ಜಿಲ್ಲಾಸುದ್ದಿಸಮಾಜ

ಹಿರಿಯರನ್ನು ಪೂಜಿಸುವುದು ದೇವರನ್ನು ಪೂಜಿಸಿದಂತೆ: ಶಿವಕಾಂತ ಚಿಮ್ಮಾ

ಹಿರಿಯರ ಸೇವೆ, ಪ್ರೀತಿ ಮತ್ತು ಕಾಳಜಿಯೇ ನಿಜವಾದ ಪುಣ್ಯಕಾರ್ಯ; ಕಲಬುರಗಿಯಲ್ಲಿ ಹಿರಿಯರಿಗೆ ಗೌರವ ಸಮರ್ಪಣೆ

ಕಲಬುರಗಿ, ನ. 2: ಜೀವನದ ನಿಜವಾದ ಅರ್ಥವನ್ನು ಅರಿಯಲು, ಮಾನವೀಯ ಮೌಲ್ಯಗಳನ್ನು ಸ್ಮರಿಸಲು ಹಾಗೂ ಹಿರಿಯರ ಆಶೀರ್ವಾದ ಪಡೆಯಲು ಅವರೊಂದಿಗೆ ಪ್ರೀತಿ ಮತ್ತು ಗೌರವದಿಂದ ನಡೆದುಕೊಳ್ಳಬೇಕು ಎಂದು ಬೆಳಗುಂಪಿಯ ಪೂಜ್ಯ ಅಭಿನವ ಪರ್ವತೇಶ್ವರ ಶಿವಾಚಾರ್ಯರು ಹೇಳಿದರು.

ನಗರದ ಚಿಂಚೋಳಿ ರಸ್ತೆಯಲ್ಲಿರುವ ಮಹಾದೇವಿ ವೃದ್ಧಾಶ್ರಮದಲ್ಲಿ ಜ್ಞಾನ ಶಿಕ್ಷಣ ಸಂಸ್ಥೆಯ ವತಿಯಿಂದ ಆಯೋಜಿಸಿದ್ದ ‘ಹಿರಿಯರಿಗೆ ಗೌರವಿಸಿ, ಉತ್ತಮ ಸಮಾಜ ನಿರ್ಮಿಸಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಮಾನವನ ಜೀವನದಲ್ಲಿ ಹಣ, ಆಸ್ತಿ, ಅಂತಸ್ತು ಮತ್ತು ಅಧಿಕಾರ ಎಲ್ಲವೂ ತಾತ್ಕಾಲಿಕ. ಆದರೆ ನಾವು ಹಂಚಿದ ಪ್ರೀತಿ, ಮಾಡಿದ ಸೇವೆ, ತೋರಿದ ಕರುಣೆ ಹಾಗೂ ಗಳಿಸಿದ ಹೃದಯಗಳ ಆಶೀರ್ವಾದ ಮಾತ್ರ ಶಾಶ್ವತವಾಗಿ ಉಳಿಯುತ್ತವೆ ಎಂದು ಹೇಳಿದರು.

ಜ್ಞಾನ ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಸಂಗಮೇಶ್ವರ ಸರಡಗಿ ಮಾತನಾಡಿ, ವೃದ್ಧಾಶ್ರಮದಲ್ಲಿ ವಾಸಿಸುವ ಪ್ರತಿಯೊಬ್ಬ ಹಿರಿಯರ ಹಿಂದೆ ಒಂದೊಂದು ಅನುಭವದ ಕಥೆ, ತ್ಯಾಗದ ಇತಿಹಾಸ ಹಾಗೂ ಬದುಕಿನ ಪಾಠವಿದೆ. ಹಿರಿಯರು ಕೇವಲ ವಯಸ್ಸಾದವರಲ್ಲ; ಅವರು ನಮ್ಮ ಸಂಸ್ಕೃತಿಯ ಜೀವಂತ ವಿಶ್ವವಿದ್ಯಾಲಯಗಳಿದ್ದಂತೆ ಎಂದರು.

ದೇವರನ್ನು ದೇವಾಲಯಗಳಲ್ಲಿ ಹುಡುಕುವ ನಾವು, ಹಸಿದವರಿಗೆ ಅನ್ನ ನೀಡುವಾಗ, ನೋವಿನಲ್ಲಿರುವವರಿಗೆ ಸಾಂತ್ವನ ಹೇಳುವಾಗ ಹಾಗೂ ಒಂಟಿತನ ಅನುಭವಿಸುವ ಹಿರಿಯರಿಗೆ ಪ್ರೀತಿ ತೋರಿಸುವಾಗಲೂ ದೇವರನ್ನು ಕಾಣಬಹುದು ಎಂದು ಹೇಳಿದರು.

ಶಿಕ್ಷಕ ಶಿವಕಾಂತ ಚಿಮ್ಮಾ ಮಾತನಾಡಿ, ಹಿರಿಯರ ಕಣ್ಣೀರು ಒರೆಸುವ ಕೈಗಳು ದೇವರ ಸೇವೆ ಮಾಡಿದಂತೆ. ಅವರ ಮುಖದಲ್ಲಿ ನಗು ಮೂಡಿಸುವುದರಿಂದ ನಿಜವಾದ ಪುಣ್ಯ ಸಂಪಾದಿಸಿದಂತಾಗುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಬಾಲಕೃಷ್ಣ ಕುಲಕರ್ಣಿ ಹಾಗೂ ಬಸಮ್ಮ ಸ್ಥಾವರಮಠ ವೇದಿಕೆಯ ಮೇಲೆ ಉಪಸ್ಥಿತರಿದ್ದರು. ಶಿವರಾಜ ಬೀರಬಿಟ್ಟೆ ಪ್ರಾರ್ಥಿಸಿದರು. ಮಲ್ಲಿನಾಥ ಮುನ್ನೊಳ್ಳಿ ಸ್ವಾಗತಿಸಿದರು. ವಿರೇಶ ಬೋಳಶೆಟ್ಟಿ ನಿರೂಪಿಸಿದರು. ಸಮಾಜಸೇವಕ ಸಂಜೀವಕುಮಾರ ಶೆಟ್ಟಿ ವಂದಿಸಿದರು.

ಇದೇ ಸಂದರ್ಭದಲ್ಲಿ ಶಿಕ್ಷಣಪ್ರೇಮಿ ಸಂಗಮೇಶ್ವರ ಸರಡಗಿ ಅವರನ್ನು ಅವರ ಸ್ನೇಹಿತರ ಬಳಗದ ವತಿಯಿಂದ ಸನ್ಮಾನಿಸಲಾಯಿತು. ವೃದ್ಧಾಶ್ರಮದಲ್ಲಿರುವ ಎಲ್ಲ ಹಿರಿಯರಿಗೆ ಉಡುಗೊರೆಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಸರೋಜಾ ಸರಡಗಿ, ಶರಣು ಕಲಶೆಟ್ಟಿ, ಶರಣು ಸರಡಗಿ, ಸುಶೀಲಾಬಾಯಿ ಸರಡಗಿ, ಬಸವರಾಜ ಸಲಗರ, ಸಂಜೀವಕುಮಾರ ಸಲಗರ ಸೇರಿದಂತೆ ಕೆಎಚ್‌ಬಿ ಗ್ರೀನ್ ಪಾರ್ಕ್ ಬಡಾವಣೆಯ ಅನೇಕರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button