ಜಿಲ್ಲಾಸುದ್ದಿ

ಮಹಾಲಿಂಗಪ್ಪ ಕತ್ತಿ ಸರ್ ಪುಣ್ಯಸ್ಮರಣೆ: ನ.13ರಂದು ಯಾದವಾಡದಲ್ಲಿ ಬೃಹತ್ ರಕ್ತದಾನ ಶಿಬಿರ

ಮೂಡಲಗಿ, ನ.10: ತಾಲ್ಲೂಕಿನ ಯಾದವಾಡದ ಜೇಸಿಸ್ ಶಿಕ್ಷಣ ಸಂಸ್ಥೆಯ ಮಹಾಲಿಂಗಪ್ಪ ಈಶ್ವರಪ್ಪ ಈಶ್ವರಪ್ಪ ಕತ್ತಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ನವೆಂಬರ್ 13ರಂದು ಲಿಂಗೈಕ್ಯ ಮಹಾಲಿಂಗಪ್ಪ ಈಶ್ವರಪ್ಪ ಕತ್ತಿ ಸರ್ ಅವರ ಎಂಟನೇ ಪುಣ್ಯಸ್ಮರಣೆ ಅಂಗವಾಗಿ ಬೃಹತ್ ಸ್ವಯಂಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿದೆ.

ಗೋಕಾಕದ ರೋಟರಿ ರಕ್ತಭಂಡಾರ, ಕತ್ತಿ ಕುಟುಂಬ ಹಾಗೂ ಶಿಷ್ಯ ಬಳಗದ ಆಶ್ರಯದಲ್ಲಿ ಈ ಶಿಬಿರ ನಡೆಯಲಿದೆ ಎಂದು ಲಿಂಗೈಕ್ಯ ಮಹಾಲಿಂಗಪ್ಪ ಕತ್ತಿ ಅವರ ಹಿರಿಯ ಪುತ್ರ ಹಾಗೂ ಜೇಸಿಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಈಶ್ವರ ಮಹಾಲಿಂಗಪ್ಪ ಕತ್ತಿ ತಿಳಿಸಿದ್ದಾರೆ.

ಕತ್ತಿ ಕುಟುಂಬದ ಸಾಧಕರ ಹೆಸರಿನಲ್ಲಿ ಈಗಾಗಲೇ ಹಲವು ಬಾರಿ ಸ್ವಯಂಪ್ರೇರಿತ ರಕ್ತದಾನ ಶಿಬಿರಗಳನ್ನು ಆಯೋಜಿಸಲಾಗಿದೆ. ಇದೀಗ ಎಂಟನೇ ಪುಣ್ಯಸ್ಮರಣೆಯ ನಿಮಿತ್ತ ಮತ್ತೊಂದು ಬೃಹತ್ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ.

ಶಿಕ್ಷಣ ಮತ್ತು ಸಮಾಜಸೇವೆಗೆ ಅಪಾರ ಕೊಡುಗೆ

ಯಾದವಾಡದಲ್ಲಿ ಲಿಂಗೈಕ್ಯ ಮಹಾಲಿಂಗಪ್ಪ ಈಶ್ವರಪ್ಪ ಕತ್ತಿ ಅವರು ನಿಧನರಾಗಿ ಎಂಟು ವರ್ಷಗಳಾದರೂ ಶಿಕ್ಷಣ, ಕೃಷಿ, ಸಮಾಜಸೇವೆ ಹಾಗೂ ದೈಹಿಕ ಶಿಕ್ಷಣ ಕ್ಷೇತ್ರಗಳಲ್ಲಿ ಅವರು ಮಾಡಿರುವ ಸಾಧನೆಗಳು ಇಂದಿಗೂ ಸ್ಮರಣೀಯವಾಗಿವೆ.

