ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡಿ: ಡಾ. ನಾಗೇಂದ್ರ ಮಸ್ತೂರಿ ಆಗ್ರಹ
ಕಲಬುರಗಿಯಲ್ಲಿ 23ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ; ಕನ್ನಡ ಭಾಷೆ, ಸಂಸ್ಕೃತಿ ಸಂರಕ್ಷಣೆಗೆ ಸಾಹಿತಿಗಳ ಕರೆ

ಕಲಬುರಗಿ, ಅ. 28: ಕನ್ನಡ ಭಾಷೆ ಮತ್ತು ಸಂಸ್ಕೃತಿ ನಮ್ಮ ಜೀವನದ ಅಸ್ಮಿತೆಯಾಗಿವೆ. ಮಾತೃಭಾಷೆಯ ಶಿಕ್ಷಣದಿಂದ ಉನ್ನತ ಶಿಕ್ಷಣದ ಮೌಲ್ಯ ಹೆಚ್ಚಿಸಬೇಕು. ಜಿಲ್ಲೆಯ ನಿರುದ್ಯೋಗ ಸಮಸ್ಯೆ ನಿವಾರಣೆಯಾಗಬೇಕು. ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಆದ್ಯತೆ ನೀಡುವ ವ್ಯವಸ್ಥೆ ಜಾರಿಯಾಗಬೇಕು ಎಂದು ಹಿರಿಯ ಸಾಹಿತಿ ಡಾ. ನಾಗೇಂದ್ರ ಮಸ್ತೂರಿ ಆಗ್ರಹಿಸಿದರು.
ನಗರದ ವಿಶ್ವೇಶ್ವರಯ್ಯ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಯೋಜಿಸಿದ್ದ ಎರಡು ದಿನಗಳ 23ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಈ ಭಾಗದ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ನಡೆಯಬೇಕು. ಕನ್ನಡಕ್ಕೆ ಮೊದಲ ಲಕ್ಷಣ ಗ್ರಂಥ ನೀಡಿದ ಈ ನೆಲದ ಹಿರಿಮೆಯನ್ನು ಎತ್ತಿಹಿಡಿಯಬೇಕು. ಜನಪದರು ಕಟ್ಟಿಕೊಟ್ಟ ಶ್ರೀಮಂತ ಪರಂಪರೆಯ ನಾಡನ್ನು ಗೌರವದಿಂದ ಕಾಣಬೇಕು ಎಂದು ಹೇಳಿದರು.
ಕನ್ನಡ ಭಾಷೆ ಕೇವಲ ಸಂವಹನದ ಮಾಧ್ಯಮವಲ್ಲ; ಅದು ನಮ್ಮ ಬದುಕು, ಸಂಸ್ಕೃತಿ ಮತ್ತು ಅಸ್ಮಿತೆಯ ಪ್ರತೀಕವಾಗಿದೆ. ಕನ್ನಡಿಗರು ತಮ್ಮ ಭಾಷೆ ಮತ್ತು ನೆಲದ ಬಗ್ಗೆ ಅಭಿಮಾನ ಬೆಳೆಸಿಕೊಂಡು, ನಾಡಿನ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.
ಸಾಹಿತ್ಯ ಸಮಾಜಕ್ಕೆ ಬೆಳಕು
ಸಮ್ಮೇಳನದ ದಿವ್ಯ ಸಾನ್ನಿಧ್ಯ ವಹಿಸಿದ್ದ ಡಾ. ಚೆನ್ನವೀರ ಶಿವಾಚಾರ್ಯರು ಮಾತನಾಡಿ, ಸಾಹಿತ್ಯವು ಸಮಾಜಕ್ಕೆ ಕಣ್ಣಾಗಿ, ಮನಸ್ಸಿನ ಭಾವನೆಗಳಿಗೆ ಧ್ವನಿಯಾಗಿ ಹಾಗೂ ಬದುಕಿನ ಹಾದಿಗೆ ಬೆಳಕಾಗಿ ಸದಾ ಜೀವಂತವಾಗಿರುತ್ತದೆ ಎಂದರು.
ನಾಡು-ನುಡಿಯನ್ನು ಪ್ರೀತಿಸುವ ಪ್ರಬುದ್ಧ ಮನಸ್ಸುಗಳು ಕನ್ನಡ ನಾಡನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಬಲ್ಲವು. ಪ್ರತಿಯೊಬ್ಬರೂ ಬೆಳಿಗ್ಗೆ ಎದ್ದಾಗ ಕನ್ನಡಾಂಬೆಯನ್ನು ಸ್ಮರಿಸಿ, ಕನ್ನಡದ ಅಭಿಮಾನವನ್ನು ದೈನಂದಿನ ಚಟುವಟಿಕೆಗಳಲ್ಲಿ ಅಳವಡಿಸಿಕೊಳ್ಳಬೇಕು. ಈ ಮೂಲಕ ಕನ್ನಡಿಗರ ಮನಸ್ಸುಗಳನ್ನು ಅರಳಿಸಬೇಕು ಎಂದು ಹೇಳಿದರು.
