ಉದ್ಯೋಗಶಿಕ್ಷಣ

ಉದ್ಯೋಗ ಮೇಳಗಳು ನಿರುದ್ಯೋಗ ನಿರ್ಮೂಲನ ಅಭಿಯಾನಕ್ಕೆ ಪೂರಕ: ಶರಣು ಬಿ. ಹೊನ್ನಗಜ್ಜಿ

ಕಲಬುರಗಿಯಲ್ಲಿ ಕರಾವಳಿ ಟೀಚರ್ಸ್ ಹೆಲ್ಪ್‌ಲೈನ್ ಉದ್ಯೋಗ ಮಾಹಿತಿ ಕೇಂದ್ರ ಆರಂಭ; ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶ ಕಲ್ಪಿಸಲು ಆದ್ಯತೆ

ಕಲಬುರಗಿ: ಉದ್ಯೋಗಕ್ಕಾಗಿ ಅಲೆದಾಡುತ್ತಿರುವ ಯುವಜನರಿಗೆ ಸೂಕ್ತ ಅವಕಾಶಗಳನ್ನು ಕಲ್ಪಿಸುವ ಮೂಲಕ ಅವರ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಬೇಕು. ಉದ್ಯೋಗ ಮೇಳಗಳು ಉದ್ಯೋಗಾಕಾಂಕ್ಷಿಗಳು ಮತ್ತು ಉದ್ಯೋಗದಾತರ ನಡುವಿನ ಸಂಪರ್ಕ ಸೇತುವೆಗಳಾಗಿ ಕಾರ್ಯನಿರ್ವಹಿಸುತ್ತವೆ ಎಂದು ಅನನ್ಯ ಪದವಿ ಮಹಾವಿದ್ಯಾಲಯದ ಸಂಸ್ಥಾಪಕ ಶರಣು ಬಿ. ಹೊನ್ನಗಜ್ಜಿ (ಪೂಜಾರಿ) ಹೇಳಿದರು.

ನಗರದ ಹಳೆಯ ಜೇವರ್ಗಿ ರಸ್ತೆಯಲ್ಲಿರುವ ಅನನ್ಯ ಪದವಿ ಮಹಾವಿದ್ಯಾಲಯದಲ್ಲಿ ಭಾನುವಾರ ಜನಾಭಿಪ್ರಾಯ ಡಿಜಿಟಲ್ ಮಾಧ್ಯಮ ಹಾಗೂ ಕರ್ನಾಟಕ ಟೀಚರ್ಸ್ ಹೆಲ್ಪ್‌ಲೈನ್ ಸಹಯೋಗದಲ್ಲಿ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ಕಲ್ಯಾಣ ಕರ್ನಾಟಕ ಭಾಗದಲ್ಲಿ ವಿದ್ಯಾವಂತರ ಸಂಖ್ಯೆ ಹೆಚ್ಚುತ್ತಿದ್ದರೂ ಸ್ಥಳೀಯವಾಗಿ ಉದ್ಯೋಗಾವಕಾಶಗಳು ಸೀಮಿತವಾಗಿವೆ. ಹೀಗಾಗಿ ಯುವಕರು ಉದ್ಯೋಗ ಅರಸಿ ಬೆಂಗಳೂರು ಸೇರಿದಂತೆ ದೂರದ ನಗರಗಳಿಗೆ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಯುವಜನರು ಪದವಿ ಶಿಕ್ಷಣದ ಜೊತೆಗೆ ಸಂವಹನ ಕಲೆ, ತಾಂತ್ರಿಕ ಜ್ಞಾನ ಹಾಗೂ ವೃತ್ತಿಪರ ಕೌಶಲಗಳನ್ನು ಬೆಳೆಸಿಕೊಳ್ಳಬೇಕು. ಇಂತಹ ಉದ್ಯೋಗ ಮೇಳಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಕೈಗಾರಿಕೆಗಳ ಕೊರತೆಯಿಂದ ನಿರುದ್ಯೋಗ ಹೆಚ್ಚಳ: ರಾಜೇಂದ್ರ ರಾಜವಾಳ

ಕಲ್ಯಾಣ ಕರ್ನಾಟಕದಲ್ಲಿ ಕೈಗಾರಿಕೆಗಳು, ಕಾರ್ಖಾನೆಗಳು ಮತ್ತು ಖಾಸಗಿ ಉದ್ಯಮಗಳ ಸ್ಥಾಪನೆಗೆ ಆದ್ಯತೆ ನೀಡದಿರುವುದು ನಿರುದ್ಯೋಗ ಸಮಸ್ಯೆ ಹೆಚ್ಚಳಕ್ಕೆ ಪ್ರಮುಖ ಕಾರಣವಾಗಿದೆ ಎಂದು ಜನಾಭಿಪ್ರಾಯ ಡಿಜಿಟಲ್ ಮಾಧ್ಯಮದ ಸಂಪಾದಕ ರಾಜೇಂದ್ರ ರಾಜವಾಳ ಹೇಳಿದರು.