ಗ್ರಾಮದ ಹಿರಿಯರಾಗಿದ್ದ ಅವರು 1958ರಲ್ಲಿ ಯಾದವಾಡ ಕುಗ್ರಾಮದಲ್ಲಿ ಪ್ರೌಢಶಾಲೆ ಸ್ಥಾಪಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಶಾಲೆ ಸ್ಥಾಪಿಸುವುದರ ಜೊತೆಗೆ ಆರಂಭದಲ್ಲಿ ಯಾವುದೇ ವೇತನ ಪಡೆಯದೆ ದೈಹಿಕ ಶಿಕ್ಷಣ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದ್ದರು. ಗಣಿತ ವಿಷಯವನ್ನೂ ಪರಿಣಾಮಕಾರಿಯಾಗಿ ಬೋಧಿಸುತ್ತಿದ್ದರು.

ಇದರಿಂದ ಯಾದವಾಡ ಮಾತ್ರವಲ್ಲದೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ವಿದ್ಯಾರ್ಥಿಗಳಿಗೆ ಪ್ರೌಢಶಿಕ್ಷಣ ಪಡೆದು ಎಸ್‌ಎಸ್‌ಎಲ್‌ಸಿ ವ್ಯಾಸಂಗ ಪೂರ್ಣಗೊಳಿಸಲು ಅನುಕೂಲವಾಯಿತು. ಅವರ ಮಾರ್ಗದರ್ಶನದಲ್ಲಿ ಶಿಕ್ಷಣ ಪಡೆದ ಅನೇಕರು ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟಗಾರ ಲಿಂಗೈಕ್ಯ ಬಿ.ಬಿ. ಕಲ್ಯಾಣಿ ಅವರ ಅಧ್ಯಕ್ಷತೆಯಲ್ಲಿ ಹಾಗೂ ಲಿಂಗೈಕ್ಯ ವಿಠಲ ಗುಡಿ ಅವರ ಸಂಸ್ಥಾಪಕ ಕಾರ್ಯದರ್ಶಿತ್ವದಲ್ಲಿ ಸಂಸ್ಥೆಯ ಸ್ಥಾಪಕ ಪ್ರಭಾವಿ ನಿರ್ದೇಶಕರಾಗಿ ಮಹಾಲಿಂಗಪ್ಪ ಕತ್ತಿ ಅವರು ಶಿಕ್ಷಣ ದಾಸೋಹದಲ್ಲಿ ತೊಡಗಿಸಿಕೊಂಡಿದ್ದರು. ಇದು ಅವರ ಶೈಕ್ಷಣಿಕ ಸೇವೆಯ ಮಹತ್ವದ ಸಾಧನೆಯಾಗಿದೆ.

ದೇಹದಾನದಲ್ಲೂ ಮಾದರಿಯಾದ ಕತ್ತಿ ಕುಟುಂಬ

ಲಿಂಗೈಕ್ಯ ಮಹಾಲಿಂಗಪ್ಪ ಕತ್ತಿ ಅವರ ಕುಟುಂಬ ಅವಿಭಕ್ತ ಕುಟುಂಬ ವ್ಯವಸ್ಥೆಗೆ ಮಾದರಿಯಾಗಿದೆ. ಅವರ ನಡೆ-ನುಡಿಗಳನ್ನು ಸಹೋದರರಾದ ಮಹಾಂತಪ್ಪ ಮತ್ತು ಬಸಲಿಂಗಪ್ಪ ಅವರ ಕುಟುಂಬದವರೂ ಅನುಸರಿಸಿಕೊಂಡು ಬಂದಿದ್ದಾರೆ. ಹೀಗಾಗಿ ಕತ್ತಿ ಕುಟುಂಬವು ಯಾದವಾಡ ಗ್ರಾಮಕ್ಕೆ ಮಾತ್ರವಲ್ಲದೆ ಬೆಳಗಾವಿ ಜಿಲ್ಲೆಗೂ ಮಾದರಿಯಾಗಿದೆ.

