ಜಿಲ್ಲಾಸುದ್ದಿಸಮಾಜ

ಹಿರಿಯ ನಾಗರಿಕರು ಮತ್ತು ರೈತರಲ್ಲಿ ಆತ್ಮವಿಶ್ವಾಸ ತುಂಬಲು ಆಧ್ಯಾತ್ಮಿಕ ಸಮಾವೇಶ

ನವೆಂಬರ್ 1ರಂದು ವಿಶ್ವ ನವೀಕರಣಕ್ಕಾಗಿ ರಾಷ್ಟ್ರೀಯ ಆಧ್ಯಾತ್ಮಿಕ ಜಾಗೃತಿ ಸಮಾವೇಶ; ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ

ಕಲಬುರಗಿ, ಅ. 28: ಹಿರಿಯ ನಾಗರಿಕರು ನೆಮ್ಮದಿಯಿಂದ ಬದುಕಬೇಕು ಹಾಗೂ ಸಂಕಷ್ಟದಲ್ಲಿರುವ ರೈತರು ಮಾನಸಿಕ ಸ್ಥೈರ್ಯದಿಂದ ಜೀವನ ನಡೆಸಬೇಕು ಎಂಬ ಉದ್ದೇಶದಿಂದ ಕಲಬುರಗಿಯಲ್ಲಿ ಅಕ್ಟೋಬರ್ 29ರಂದು ಹಿರಿಯ ನಾಗರಿಕರಿಗಾಗಿ ಸಂಗಮ ಕಾರ್ಯಕ್ರಮ ಮತ್ತು ನವೆಂಬರ್ 1ರಂದು ವಿಶ್ವ ನವೀಕರಣಕ್ಕಾಗಿ ರಾಷ್ಟ್ರೀಯ ಆಧ್ಯಾತ್ಮಿಕ ಜಾಗೃತಿ ಸಮಾವೇಶ ಆಯೋಜಿಸಲಾಗಿದೆ ಎಂದು ಬ್ರಹ್ಮಕುಮಾರೀಸ್ ಉಪವಲಯದ ಮುಖ್ಯಸ್ಥೆ ರಾಜಯೋಗಿನಿ ಬಿ.ಕೆ. ವಿಜಯಾ ದೀದಿ ತಿಳಿಸಿದರು.

ನಗರದ ಆದರ್ಶ ನಗರದಲ್ಲಿರುವ ಬ್ರಹ್ಮಕುಮಾರೀಸ್ ಸತ್ಯತೀರ್ಥ ಸಭಾಂಗಣದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

ಪ್ರಜಾಪಿತ ಬ್ರಹ್ಮಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದ 90 ವರ್ಷಗಳ ಆಧ್ಯಾತ್ಮಿಕ ಪಯಣದ ಹಿನ್ನೆಲೆಯಲ್ಲಿ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಕ್ಟೋಬರ್ 29ರಂದು ಸಂಜೆ 4 ಗಂಟೆಗೆ ಹಿರಿಯ ನಾಗರಿಕರು ಹಾಗೂ ಅವರ ಕುಟುಂಬದ ಸದಸ್ಯರಿಗಾಗಿ ‘ಯುಗದ ಹೆಮ್ಮೆಯೊಂದಿಗೆ ಘನತೆಯ ಬದುಕು’ ಎಂಬ ಆಶಯದಡಿ ಸಂಗಮ ಕಾರ್ಯಕ್ರಮ ನಡೆಯಲಿದೆ. ಸುಲಫಲಮಠ ಹಾಗೂ ಶ್ರೀಶೈಲ ಸಾರಂಗಮಠದ ಡಾ. ಮಹಾಂತ ಶಿವಾಚಾರ್ಯ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ.

ಅಫಜಲಪುರ ಶಾಸಕ ಎಂ.ವೈ. ಪಾಟೀಲ, ಬ್ರಹ್ಮಕುಮಾರೀಸ್ ಸಾಮಾಜಿಕ ಸೇವಾ ವಿಭಾಗದ ಉಪಾಧ್ಯಕ್ಷ ಬಿ.ಕೆ. ಪ್ರೇಮ್ಜಿ, ರಾಜಯೋಗಿನಿ ಬಿ.ಕೆ. ವಿಜಯಾ ದೀದಿ, ರಾಜಯೋಗಿನಿ ಬಿ.ಕೆ. ಆಶಾ ದೀದಿ ಹಾಗೂ ರಾಜಯೋಗಿ ಬಿ.ಕೆ. ವೀರೇಂದ್ರ ಭಾಯ್ಜಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಹಿರಿಯ ನಾಗರಿಕರಾದ ನಾಡೋಜ ಡಾ. ಜಿ.ಎಸ್. ಖಂಡೇರಾವ್, ಗಾಯತ್ರಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಹತ್ತು ಮಂದಿಯನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ನವೆಂಬರ್ 1ರಂದು ರಾಷ್ಟ್ರೀಯ ಆಧ್ಯಾತ್ಮಿಕ ಸಮಾವೇಶ

