ವಿದ್ಯುತ್ ಅವಘಡದಲ್ಲಿ ಯುವಕನ ದುರ್ಮರಣ: ಶಾಸಕ ಬೆಲ್ದಾಳೆ ಸಾಂತ್ವನ
ಮೃತ ಬಾಲರಾಜ್ ದಾಸೂರ್ ಕುಟುಂಬಕ್ಕೆ ವೈಯಕ್ತಿಕ ಧನಸಹಾಯ; ಸರ್ಕಾರದಿಂದ ಪರಿಹಾರ ಕೊಡಿಸಲು ಕ್ರಮದ ಭರವಸೆ

ಬೀದರ್, ಅ. 27: ದಕ್ಷಿಣ ವಿಧಾನಸಭಾ ಕ್ಷೇತ್ರದ ನಿರ್ಣಾ ಗ್ರಾಮದ ಪೆಟ್ರೋಲ್ ಬಂಕ್ನಲ್ಲಿ ಸಂಭವಿಸಿದ ವಿದ್ಯುತ್ ಅವಘಡದಲ್ಲಿ ಮೃತಪಟ್ಟ ಬಾಲರಾಜ್ ದಾಸೂರ್ ಅವರ ನಿವಾಸಕ್ಕೆ ಕ್ಷೇತ್ರದ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಭೇಟಿ ನೀಡಿ, ದುಃಖತಪ್ತ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಯುವಕನ ಅಕಾಲಿಕ ನಿಧನದಿಂದ ದುಃಖದಲ್ಲಿರುವ ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿದ ಶಾಸಕರು, ವೈಯಕ್ತಿಕ ಧನಸಹಾಯ ನೀಡಿ ಸಂಕಷ್ಟದ ಸಂದರ್ಭದಲ್ಲಿ ಕುಟುಂಬದ ಬೆನ್ನಿಗೆ ನಿಲ್ಲುವ ಭರವಸೆ ನೀಡಿದರು.
ಮೃತರ ಕುಟುಂಬಕ್ಕೆ ಸರ್ಕಾರದಿಂದ ಸೂಕ್ತ ಪರಿಹಾರ ದೊರಕಿಸಿಕೊಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿಯೂ ಅವರು ತಿಳಿಸಿದರು. ಕುಟುಂಬದ ಸದಸ್ಯರು ಎದುರಿಸುತ್ತಿರುವ ದುಃಖದ ಸಂದರ್ಭದಲ್ಲಿ ಅವರಿಗೆ ಆತ್ಮಸ್ಥೈರ್ಯ ತುಂಬಿದ ಶಾಸಕರು, ಈ ನೋವನ್ನು ಸಹಿಸಿಕೊಳ್ಳುವ ಶಕ್ತಿಯನ್ನು ದೇವರು ನೀಡಲಿ ಎಂದು ಪ್ರಾರ್ಥಿಸಿದರು.
ಮೃತ ಬಾಲರಾಜ್ ದಾಸೂರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಕುಟುಂಬದವರಿಗೆ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದು ಶಾಸಕರು ಹಾರೈಸಿದರು.
ಈ ಸಂದರ್ಭದಲ್ಲಿ ಶ್ರೀನಿವಾಸ ಪದ್ದಾರ್, ಮಾಣಿಕಪ್ಪ ಖಾಶೆಂಪುರ, ಚೆನ್ನಬಸವ ಬುಳ್ಳಾ, ಡಾ. ರವಿ ಸ್ವಾಮಿ, ಜಗನ್ನಾಥ ಮಜಗೆ, ಶಿವಕುಮಾರ ಮೈಲೂರು, ಶಂಕರ ಉದುಗೀರೆ, ಶಿವರಾಜಪ್ಪ ಬಶೆಟ್ಟಿ, ಗುರು ಚಿದ್ರಿ, ರಾಜು ಬೇಲೂರೆ, ವೀರಬಸಪ್ಪ, ದಿಲೀಪ್ ಪಸಾರ, ರಮೇಶ ಧೂಳ, ಹಮೀದ್, ಕುಪೇಂದ್ರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.


