ಕಲಬುರಗಿಯಲ್ಲಿ ನಾಳೆಯಿಂದ ಮೂರು ದಿನಗಳ ಎಸ್ಎಫ್ಐ ರಾಜ್ಯ ಸಮ್ಮೇಳನ
ಅಕ್ಟೋಬರ್ 30ರಿಂದ ನವೆಂಬರ್ 1ರವರೆಗೆ ವಿದ್ಯಾರ್ಥಿಗಳ ಬೃಹತ್ ಸಮಾವೇಶ; ಸಾರ್ವಜನಿಕ ಶಿಕ್ಷಣದ ಬಲವರ್ಧನೆ, ವಿದ್ಯಾರ್ಥಿ ಹಕ್ಕುಗಳ ರಕ್ಷಣೆಗೆ ಆದ್ಯತೆ

ಕಲಬುರಗಿ, ಅ. 28: ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಸಂಘಟನೆಯ 17ನೇ ರಾಜ್ಯ ಸಮ್ಮೇಳನವು ಅಕ್ಟೋಬರ್ 30, 31 ಹಾಗೂ ನವೆಂಬರ್ 1ರಂದು ಕಲಬುರಗಿಯಲ್ಲಿ ನಡೆಯಲಿದೆ ಎಂದು ಎಸ್ಎಫ್ಐ ರಾಜ್ಯಾಧ್ಯಕ್ಷ ಅಂಬ್ಳಿಕಲ್ ಶಿವಪ್ಪ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ಹೊಸ ಜೇವರ್ಗಿ ರಸ್ತೆಯ ರಾಮಮಂದಿರದ ಸಮೀಪವಿರುವ ಕೆಪಿಟಿಸಿಎಲ್ ಸಭಾಂಗಣದಲ್ಲಿ ಮೂರು ದಿನಗಳ ಸಮ್ಮೇಳನ ಆಯೋಜಿಸಲಾಗಿದೆ. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸುವುದು, ವಿದ್ಯಾರ್ಥಿ ಸಂಘಟನೆಗಳ ಚುನಾವಣೆ ನಡೆಸುವುದು, ಕೋಮು ಸೌಹಾರ್ದ ಬೆಳೆಸುವುದು ಹಾಗೂ ಸಂವಿಧಾನದ 371(ಜೆ) ವಿಧಿಯನ್ನು ಸಮರ್ಪಕವಾಗಿ ಜಾರಿಗೊಳಿಸುವುದು ಸೇರಿದಂತೆ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಪ್ರಜಾಸತ್ತಾತ್ಮಕ ಹಕ್ಕುಗಳ ರಕ್ಷಣೆಗೆ ಸಮ್ಮೇಳನದಲ್ಲಿ ಒತ್ತು ನೀಡಲಾಗುವುದು ಎಂದರು.
ಅಕ್ಟೋಬರ್ 30ರಂದು ವಿದ್ಯಾರ್ಥಿಗಳ ಬೃಹತ್ ಮೆರವಣಿಗೆ
ಸಮ್ಮೇಳನದ ಮೊದಲ ದಿನವಾದ ಅಕ್ಟೋಬರ್ 30ರಂದು ನಗರದ ತಿಮ್ಮಾಪುರ ವೃತ್ತದಿಂದ ಜಗತ್ ವೃತ್ತದವರೆಗೆ ವಿದ್ಯಾರ್ಥಿಗಳ ಬೃಹತ್ ಮೆರವಣಿಗೆ ನಡೆಯಲಿದೆ. ನಂತರ ಬಹಿರಂಗ ಸಭೆ ಆಯೋಜಿಸಲಾಗಿದೆ.
ಎಸ್ಎಫ್ಐ ರಾಷ್ಟ್ರೀಯ ಅಧ್ಯಕ್ಷ ಆದರ್ಶ್ ಎಂ. ಸಾಜಿ ಅವರು ಬಹಿರಂಗ ಸಭೆಯನ್ನು ಉದ್ಘಾಟಿಸಲಿದ್ದಾರೆ. ದೆಹಲಿಯ ಜಂತರ್ ಮಂತರ್ನಲ್ಲಿ ನಡೆದ ಹೋರಾಟಗಳಲ್ಲಿ ಭಾಗವಹಿಸಿದ್ದ ಎಸ್ಎಫ್ಐ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಐಶೆ ಘೋಷ್ ಮುಖ್ಯ ಭಾಷಣ ಮಾಡಲಿದ್ದಾರೆ ಎಂದು ಶಿವಪ್ಪ ತಿಳಿಸಿದರು.