ಕಳೆದ ಐದು ವರ್ಷಗಳಿಂದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಿರಂತರವಾಗಿ ಕನ್ನಡಪರ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿದೆ ಎಂದು ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಶ್ಲಾಘನೀಯ
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಸಮಾಜದಲ್ಲಿ ಮನೆಮಾಡಿರುವ ಮೂಢನಂಬಿಕೆ, ಮೌಢ್ಯ ಹಾಗೂ ಸಾಮಾಜಿಕ ಅಸಮಾನತೆಯ ಕತ್ತಲೆಯನ್ನು ಹೋಗಲಾಡಿಸಲು ಸಾಹಿತ್ಯದ ಜ್ಞಾನ ಬೆಳಕು ನೀಡುತ್ತದೆ. ಸಾಹಿತ್ಯವು ಹೊಸ ಚೈತನ್ಯವನ್ನು ಮೂಡಿಸುವ ಶಕ್ತಿಯನ್ನೂ ಹೊಂದಿದೆ ಎಂದರು.
ತಮ್ಮ ಐದು ವರ್ಷಗಳ ಅವಧಿಯಲ್ಲಿ 16 ವಿಶೇಷ ಸಮ್ಮೇಳನಗಳು ಹಾಗೂ ಆರು ಜಿಲ್ಲಾ ಸಮ್ಮೇಳನಗಳನ್ನು ಆಯೋಜಿಸುವ ಮೂಲಕ ರಾಜ್ಯದಲ್ಲೇ ಗಮನಾರ್ಹ ಸಾಧನೆ ಮಾಡಲಾಗಿದೆ. ಮುಂದೆಯೂ ಕನ್ನಡದ ರಥವನ್ನು ಎಳೆಯುವ ಉತ್ಸಾಹ ನಮ್ಮಲ್ಲಿದೆ. ಜಿಲ್ಲೆ ಜನರ ಸಹಕಾರದಿಂದ ಈ ಉತ್ಸಾಹ ಮತ್ತಷ್ಟು ಹೆಚ್ಚಾಗಿದೆ ಎಂದು ಹೇಳಿದರು.
ಶರಣಬಸವೇಶ್ವರ ಸಂಸ್ಥಾನದ ದೊಡ್ಡಪ್ಪ ಎಸ್. ಅಪ್ಪ ಅವರು ಸಮ್ಮೇಳನ ಉದ್ಘಾಟಿಸಿದರು. ಹಿಂದಿನ ಸಮ್ಮೇಳನದ ಅಧ್ಯಕ್ಷ ಮುಡುಬಿ ಗುಂಡೇರಾವ್, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಸವರಾಜ ಬಳೂಂಡಗಿ, ನಿವೃತ್ತ ಮುಖ್ಯ ಎಂಜಿನಿಯರ್ ಡಾ. ಸುರೇಶ ಶರ್ಮಾ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಸಾಹಿತಿಗಳಿಗೆ ಗೌರವ ಪುರಸ್ಕಾರ
ಸಾಹಿತ್ಯ ಕ್ಷೇತ್ರದ ಸಾಧಕರಾದ ಡಾ. ಹನುಮಂತರಾವ್ ದೊಡ್ಡಮನಿ, ಸಿದ್ದರಾಮ ಪೊಲೀಸ್ ಪಾಟೀಲ, ರಾವುಫ್ ಖಾದ್ರಿ, ಡಾ. ಎಸ್.ಎಸ್. ಪಾಟೀಲ, ಡಾ. ಶಶಿಶೇಖರ ರೆಡ್ಡಿ, ಶಿವಶರಣಪ್ಪ ಸಿರಿ, ಉಮೇಶ ಬಾಬು ಸಾಸಾಬಾಳ, ಪವನಕುಮಾರ ವಳಕೇರಿ, ಶಾಮರಾವ್ ಪಾಟೀಲ ಹಾಗೂ ಡಾ. ಬಸವರಾಜ ಭಾಗಾ ಸೇರಿದಂತೆ ಹಲವು ಗಣ್ಯರಿಗೆ ‘ಸಾಹಿತ್ಯ ಸಂಗಾತಿ’ ಗೌರವ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ಡಾ. ಶಿವಶರಣಪ್ಪ ಮೊತಕಪಳ್ಳಿ ಮತ್ತು ವಿಜಯಕುಮಾರ ತೇಗಲತಿಪ್ಪಿ ಸಂಪಾದಕತ್ವದ ‘ಸಾಹಿತ್ಯ ಬೆಳಕು’ ಕೃತಿಯನ್ನು ಹಾಗೂ ಡಾ. ನಾಗೇಂದ್ರ ಮಸ್ತೂರಿ ಅವರ ಕಿರುಭಾವಿನಿ ಕೃತಿಗಳನ್ನು ಇದೇ ಸಂದರ್ಭದಲ್ಲಿ ಲೋಕಾರ್ಪಣೆಗೊಳಿಸಲಾಯಿತು.
