ಪದಗಳು ಹದಗೊಂಡರೆ ಕಾವ್ಯ ಸಾಧ್ಯ: ಡಾ. ನಾಗೇಂದ್ರ ಮಸೂತಿ
ಭುವನೇಶ್ವರಿ ಹಳ್ಳಿಖೇಡ ಅವರ ‘ತಡವಾದರೂ ಕನಸು’ ಚೊಚ್ಚಲ ಕವನ ಸಂಕಲನ ಲೋಕಾರ್ಪಣೆ; 21 ಪ್ರತಿಭಾವಂತ ಶಿಕ್ಷಕರಿಗೆ ಗೌರವ ಪುರಸ್ಕಾರ

ಕಲಬುರಗಿ: ಕವಿತೆಗಳು ಹೆಚ್ಚು ಪರಿಣಾಮಕಾರಿಯಾಗಿ ಮೂಡಿಬರಬೇಕಾದರೆ ಕವಿಗಳು ಬಳಸುವ ಪದಗಳು ಹದಗೊಂಡಿರಬೇಕು. ಪದಗಳ ಸಮರ್ಥ ಜೋಡಣೆ ಕಾವ್ಯದ ಸೌಂದರ್ಯ ಮತ್ತು ಪರಿಣಾಮವನ್ನು ಹೆಚ್ಚಿಸುತ್ತದೆ ಎಂದು ಹಿರಿಯ ಸಾಹಿತಿ ಡಾ. ನಾಗೇಂದ್ರ ಮಸೂತಿ ಅಭಿಪ್ರಾಯಪಟ್ಟರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಕನ್ನಡ ಭವನದ ಸುವರ್ಣ ಸಭಾಭವನದಲ್ಲಿ ಶನಿವಾರ ಆಯೋಜಿಸಿದ್ದ ಸಮಾರಂಭದಲ್ಲಿ ಲೇಖಕಿ ಭುವನೇಶ್ವರಿ ಹಳ್ಳಿಖೇಡ ಅವರ ಚೊಚ್ಚಲ ಕವನ ಸಂಕಲನ ‘ತಡವಾದರೂ ಕನಸು’ ಕೃತಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಕವಿಗಳು ತಮ್ಮ ಅನುಭವಗಳು, ಜೀವನದಲ್ಲಿ ಎದುರಾಗುವ ಸಂಗತಿಗಳು ಹಾಗೂ ಕಣ್ಣಾರೆ ಕಂಡ ರೋಚಕ ಘಟನೆಗಳನ್ನು ಕಾವ್ಯದ ಮೂಲಕ ಅಭಿವ್ಯಕ್ತಿಸಬೇಕು. ಪದಗಳ ಜೋಡಣೆಯಲ್ಲಿ ಸೃಜನಶೀಲತೆ ಮತ್ತು ಮಾಂತ್ರಿಕ ಶೈಲಿ ಇದ್ದಾಗ ಕವಿತೆಗಳು ಓದುಗರ ಮನಸ್ಸಿಗೆ ತಲುಪುತ್ತವೆ. ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ನಡೆಯುವ ಅನ್ಯಾಯ, ಅಸಮಾನತೆ ಹಾಗೂ ದುಸ್ಥಿತಿಗಳ ವಿರುದ್ಧವೂ ಕವಿಗಳು ಧ್ವನಿ ಎತ್ತಬೇಕು. ಸಮಾಜಮುಖಿ ಚಿಂತನೆಗಳನ್ನು ಒಳಗೊಂಡ ಕಾವ್ಯ ಇಂದಿನ ಸಂದರ್ಭದಲ್ಲಿ ಹೆಚ್ಚು ಪ್ರಸ್ತುತವಾಗಿದೆ ಎಂದು ಹೇಳಿದರು.
ಕವನ ಸಂಕಲನದ ಲೇಖಕಿ ಭುವನೇಶ್ವರಿ ಹಳ್ಳಿಖೇಡ ಮಾತನಾಡಿ, ತಮ್ಮ ಬಹುದಿನಗಳ ಕನಸಾಗಿದ್ದ ಕವನ ಸಂಕಲನದ ಲೋಕಾರ್ಪಣೆ ಹಾಗೂ ಹುಟ್ಟುಹಬ್ಬ ಒಂದೇ ದಿನ ಬಂದಿರುವುದು ದ್ವಿಗುಣ ಸಂಭ್ರಮ ತಂದಿದೆ ಎಂದರು. ಕಾರ್ಯಕ್ರಮಕ್ಕೆ ಆಗಮಿಸಿ ತಮ್ಮನ್ನು ಹರಸಿ, ಆಶೀರ್ವದಿಸಿ ಕವನ ಸಂಕಲನದ ಬಿಡುಗಡೆಗೆ ಸಾಕ್ಷಿಯಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ಸಮಾರಂಭದಲ್ಲಿ ಜಿಲ್ಲೆಯ 21 ಪ್ರತಿಭಾವಂತ ಶಿಕ್ಷಕರಿಗೆ ಗೌರವ ಪುರಸ್ಕಾರ ನೀಡಿ ಸತ್ಕರಿಸಲಾಯಿತು.
ಬೀದರ್ನ ಲೇಖಕಿ ಸಾರಿಕಾ ಗಂಗಾ ಕೃತಿಯ ಪರಿಚಯ ಮಾಡಿಕೊಟ್ಟರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಲೇಖಕಿ ಭುವನೇಶ್ವರಿ ಹಳ್ಳಿಖೇಡ, ಸುರೇಶ ವಗ್ಗೆ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳ್ಳೂಂಡಗಿ, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿ.ಎಸ್. ಮಾಲಿ ಪಾಟೀಲ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ ಮತ್ತು ಧರ್ಮಣ್ಣ ಎಚ್. ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂದಿ, ರೇಣುಕಾ ಎನ್., ಹಿರಿಯ ಸಾಹಿತಿ ಡಾ. ಸ್ವಾಮಿರಾವ ಕುಲಕರ್ಣಿ, ಮುಡುಬಿ ಗುಂಡೇರಾವ ಹಾಗೂ ಸಮಾಜಸೇವಕಿ ಮಾಲಾ ದಣ್ಣೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.



