ಮಕ್ಕಳ ಸಾಹಿತ್ಯಕ್ಕೆ ಪ್ರೋತ್ಸಾಹ ಅಗತ್ಯ: ಎ.ಕೆ. ರಾಮೇಶ್ವರ
ಮಕ್ಕಳ ಭಾವನೆಗಳಿಗೆ ಸಾಹಿತ್ಯದ ಮೂಲಕ ಅಭಿವ್ಯಕ್ತಿ | ಬಾಲಲೇಖಕಿ ವರ್ಷಿಣಿ ಕೃತಿ ಲೋಕಾರ್ಪಣೆ

ಕಲಬುರಗಿ, ನ. 3: ಇತ್ತೀಚಿನ ದಿನಗಳಲ್ಲಿ ಮಕ್ಕಳ ಸಾಹಿತ್ಯ ರಚನೆಯಲ್ಲಿ ಬಾಲಲೇಖಕಿಯರು ಮತ್ತು ಬಾಲಲೇಖಕರು ಹೆಚ್ಚಿನ ಆಸಕ್ತಿ ತೋರುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ಇಂತಹ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಅತ್ಯಂತ ಅಗತ್ಯ ಎಂದು ಮಕ್ಕಳ ಸಾಹಿತಿ ಎ.ಕೆ. ರಾಮೇಶ್ವರ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಕನ್ನಡ ಭವನದ ಸುವರ್ಣ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬಾಲಲೇಖಕಿ ಕು. ವರ್ಷಿಣಿ ಮಾಲಿಪಾಟೀಲ ಅವರು ರಚಿಸಿದ ‘ಕಾವ್ಯ ವರ್ಷಿಣಿ’ ಕೃತಿಯನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.
ಮಕ್ಕಳ ಭಾವನೆಗಳು ಕವಿತೆ ಮತ್ತು ಸಾಹಿತ್ಯದ ರೂಪದಲ್ಲಿ ಅಭಿವ್ಯಕ್ತಿಗೊಳ್ಳುತ್ತವೆ. ಅನೇಕ ಹಿರಿಯ ಸಾಹಿತಿಗಳು ಮಕ್ಕಳ ಸಾಹಿತ್ಯ ರಚಿಸಿದ್ದಾರೆ. ಆದರೆ ಮಕ್ಕಳೇ ಸ್ವತಃ ರಚಿಸುವ ಸಾಹಿತ್ಯದಲ್ಲಿ ವಿಶೇಷ ಸತ್ವವಿರುತ್ತದೆ. ಹೀಗಾಗಿ ಮಕ್ಕಳ ಸಾಹಿತ್ಯಕ್ಕೆ ಸೂಕ್ತ ವೇದಿಕೆಗಳನ್ನು ಕಲ್ಪಿಸಬೇಕು. ರಾಜ್ಯ ಸರ್ಕಾರವೂ ಮಕ್ಕಳ ಸಾಹಿತಿಗಳನ್ನು ಗುರುತಿಸಿ ಗೌರವಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಕಲ್ಯಾಣ ಕರ್ನಾಟಕದ ಈ ನೆಲದಲ್ಲಿ ಪ್ರತಿಭಾವಂತರ ಕೊರತೆಯಿಲ್ಲ. ಆದರೆ ಅವರ ಪ್ರತಿಭೆಯನ್ನು ಗುರುತಿಸಿ ಬೆಳೆಸುವ ಮನಸ್ಸುಗಳ ಕೊರತೆಯಿದೆ. ಕನ್ನಡ ಸಾಹಿತ್ಯ ಪರಿಷತ್ತು ಕಳೆದ ಐದು ವರ್ಷಗಳಿಂದ ಜಿಲ್ಲೆಯ ಪ್ರತಿಭಾವಂತ ಮಕ್ಕಳನ್ನು ಪ್ರೋತ್ಸಾಹಿಸುವ ಹಾಗೂ ಗೌರವಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದೆ ಎಂದರು.
ಕು. ವರ್ಷಿಣಿ ಅವರ ಕೃತಿ ಕನ್ನಡ ಸಾರಸ್ವತ ಲೋಕದ ಶ್ರೀಮಂತಿಕೆಗೆ ಮತ್ತೊಂದು ಕೊಡುಗೆಯಾಗಿದೆ. ಅವರಿಂದ ಇನ್ನಷ್ಟು ಕೃತಿಗಳು ಪ್ರಕಟವಾಗಲಿ ಎಂದು ಆಶಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಕಳೆದ ಐದು ವರ್ಷಗಳಿಂದ ಜಿಲ್ಲೆಯ ಜನರನ್ನು ಒಗ್ಗೂಡಿಸುವ ಮತ್ತು ಕನ್ನಡಾಭಿಮಾನ ಬೆಳೆಸುವ ಕಾರ್ಯದಲ್ಲಿ ತೊಡಗಿದೆ. ಪರಿಷತ್ತು ಕೇವಲ ಒಂದು ಸಂಘಟನೆಯಲ್ಲ; ಸಮಸ್ತ ಕನ್ನಡಿಗರ ಭಾಷಾಭಿಮಾನ, ಸಾಹಿತ್ಯ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಪ್ರತಿನಿಧಿಸುವ ಪವಿತ್ರ ಸಂಸ್ಥೆಯಾಗಿದೆ. ಪರಿಷತ್ತು ನಮಗೆ ಘನತೆ ಮತ್ತು ಗೌರವ ತಂದುಕೊಟ್ಟಿದೆ. ಆ ಗೌರವಕ್ಕೆ ಚ್ಯುತಿ ಬಾರದಂತೆ ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ತಿಳಿಸಿದರು.
ನಿವೃತ್ತ ಉಪನ್ಯಾಸಕಿ ಸುಲೇಖಾ ಮಾಲಿಪಾಟೀಲ ಅವರು ಕೃತಿಯ ಪರಿಚಯ ಮಾಡಿಕೊಟ್ಟರು.
ಕೃತಿಯ ಲೇಖಕಿ ವರ್ಷಿಣಿ ಮಾಲಿಪಾಟೀಲ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್. ಧನ್ನಿ, ಅಜೀಂ ಪ್ರೇಮ್ಜಿ ಶಾಲೆಯ ಮುಖ್ಯಸ್ಥೆ ರಾಜಶ್ರೀ ನಾಯಕ, ರಮೇಶ ಮಾರನಾಳ, ಮೀರಾ ಪಾಟೀಲ ಹಾಗೂ ವೀರಣ್ಣ ಪಾಟೀಲ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.



