ಉರ್ದು ಭಾಷೆ ಸಂವಹನದ ಸಾಧನ: ಡಾ. ಅಥರ್ ಮೊಯಿಜ್

ಕಲಬುರಗಿ, ನ.10: ಉರ್ದು ಭಾಷೆಯು ದಖನ್ ಪ್ರದೇಶದಲ್ಲಿ ಆಳವಾದ ಐತಿಹಾಸಿಕ ಬೇರುಗಳನ್ನು ಹೊಂದಿದೆ. ಹಿಂದಿನ ಹಲವು ಸರ್ಕಾರಗಳ ಆಡಳಿತ ಭಾಷೆಯಾಗಿಯೂ ಉರ್ದು ಬಳಕೆಯಲ್ಲಿತ್ತು. ಉರ್ದು ಒಂದು ಸಂವಹನದ ಸಾಧನವಾಗಿದ್ದು, ಯಾವುದೇ ನಿರ್ದಿಷ್ಟ ಸಮುದಾಯ ಅಥವಾ ಧರ್ಮಕ್ಕೆ ಸೀಮಿತವಾದ ಭಾಷೆಯಲ್ಲ ಎಂದು ಖಾಜಾ ಬಂದೇ ನವಾಜ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಅಥರ್ ಮೊಯಿಜ್ ಹೇಳಿದರು.
ನಗರದ ಹಿದಾಯತ್ ಸೆಂಟರ್‌ನಲ್ಲಿ ಸೋಮವಾರ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ಅಲ್ಪಸಂಖ್ಯಾತ ನೌಕರರ ಸಂಘದ ವತಿಯಿಂದ ಆಯೋಜಿಸಿದ್ದ ವಿಶ್ವ ಉರ್ದು ದಿನಾಚರಣೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಉರ್ದು ಭಾಷೆಯ ಐತಿಹಾಸಿಕ ಮಹತ್ವವನ್ನು ವಿವರಿಸಿದರು.
ಮತ್ತೊಬ್ಬ ಸಂಪನ್ಮೂಲ ವ್ಯಕ್ತಿ ಡಾ. ಫಹೀಮ್ ಪೀರ್ಜಾದ ಮಾತನಾಡಿ, ಉರ್ದು ಸಾಹಿತ್ಯಕ್ಕೆ ಮುಸ್ಲಿಮೇತರ ಸಾಹಿತಿಗಳು ಮತ್ತು ಕವಿಗಳ ಕೊಡುಗೆಯೂ ಅಪಾರವಾಗಿದೆ. ಅನೇಕ ಮುಸ್ಲಿಮೇತರರು ಉರ್ದು ಭಾಷೆಯನ್ನು ಅಳವಡಿಸಿಕೊಂಡು ಉತ್ತಮ ಸಾಹಿತ್ಯ ಕೃತಿಗಳನ್ನು ರಚಿಸಿದ್ದಾರೆ. ವಿಶೇಷವಾಗಿ ದಖನ್ ಪ್ರದೇಶದ ಉರ್ದು ಭಾಷೆಯಲ್ಲಿ ವಿಶಿಷ್ಟ ಮಾಧುರ್ಯವಿದ್ದು, ಪ್ರಾದೇಶಿಕ ಭಾಷೆಗಳ ಪ್ರಭಾವವೂ ಬೆರೆತಿದೆ ಎಂದು ತಿಳಿಸಿದರು.
ಸಂಘದ ಅಧ್ಯಕ್ಷ ಸೈಯದ್ ನಜೀರುದ್ದೀನ್ ಮಾತನಾಡಿ, ಕವಿಗಳು ಮತ್ತು ಸಾಹಿತಿಗಳನ್ನು ಪ್ರೋತ್ಸಾಹಿಸುವುದು ಹಾಗೂ ಮುಂದಿನ ಪೀಳಿಗೆಗಾಗಿ ಉರ್ದು ಭಾಷೆಯನ್ನು ಉಳಿಸಿ ಬೆಳೆಸುವುದು ವಿಶ್ವ ಉರ್ದು ದಿನಾಚರಣೆಯ ಪ್ರಮುಖ ಉದ್ದೇಶವಾಗಿದೆ ಎಂದರು.
ಉರ್ದು ಸಾಹಿತ್ಯಕ್ಕೆ ಸಲ್ಲಿಸಿದ ಗಣನೀಯ ಸೇವೆಯನ್ನು ಗುರುತಿಸಿ ಆರು ಮಂದಿ ಹಿರಿಯ ಸಾಹಿತಿಗಳು ಹಾಗೂ ಕವಿಗಳಿಗೆ ಜೀವಮಾನ ಸಾಧನೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪುರಸ್ಕೃತರಾದ ಹಮೀದ್ ಅಕ್ಮಲ್, ಅಬ್ದುಲ್ ಹಮೀದ್ ಸೋಹರ್ದಿ, ಹಕೀಮ್ ಶಾಕಿರ್, ಅಬ್ದುಲ್ ಹಮೀದ್ ಅಕ್ಬರ್, ಮುಸ್ತಾಕ್ ಅಹ್ಮದ್ ಸೋಹರ್ದಿ ಹಾಗೂ ಡಾ. ಅಕ್ರಮ್ ನಕ್ಕಾಶ್ ಅವರನ್ನು ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಕಲಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ಹಾಗೂ ದಖನ್ ಪ್ರದೇಶದ ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ನಡೆಸುತ್ತಿರುವ ಪ್ರಯತ್ನಗಳನ್ನು ಗುರುತಿಸಿ ಕಲಾವಿದರಾದ ರೆಹಮಾನ್ ಪಟೇಲ್ ಮತ್ತು ಮೊಹಮ್ಮದ್ ಅಯಾಜುದ್ದೀನ್ ಪಟೇಲ್ ಅವರನ್ನು ಸನ್ಮಾನಿಸಲಾಯಿತು.
ಸುಮಾರು 16 ಮಂದಿ ಹಿರಿಯ ಹಾಗೂ ಕಿರಿಯ ಕವಿಗಳು ಕವಿಗೋಷ್ಠಿಯಲ್ಲಿ ಭಾಗವಹಿಸಿ ತಮ್ಮ ಕವನಗಳನ್ನು ವಾಚಿಸಿದರು. ಹಲವು ಶಾಲಾ ವಿದ್ಯಾರ್ಥಿಗಳೂ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಡಾ. ಫಾರೂಕ್ ಮಣೂರ್, ಆರಿಫ್ ಮಿರ್ಜಾ, ಅಸದ್ ಅಲಿ ಅನ್ಸಾರಿ, ಎಂ.ಎಂ. ಬೈಗ್, ಡಾ. ಅಸ್ಲಂ ಸಯ್ಯದ್, ಖಾಜಿ ಅಬ್ದುಲ್ ಮೊಹಿತ್, ರೆಹಮಾನ್ ಪಟೇಲ್, ನವಾಬ್ ಖಾನ್ ಹಾಗೂ ಮುಜೀಬ್ ಅಲಿ ಖಾನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