ನವೆಂಬರ್ 1ರಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಸೇಡಂ ರಸ್ತೆಯ ಗೀತಾನಗರದಲ್ಲಿರುವ ಅಮೃತ ಸರೋವರದ ರಿಟ್ರೀಟ್ ಕೇಂದ್ರದಲ್ಲಿ ವಿಶ್ವ ನವೀಕರಣಕ್ಕಾಗಿ ರಾಷ್ಟ್ರೀಯ ಆಧ್ಯಾತ್ಮಿಕ ಜಾಗೃತಿ ಸಮಾವೇಶ ನಡೆಯಲಿದೆ. ಈ ಸಂದರ್ಭದಲ್ಲಿ ಒಟ್ಟು ಮೂರು ಅಧಿವೇಶನಗಳನ್ನು ಆಯೋಜಿಸಲಾಗಿದ್ದು, ರಾಜ್ಯೋತ್ಸವಕ್ಕೆ ಸಂಬಂಧಿಸಿದ ಕಾರ್ಯಕ್ರಮ ಹಾಗೂ ರೈತರ ಕುರಿತ ವಿಶೇಷ ಕಾರ್ಯಕ್ರಮವೂ ನಡೆಯಲಿದೆ.

ರಾಷ್ಟ್ರೀಯ ಸಂಚಾಲಕಿ ರಾಜಯೋಗಿನಿ ಬಿ.ಕೆ. ಅವತಾರ ಭಾಯ್ಜಿ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಡಾ. ಬಿ.ಜಿ. ಪಾಟೀಲ, ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮೂಡ, ಬಿ.ಕೆ. ಪ್ರೇಮ್ಜಿ, ರಾಜಯೋಗಿನಿ ಬಿ.ಕೆ. ವಿಜಯಾ ದೀದಿ, ರಾಜಯೋಗಿ ಬಿ.ಕೆ. ವೀರೇಂದ್ರ ಭಾಯ್ಜಿ ಹಾಗೂ ಮಾನಸಿಕ ಆರೋಗ್ಯದ ಕುರಿತು ಮಾತನಾಡಲಿರುವ ಪ್ರೊ. ಬಿ.ಕೆ. ಸ್ವಾಮಿನಾಥನ್ ಭಾಯ್ಜಿ ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಮನೆಯಲ್ಲಿನ ಆರೋಗ್ಯಕರ ಚಟುವಟಿಕೆಗಳ ಕುರಿತು ದೆಹಲಿಯ ರಾಜಯೋಗಿನಿ ಬಿ.ಕೆ. ಆಶಾ ದೀದಿ ಮಾತನಾಡಲಿದ್ದಾರೆ ಎಂದು ವಿಜಯಾ ದೀದಿ ವಿವರಿಸಿದರು.

ರೈತರಲ್ಲಿ ಆತ್ಮಸ್ಥೈರ್ಯ ತುಂಬುವ ಉದ್ದೇಶ

ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಳೆಯ ಕೊರತೆ ಹಾಗೂ ಬರ ಪರಿಸ್ಥಿತಿಯಿಂದ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ. ಬೆಳೆ ನಷ್ಟ ಮತ್ತು ಆರ್ಥಿಕ ಸಮಸ್ಯೆಗಳಿಂದ ಕೆಲ ರೈತರು ಆತ್ಮಹತ್ಯೆಯಂತಹ ದುರಂತದ ಹಾದಿ ಹಿಡಿಯುತ್ತಿರುವುದು ಕಳವಳಕಾರಿ ಸಂಗತಿ. ಇಂತಹ ಸಂದರ್ಭದಲ್ಲಿ ರೈತರಿಗೆ ಆತ್ಮಬಲ ತುಂಬಿ, ಮಾನಸಿಕ ಸಮತೋಲನ ಕಾಪಾಡಿಕೊಂಡು ಬದುಕುವಂತೆ ಪ್ರೇರೇಪಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.

ಹಿರಿಯ ನಾಗರಿಕರು ಕೂಡ ಜೀವನದ ಸಂಧ್ಯಾಕಾಲದಲ್ಲಿ ನೆಮ್ಮದಿ, ಗೌರವ ಮತ್ತು ಆತ್ಮವಿಶ್ವಾಸದಿಂದ ಬದುಕುವ ವಾತಾವರಣ ನಿರ್ಮಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಆಧ್ಯಾತ್ಮಿಕ ಚಿಂತನೆ ಹಾಗೂ ಜೀವನಮೌಲ್ಯಗಳ ಮೂಲಕ ಜನರಲ್ಲಿ ಸಕಾರಾತ್ಮಕ ಮನೋಭಾವ ಬೆಳೆಸಲು ಸಮಾವೇಶಗಳನ್ನು ಆಯೋಜಿಸಲಾಗಿದೆ ಎಂದರು.

ಪ್ರತಿ ಭಾನುವಾರ ಹಾಗೂ ಹಬ್ಬಗಳ ಸಂದರ್ಭದಲ್ಲಿ ಮೂರು ಪ್ರದರ್ಶನಗಳನ್ನೂ ಆಯೋಜಿಸಲಾಗುತ್ತಿದೆ. ಸಾರ್ವಜನಿಕರು ಈ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ಬಿ.ಕೆ. ರಾಗಿಣಿ ಹಾಗೂ ಬಿ.ಕೆ. ದಾನೇಶ್ವರಿ ಉಪಸ್ಥಿತರಿದ್ದರು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button