ಮಹಾಲಿಂಗಪ್ಪ ಕತ್ತಿ ಅವರು ನಿಧನರಾದಾಗ ಅವರ ದೇಹವನ್ನು ವೈದ್ಯಕೀಯ ಉದ್ದೇಶಕ್ಕಾಗಿ ದಾನ ಮಾಡಲಾಗಿತ್ತು. ಇದೇ ರೀತಿ ಹಿರಿಯ ಸೊಸೆ ಶ್ರೀಮತಿ ಪದ್ಮಾವತಿ ಕತ್ತಿ, ಕಿರಿಯ ಸಹೋದರ ದಿ. ಬಸಲಿಂಗಪ್ಪ ಕತ್ತಿ ಅವರೂ ನಿಧನದ ನಂತರ ದೇಹದಾನ ಮಾಡುವ ಮೂಲಕ ಮಾನವೀಯ ಮೌಲ್ಯ ಮೆರೆದಿದ್ದಾರೆ. ಒಂದೇ ಕುಟುಂಬದ ಮೂವರು ದೇಹದಾನ ಮಾಡಿರುವುದು ಕತ್ತಿ ಕುಟುಂಬದ ವಿಶೇಷ ಸಾಧನೆಯಾಗಿದೆ.

ತಂದೆಯ ಹಾದಿಯಲ್ಲಿ ಮುನ್ನಡೆಯುತ್ತಿರುವ ಈಶ್ವರ ಕತ್ತಿ

ಪ್ರಸ್ತುತ ಕತ್ತಿ ಕುಟುಂಬದಲ್ಲಿ ಹಿರಿಯ ಜೀವಿಯಾಗಿರುವ ಶ್ರೀಮತಿ ಬಸಲಿಂಗಮ್ಮ ಅವರ ಮಾರ್ಗದರ್ಶನದಲ್ಲಿ ಮೂರು ಕುಟುಂಬಗಳು ಇಂದಿಗೂ ಅವಿಭಕ್ತ ಕುಟುಂಬದ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿವೆ.

ಮಹಾಲಿಂಗಪ್ಪ ಕತ್ತಿ ಅವರ ಹಿರಿಯ ಪುತ್ರ ಈಶ್ವರ ಎಂ. ಕತ್ತಿ ಅವರು ತಂದೆಯ ಹಾದಿಯಲ್ಲಿಯೇ ಮುನ್ನಡೆಯುತ್ತಿದ್ದಾರೆ. ಮಹಾಲಿಂಗಪ್ಪ ಕತ್ತಿ ಅವರು ಶ್ರೀ ಗುರುನೀಲಕಂಠ ಸ್ವಾಮಿ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದ ಸಂದರ್ಭದಲ್ಲಿ ಜೇಸಿಸ್ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ, ವ್ಯಕ್ತಿತ್ವ ವಿಕಸನದ ಜೊತೆಗೆ ಜೇಸಿಸ್, ಜೇಸಿಸ್ ಯೂತ್ ವಿಂಗ್, ಜೇಸಿಸ್ ವುಮೆನ್ ವಿಂಗ್ ಹಾಗೂ ಜೇಸಿಸ್ ಕಿಡ್ಸ್ ಸೇರಿದಂತೆ ವಿವಿಧ ವಿಭಾಗಗಳನ್ನು ಆರಂಭಿಸಿದ್ದರು.

ಇವುಗಳ ಮೂಲಕ ಗ್ರಾಮದಲ್ಲಿ ವ್ಯಕ್ತಿತ್ವ ವಿಕಸನ ಹಾಗೂ ಕುಟುಂಬದ ಸಮಗ್ರ ಪ್ರಗತಿಗೆ ಮಹತ್ವದ ಕೊಡುಗೆ ನೀಡಿದ್ದರು.

ತಂದೆಯ ನಿಧನದ ನಂತರ ಈಶ್ವರ ಎಂ. ಕತ್ತಿ ಅವರು ಜೇಸಿಸ್ ಶಿಕ್ಷಣ ಸಂಸ್ಥೆಯನ್ನು ಮುನ್ನಡೆಸಿಕೊಂಡು ಬಂದು ಪದವಿಪೂರ್ವ ಮಹಾವಿದ್ಯಾಲಯದವರೆಗೆ ವಿಸ್ತರಿಸಿದ್ದಾರೆ. ಶಿಕ್ಷಣ, ಸಂಘಟನೆ ಹಾಗೂ ರಾಜಕೀಯ ಕ್ಷೇತ್ರಗಳಲ್ಲಿಯೂ ಹೊಸ ಆಶಾಕಿರಣವಾಗಿ ಹೊರಹೊಮ್ಮಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button