವಾಗದಂತೆ ಅಧಿಕಾರಿಗಳು ತಮ್ಮ ಜವಾಬ್ದಾರಿ ನಿರ್ವಹಿಸಬೇಕು. ನ್ಯಾಯಸಮ್ಮತ ಹಾಗೂ ಕಾನೂನುಬದ್ಧ ಹಕ್ಕೊತ್ತಾಯಗಳನ್ನು ನಿರ್ಲಕ್ಷಿಸಿದರೆ ರೈತರೊಂದಿಗೆ ಚರ್ಚಿಸಿ ಸಂವಿಧಾನಬದ್ಧ, ಶಾಂತಿಯುತ ಹಾಗೂ ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಶರಣಬಸಪ್ಪ ಮಮಶೆಟ್ಟಿ, ಸುಧಾಕರರೆಡ್ಡಿ ಪಾಟೀಲ್, ಅನಿಲರೆಡ್ಡಿ ಪಾಟೀಲ್, ಸಂತೋಷ ಪವಾರ್, ಅಮರನಾಥ ಹೂವಿನಭಾವಿ, ಮಹೇಶ ಕುಸುರಂಪಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
