ಬೀದರ್ನಲ್ಲಿ ನ. 13ರಂದು ‘ಅನುಭೂತಿ ಭವನ’, ‘ವರದಾನಿ ಭವನ’ ಉದ್ಘಾಟನೆ

ಬೀದರ್, ನ. 10: ಪ್ರಜಾಪಿತ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ ಬೀದರ್ ಜಿಲ್ಲೆಯಲ್ಲಿ ನಿರ್ಮಿಸಿರುವ ಎರಡು ನೂತನ ಭವನಗಳ ಉದ್ಘಾಟನಾ ಸಮಾರಂಭ ನವೆಂಬರ್ 13ರಂದು ನಡೆಯಲಿದೆ.
ಅಂದು ಬೆಳಿಗ್ಗೆ 10 ಗಂಟೆಗೆ ನೌಬಾದ್ನ ಚೌಳಿ ರಸ್ತೆಯ ಕೆಎಚ್ಬಿ ವಸತಿ ಪ್ರದೇಶದಲ್ಲಿ ‘ಅನುಭೂತಿ ಭವನ’ ಉದ್ಘಾಟನೆಯಾಗಲಿದೆ. ಸಂಜೆ 5 ಗಂಟೆಗೆ ಚಿಟಗುಪ್ಪ ತಾಲ್ಲೂಕಿನ ಮನಾಎಖೇಳ್ಳಿ ಬಸವ ಕಾಲೋನಿಯಲ್ಲಿ, ಡಿಸಿಸಿ ಬ್ಯಾಂಕ್ ಸಮೀಪ ‘ವರದಾನಿ ಭವನ’ ಲೋಕಾರ್ಪಣೆಗೊಳ್ಳಲಿದೆ.
ಬ್ರಹ್ಮಾಕುಮಾರೀಸ್ ಸಂಸ್ಥೆಯ ಹೆಚ್ಚುವರಿ ಆಡಳಿತ ಮುಖ್ಯಸ್ಥೆ ರಾಜಯೋಗಿನಿ ಬಿ.ಕೆ. ಜಯಂತಿ ದೀದೀಜಿ ಅವರು ಎರಡೂ ಭವನಗಳನ್ನು ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ. ಬೀದರ್ ಜಿಲ್ಲಾ ರಾಜಯೋಗ ಕೇಂದ್ರಗಳ ಮುಖ್ಯಸ್ಥೆ ರಾಜಯೋಗಿನಿ ಬಿ.ಕೆ. ಪ್ರತಿಮಾ ದೀದೀಜಿ ಅವರು ಪ್ರೇರಣಾ ನುಡಿಗಳನ್ನಾಡಲಿದ್ದಾರೆ.
ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಅವರು ಎರಡೂ ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಬೆಳಿಗ್ಗೆ ನೌಬಾದ್ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ತಾಳಂಪಳ್ಳಿ ರಬ್ಬರ್ಸ್ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕ ಸಂತೋಷಕುಮಾರ ತಾಳಂಪಳ್ಳಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಸಂಜೆ ಮನಾಎಖೇಳ್ಳಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಮುಖ್ಯ ಅತಿಥಿಯಾಗಿರಲಿದ್ದಾರೆ.
ರಾಜಸ್ಥಾನದ ಮೌಂಟ್ ಅಬುವಿನ ಹಿರಿಯ ರಾಜಯೋಗ ಶಿಕ್ಷಕ ಹಾಗೂ ಪ್ರೇರಣಾದಾಯಿ ಭಾಷಣಕಾರ ಬಿ.ಕೆ. ರೂಪೇಶ್ ಭಾಯ್, ಉದ್ಗೀರ್ ಕೇಂದ್ರದ ಉಸ್ತುವಾರಿ ರಾಜಯೋಗಿನಿ ಬಿ.ಕೆ. ಮಹಾನಂದಾ ದೀದೀಜಿ ಸೇರಿದಂತೆ ಸ್ಥಳೀಯ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಲಿದ್ದಾರೆ.
ಜಾಗತಿಕ ಮಟ್ಟದಲ್ಲಿ ಸೇವೆ
ಭವನಗಳನ್ನು ಉದ್ಘಾಟಿಸಲಿರುವ ರಾಜಯೋಗಿನಿ ಬಿ.ಕೆ. ಜಯಂತಿ ದೀದೀಜಿ ಅವರು ಅಂತರರಾಷ್ಟ್ರೀಯ ಮಟ್ಟದಲ್ಲಿ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಲಂಡನ್ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿರುವ ಅವರು, 1982ರಿಂದ ಜಿನೀವಾದಲ್ಲಿ ವಿಶ್ವಸಂಸ್ಥೆಯ ಬ್ರಹ್ಮಾಕುಮಾರೀಸ್ ಸಂಸ್ಥೆಯ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
2009ರಿಂದ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮಾವೇಶಗಳಲ್ಲಿಯೂ ಸಂಸ್ಥೆಯನ್ನು ಪ್ರತಿನಿಧಿಸುತ್ತಿದ್ದಾರೆ. ಯುರೋಪ್ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳ ಪ್ರಾದೇಶಿಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ಅವರು, ಆಧ್ಯಾತ್ಮಿಕ ಮೌಲ್ಯಗಳು ಹಾಗೂ ರಾಜಯೋಗದ ಸಂದೇಶವನ್ನು ಜಾಗತಿಕ ಮಟ್ಟದಲ್ಲಿ ಪಸರಿಸುತ್ತಿದ್ದಾರೆ.
