ಶಿಕ್ಷಣಸಾಹಿತ್ಯ

ಕಾವ್ಯದ ಪರಿಭಾಷೆಗಳ ಅಧ್ಯಯನವೇ ಕಾವ್ಯ ಮೀಮಾಂಸೆ: ಡಾ. ಚಿಕ್ಕಮಠ

ಭಾರತೀಯ ಕಾವ್ಯ ಮೀಮಾಂಸೆ ಕುರಿತು ಒಂದು ದಿನದ ಕಾರ್ಯಾಗಾರ; ವಿದ್ಯಾರ್ಥಿನಿಯರು ಕಾವ್ಯಶಾಸ್ತ್ರವನ್ನು ಆಳವಾಗಿ ಅಧ್ಯಯನ ಮಾಡಲು ಸಲಹೆ

ಕಲಬುರಗಿ, ಅ. 28: ರಸ, ಧ್ವನಿ, ಶೈಲಿ, ವಕ್ರೋಕ್ತಿ, ಅಲಂಕಾರ, ವ್ಯಂಗ್ಯಾರ್ಥ, ಲಕ್ಷಣಾರ್ಥ, ವಾಚ್ಯಾರ್ಥ, ಕಾವ್ಯದ ಉಗಮ ಮತ್ತು ವಿಕಾಸ ಸೇರಿದಂತೆ ಕಾವ್ಯಕ್ಕೆ ಸಂಬಂಧಿಸಿದ ವಿವಿಧ ಪರಿಭಾಷೆಗಳು ಹಾಗೂ ಲಕ್ಷಣಕಾರರ ಸಿದ್ಧಾಂತಗಳನ್ನು ಅಧ್ಯಯನ ಮಾಡುವುದೇ ಕಾವ್ಯ ಮೀಮಾಂಸೆಯಾಗಿದೆ ಎಂದು ಶರಣಬಸವ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ಚಿದಾನಂದ ಚಿಕ್ಕಮಠ ಹೇಳಿದರು.

ನಗರದ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಪದವಿ ಮಹಿಳಾ ಮಹಾವಿದ್ಯಾಲಯದಲ್ಲಿ ಬುಧವಾರ ಭಾರತೀಯ ಕಾವ್ಯ ಮೀಮಾಂಸೆ ಕುರಿತು ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಹಿಂದೆ ಕಾವ್ಯ ಮೀಮಾಂಸೆಯನ್ನು ಕ್ರಿಯಾಕಲ್ಪ, ಅಲಂಕಾರಶಾಸ್ತ್ರ ಮತ್ತು ಲಕ್ಷಣಗ್ರಂಥ ಎಂಬ ಹೆಸರುಗಳಿಂದ ಕರೆಯಲಾಗುತ್ತಿತ್ತು. ಕಾವ್ಯದಲ್ಲಿನ ರಸಗಳು, ಸ್ಥಾಯಿಭಾವಗಳು, ಸಂಚಾರಿ ಭಾವಗಳು, ಧ್ವನಿ, ವಾಕ್ಯ, ಪದ, ಶಬ್ದ, ಶೈಲಿ ಹಾಗೂ ಅಲಂಕಾರಗಳ ಕುರಿತು ವೈಜ್ಞಾನಿಕವಾಗಿ ಅಧ್ಯಯನ ಮಾಡುವುದೇ ಕಾವ್ಯ ಮೀಮಾಂಸೆಯ ಮುಖ್ಯ ಉದ್ದೇಶವಾಗಿದೆ ಎಂದು ವಿವರಿಸಿದರು.

ವಿದ್ಯಾರ್ಥಿನಿಯರು ಕಾವ್ಯ ಮೀಮಾಂಸೆಯ ವಿವಿಧ ಪರಿಕಲ್ಪನೆಗಳನ್ನು ಆಳವಾಗಿ ಅಧ್ಯಯನ ಮಾಡಬೇಕು. ಕಾವ್ಯದ ಸ್ವರೂಪ, ಅದರ ಅಭಿವ್ಯಕ್ತಿ ವಿಧಾನ ಹಾಗೂ ಸಾಹಿತ್ಯ ಕೃತಿಗಳಲ್ಲಿನ ಅರ್ಥವೈಶಿಷ್ಟ್ಯಗಳನ್ನು ಅರಿತುಕೊಳ್ಳುವ ಮೂಲಕ ಸಾಹಿತ್ಯದ ಬಗ್ಗೆ ಸಮಗ್ರ ತಿಳಿವಳಿಕೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಾವಿದ್ಯಾಲಯದ ಪ್ರಾಚಾರ್ಯೆ ಡಾ. ಸೀಮಾ ಪಾಟೀಲ ಮಾತನಾಡಿ, ಕಾವ್ಯವು ಒಂದು ಶಾಸ್ತ್ರೀಯ ವಿಷಯವಾಗಿದ್ದು, ಅದರ ಅಧ್ಯಯನದಲ್ಲಿ ವಿದ್ಯಾರ್ಥಿನಿಯರು ನಿರಂತರವಾಗಿ ತೊಡಗಿಸಿಕೊಳ್ಳಬೇಕು. ಇಂತಹ ಕಾರ್ಯಾಗಾರಗಳು ಸಾಹಿತ್ಯದ ವಿವಿಧ ಆಯಾಮಗಳನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಾಗುತ್ತವೆ ಎಂದರು.

ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಪುಟ್ಟಮಣಿ ದೇವಿದಾಸ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಪೂರ್ಣಿಮಾ ಮಾಸಿಮಾಡೆ ಸ್ವಾಗತಿಸಿದರು. ಡಾ. ಶಾಂತಲಿಂಗ ಘಂಟೆ ನಿರೂಪಿಸಿ, ವಂದಿಸಿದರು.

ಕಾರ್ಯಾಗಾರದಲ್ಲಿ ಮಹಾವಿದ್ಯಾಲಯದ ಶಿಕ್ಷಕರು ಹಾಗೂ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button