ಸಾಂಸ್ಕೃತಿಕ ಮೆರವಣಿಗೆಗೆ ಹೋರಾಟಗಾರ ಮಲ್ಲಿಕಾರ್ಜುನ ಸಾರವಾಡ ಚಾಲನೆ ನೀಡಿದರು. ಸಾಹಿತ್ಯ ಕ್ಷೇತ್ರದ ಗಣ್ಯರಾದ ಡಾ. ಕಲ್ಯಾಣರಾವ್ ಪಾಟೀಲ ಅಧ್ಯಕ್ಷತೆಯಲ್ಲಿ ಕನ್ನಡ ಕಾವ್ಯ ಪರಂಪರೆ ಮತ್ತು ಮೌಲ್ಯಗಳ ಕುರಿತು ಗೋಷ್ಠಿ ನಡೆಯಿತು. ಕನ್ನಡ ಸಾಹಿತ್ಯದ ಬೆಳವಣಿಗೆಯಲ್ಲಿ ಕಥೆ ಮತ್ತು ಕಾದಂಬರಿಗಳ ಪಾತ್ರದ ಕುರಿತು ಡಾ. ಕೆ.ಎಸ್. ನಾಯಕ ಹಾಗೂ ಮಹಿಳಾ ಅಭಿವೃದ್ಧಿಯ ಕುರಿತು ಡಾ. ಜಯದೇವಿ ಗಾಯಕ್ವಾಡ್ ಮಾತನಾಡಿದರು.
ಕವಿ ಸಮ್ಮೇಳನದಲ್ಲಿ ಜಿಲ್ಲೆಯ ಅನೇಕ ಕವಿಗಳು ಪ್ರಚಲಿತ ವಿದ್ಯಮಾನಗಳ ಕುರಿತು ಕವನಗಳನ್ನು ವಾಚಿಸಿ ಪ್ರೇಕ್ಷಕರ ಗಮನ ಸೆಳೆದರು. ಪತ್ರಕರ್ತ ರಾಜಕುಮಾರ ಬಿ. ಉದನೂರು ಆಶಯ ನುಡಿಗಳನ್ನಾಡಿದರು. ಡಾ. ರಾಜೇಂದ್ರ ಕೊಂಡಾ ಮಾತನಾಡಿದರು.
ಕನ್ನಡದ ಕಂಪು ಹರಡಿದ ಭವ್ಯ ಮೆರವಣಿಗೆ
ಸಮ್ಮೇಳನದ ಅಂಗವಾಗಿ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ವಿಶ್ವೇಶ್ವರಯ್ಯ ಭವನದವರೆಗೆ ಭವ್ಯ ಸಾಂಸ್ಕೃತಿಕ ಮೆರವಣಿಗೆ ನಡೆಯಿತು. ಜಯ ಕರ್ನಾಟಕ ಸಂಘಟನೆಯ ವಿಭಾಗೀಯ ಅಧ್ಯಕ್ಷ ಮಲ್ಲಿಕಾರ್ಜುನ ಸಾರವಾಡ ಮೆರವಣಿಗೆಗೆ ಚಾಲನೆ ನೀಡಿದರು.
ವಿವಿಧ ಕಲಾತಂಡಗಳೊಂದಿಗೆ ಹೆಜ್ಜೆ ಹಾಕಿದ ಕನ್ನಡಾಭಿಮಾನಿಗಳು ಕನ್ನಡದ ಘೋಷಣೆಗಳನ್ನು ಮೊಳಗಿಸುತ್ತಾ, ಹಾಡುತ್ತಾ ಸಂಭ್ರಮಿಸಿದರು. ಡೊಳ್ಳು ಕುಣಿತ, ಲೇಜಿಮ್ ವಾದ್ಯ ಹಾಗೂ ವಿವಿಧ ನೃತ್ಯ ಪ್ರದರ್ಶನಗಳು ಮೆರವಣಿಗೆಗೆ ವಿಶೇಷ ಮೆರುಗು ನೀಡಿದವು.
ಮೆರವಣಿಗೆಯುದ್ದಕ್ಕೂ ಕನ್ನಡಪರ ಘೋಷಣೆಗಳು ಮೊಳಗಿದವು. ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅವರು ಡೊಳ್ಳಿನ ನಾದಕ್ಕೆ ಹೆಜ್ಜೆ ಹಾಕಿ ಎಲ್ಲರ ಗಮನ ಸೆಳೆದರು.
ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ನಾಡಿನ ಪರಂಪರೆಯನ್ನು ಉಳಿಸಿ ಬೆಳೆಸುವ ಸಂಕಲ್ಪದೊಂದಿಗೆ ಸಮ್ಮೇಳನದಲ್ಲಿ ಸಾಹಿತಿಗಳು, ಕನ್ನಡಾಭಿಮಾನಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.