ಉದ್ಯೋಗಕ್ಕಾಗಿ ಯುವಕರು ಬೇರೆ ರಾಜ್ಯಗಳಿಗೆ ವಲಸೆ ಹೋಗುವ ಬದಲು ಸ್ಥಳೀಯವಾಗಿಯೇ ಉದ್ಯೋಗ ಪಡೆಯುವ ವಾತಾವರಣ ನಿರ್ಮಾಣವಾಗಬೇಕು. ಕಂಪನಿಗಳು ಮತ್ತು ಉದ್ಯೋಗದಾತ ಸಂಸ್ಥೆಗಳು ಸ್ಥಳೀಯ ಪ್ರದೇಶಗಳಿಗೆ ಆಗಮಿಸಿ, ಯುವಕರ ವಿದ್ಯಾರ್ಹತೆ ಹಾಗೂ ಕೌಶಲಕ್ಕೆ ಅನುಗುಣವಾಗಿ ಉದ್ಯೋಗ ಕಲ್ಪಿಸಬೇಕು. ಇದಕ್ಕಾಗಿ ಸರ್ಕಾರ, ಉದ್ಯಮಿಗಳು, ಶಿಕ್ಷಣ ಸಂಸ್ಥೆಗಳು ಹಾಗೂ ಸಾಮಾಜಿಕ ಸಂಘಟನೆಗಳು ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕು. ಉದ್ಯೋಗ ಮೇಳ ಆಯೋಜನೆಯು ಜನಾಭಿಪ್ರಾಯ ಮಾಧ್ಯಮದ ಸಾಮಾಜಿಕ ಬದ್ಧತೆಯ ಪ್ರಯತ್ನವಾಗಿದೆ ಎಂದು ತಿಳಿಸಿದರು.

ಉದ್ಯೋಗ ಮಾಹಿತಿ ಕೇಂದ್ರದಿಂದ ಉತ್ತರ ಕರ್ನಾಟಕದವರಿಗೆ ಅನುಕೂಲ: ಪಾಂಡುರಂಗ ರಾವ್

ಕರಾವಳಿ ಟೀಚರ್ಸ್ ಹೆಲ್ಪ್‌ಲೈನ್ ಸಂಸ್ಥೆಯ ನಿರ್ದೇಶಕ ಪಾಂಡುರಂಗ ರಾವ್ ಮಾತನಾಡಿ, ಉತ್ತರ ಕರ್ನಾಟಕದ ನಿರುದ್ಯೋಗಿ ಯುವಕ-ಯುವತಿಯರಿಗೆ ಉದ್ಯೋಗ ಮಾಹಿತಿ ಹಾಗೂ ಮಾರ್ಗದರ್ಶನ ಒದಗಿಸುವ ಉದ್ದೇಶದಿಂದ ಕಲಬುರಗಿಯಲ್ಲಿ ನೂತನ ಉದ್ಯೋಗ ಮಾಹಿತಿ ಕೇಂದ್ರ ಆರಂಭಿಸಲಾಗಿದೆ ಎಂದರು.

ಶಾಲಾ-ಕಾಲೇಜುಗಳ ಶಿಕ್ಷಕ ಹಾಗೂ ಬೋಧಕೇತರ ಹುದ್ದೆಗಳ ಜೊತೆಗೆ ಆಕ್ಸಿಸ್, ಐಸಿಐಸಿಐ, ಕೋಟಕ್ ಮಹೀಂದ್ರಾ, ಎಚ್‌ಡಿಎಫ್‌ಸಿ ಸೇರಿದಂತೆ ವಿವಿಧ ಬ್ಯಾಂಕುಗಳು ಹಾಗೂ ಬೆಂಗಳೂರಿನ ಪ್ರತಿಷ್ಠಿತ ಬಹುರಾಷ್ಟ್ರೀಯ ಕಂಪನಿಗಳಲ್ಲಿನ ಉದ್ಯೋಗಾವಕಾಶಗಳ ಕುರಿತು ಮಾಹಿತಿ ಮತ್ತು ಮಾರ್ಗದರ್ಶನ ನೀಡಲಾಗುವುದು. ಕಲಬುರಗಿ, ಯಾದಗಿರಿ ಹಾಗೂ ಬೀದರ್ ಜಿಲ್ಲೆಗಳ ಉದ್ಯೋಗಾಕಾಂಕ್ಷಿಗಳು ಈ ಕೇಂದ್ರದ ಸದುಪಯೋಗ ಪಡೆದುಕೊಳ್ಳಬಹುದು ಎಂದು ಹೇಳಿದರು.

ಉದ್ಯೋಗ ಮೇಳದಲ್ಲಿ ವಿವಿಧ ಶಾಲಾ-ಕಾಲೇಜುಗಳು, ಬ್ಯಾಂಕಿಂಗ್ ಸಂಸ್ಥೆಗಳು ಹಾಗೂ ಖಾಸಗಿ ಕಂಪನಿಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ನೂರಾರು ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡು ವಿವಿಧ ಉದ್ಯೋಗಾವಕಾಶಗಳ ಕುರಿತು ಮಾಹಿತಿ ಪಡೆದುಕೊಂಡರು.

ಕಾಲೇಜಿನ ಉಪನ್ಯಾಸಕರಾದ ರಾಹುಲ್ ಶೇರಿಕರ್, ಶರಣ್ ಬಡದಾಳ, ಜಗನ್ನಾಥ ಫುಲ್ಲಾ, ಪ್ರವೀಣಕುಮಾರ ನವಲೆ ಹಾಗೂ ಅನಿಲ ನೈಕೋಡಿ ಉಪಸ್ಥಿತರಿದ್ದರು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಕರಾವಳಿ ಟೀಚರ್ಸ್ ಹೆಲ್ಪ್‌ಲೈನ್, ಕಲಬುರಗಿ.
ದೂರವಾಣಿ: 9743218480 / 9743328480.

Related Articles

Leave a Reply

Your email address will not be published. Required fields are marked *

Back to top button