ಎಸ್ಎಫ್ಐ ರಾಷ್ಟ್ರೀಯ ಉಪಾಧ್ಯಕ್ಷೆ ಶಿಲ್ಪಾ, ತಮಿಳುನಾಡು ರಾಜ್ಯಾಧ್ಯಕ್ಷ ಮಿರುದುಲ್, ಕೇರಳ ರಾಜ್ಯಾಧ್ಯಕ್ಷ ಎಂ. ಶಿವಪ್ರಸಾದ್ ಸೇರಿದಂತೆ ವಿವಿಧ ರಾಜ್ಯಗಳ ವಿದ್ಯಾರ್ಥಿ ನಾಯಕರು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ.
ಸ್ವಾಗತ ಸಮಿತಿಯ ಗೌರವಾಧ್ಯಕ್ಷ ಆರ್.ಕೆ. ಹುಡಗಿ, ಅಧ್ಯಕ್ಷ ಆರ್.ಜಿ. ಶೆಟಗರ್, ಎಸ್ಎಫ್ಐ ರಾಜ್ಯಾಧ್ಯಕ್ಷ ಅಂಬ್ಳಿಕಲ್ ಶಿವಪ್ಪ, ರಾಜ್ಯ ಕಾರ್ಯದರ್ಶಿ ವಿಜಯಕುಮಾರ್ ಟಿ.ಎಸ್. ಹಾಗೂ ರಾಜ್ಯ ಪದಾಧಿಕಾರಿಗಳು ಮೆರವಣಿಗೆ ಮತ್ತು ಬಹಿರಂಗ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಸಾರ್ವಜನಿಕ ಶಿಕ್ಷಣದ ರಕ್ಷಣೆಗೆ ಒತ್ತು
ದೇಶದಲ್ಲಿ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯ ಮೇಲೆ ನಡೆಯುತ್ತಿರುವ ದಾಳಿ, ಶಿಕ್ಷಣದ ಖಾಸಗೀಕರಣ ಮತ್ತು ವ್ಯಾಪಾರೀಕರಣ, ವಿದ್ಯಾರ್ಥಿಗಳ ಪ್ರಜಾಸತ್ತಾತ್ಮಕ ಹಕ್ಕುಗಳ ಮೇಲಿನ ನಿರ್ಬಂಧಗಳು ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿನ ವಿವಿಧ ಸಮಸ್ಯೆಗಳ ವಿರುದ್ಧ ವಿದ್ಯಾರ್ಥಿ ಸಮುದಾಯವನ್ನು ಸಂಘಟಿಸುವ ಉದ್ದೇಶದಿಂದ ರಾಜ್ಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಅವರು ವಿವರಿಸಿದರು.
ಶಿಕ್ಷಣದ ಗುಣಮಟ್ಟ, ಉದ್ಯೋಗ ಸೃಷ್ಟಿ ಮತ್ತು ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಂಬಂಧಿಸಿದ ನೀತಿಗಳ ಕುರಿತು ಸಮ್ಮೇಳನದಲ್ಲಿ ಚರ್ಚೆ ನಡೆಯಲಿದೆ. ಸರ್ಕಾರಗಳ ಶಿಕ್ಷಣ ನೀತಿಗಳ ಬಗ್ಗೆ ವಿಮರ್ಶೆ ನಡೆಸಿ, ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಮುಂದಿನ ಹೋರಾಟಗಳ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದರು.
ಕಲಬುರಗಿ ಜಿಲ್ಲೆಯ ವಿದ್ಯಾರ್ಥಿಗಳು, ಯುವಜನರು, ಪ್ರಗತಿಪರ ಚಿಂತಕರು, ಸಾಹಿತಿಗಳು, ಶಿಕ್ಷಕರು, ಉಪನ್ಯಾಸಕರು, ಅಧ್ಯಾಪಕರು, ಶಿಕ್ಷಣ ಪ್ರೇಮಿಗಳು ಹಾಗೂ ಸಾರ್ವಜನಿಕರು ಅಕ್ಟೋಬರ್ 30ರಂದು ನಡೆಯುವ ಬೃಹತ್ ವಿದ್ಯಾರ್ಥಿ ಮೆರವಣಿಗೆ ಮತ್ತು ಬಹಿರಂಗ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಡಾ. ಮೀನಾಕ್ಷಿ ಬಾಳಿ, ವಿಜಯಕುಮಾರ್ ಟಿ.ಎಸ್., ಗಣೇಶ್ ರಾಠೋಡ್, ಇಮಾಮಸಾಬ್, ಸುಜಾತಾ ವೈ., ತಾಯಣ್ಣ, ಪ್ರದೀಪ್ ಮ್ಯಾಗಡಿ, ಅಜಯ್, ಶರಣು, ಅಂಕಿತ್, ಅಕ್ಷತಾ, ರೋಹಿತ್, ತುಷಿತ್, ಕಾರ್ತಿಕ್, ಬೃಂದಾ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.



