ವಿಠಲ್ ಹೇರೂರ್ ಮೂರ್ತಿ ಸ್ಥಾಪನೆಗೆ ಆಗ್ರಹಿಸಿ ಗಾಣಗಾಪುರದಿಂದ ಕಲಬುರಗಿವರೆಗೆ ಪಾದಯಾತ್ರೆ

ಕಲಬುರಗಿ, ಅ. 10: ನಗರದ ಅಫಜಲಪುರ ಮುಖ್ಯ ರಸ್ತೆಯಲ್ಲಿರುವ ಹೈಕೋರ್ಟ್ ವೃತ್ತದಲ್ಲಿ ಕೋಲಿ ಸಮಾಜದ ಮುಖಂಡ, ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಸಚೇತಕ ದಿವಂಗತ ವಿಠಲ್ ಹೇರೂರ್ ಅವರ ಮೂರ್ತಿ ಸ್ಥಾಪನೆಗೆ ಅನುಮತಿ ನೀಡಬೇಕು ಎಂದು ಆಗ್ರಹಿಸಿ ಅವರ ಅಭಿಮಾನಿಗಳು ದೇವಲ ಗಾಣಗಾಪುರದಿಂದ ಕಲಬುರಗಿ ಮಹಾನಗರ ಪಾಲಿಕೆಯವರೆಗೆ ಪಾದಯಾತ್ರೆ ನಡೆಸಿದರು.
ಅಫಜಲಪುರ ತಾಲ್ಲೂಕಿನ ಸುಕ್ಷೇತ್ರ ದೇವಲ ಗಾಣಗಾಪುರದಲ್ಲಿರುವ ವಿಠಲ್ ಹೇರೂರ್ ಅವರ ಶಕ್ತಿ ಕೇಂದ್ರದಿಂದ ಆರಂಭವಾದ ಪಾದಯಾತ್ರೆ ಕಲಬುರಗಿ ನಗರದ ಹಿರಾಪುರ ಕ್ರಾಸ್ ತಲುಪಿದ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಅಧಿಕಾರಿಗಳು ಪ್ರತಿಭಟನಾಕಾರರಿಂದ ಆಯುಕ್ತರಿಗೆ ಸಲ್ಲಿಸುವ ಮನವಿ ಪತ್ರವನ್ನು ಸ್ವೀಕರಿಸಿದರು. ಈ ಕುರಿತು ಮೇಲಧಿಕಾರಿಗಳ ಮೂಲಕ ಸರ್ಕಾರದ ಮಟ್ಟದಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.
ವಿಠಲ್ ಹೇರೂರ್ ಅವರು ಸಮಾಜದ ಗೌರವ, ಸ್ವಾಭಿಮಾನ ಮತ್ತು ಹಕ್ಕುಗಳಿಗಾಗಿ ಶ್ರಮಿಸಿದ ಗಣ್ಯ ವ್ಯಕ್ತಿಯಾಗಿದ್ದಾರೆ. ಅವರ ಸೇವೆ ಮತ್ತು ಕೊಡುಗೆಗಳನ್ನು ಸ್ಮರಿಸುವುದು ಸಮಾಜದ ಆಶಯವಾಗಿದೆ. ಹೈಕೋರ್ಟ್ ವೃತ್ತಕ್ಕೆ 2015ರಿಂದಲೇ ಅವರ ಹೆಸರನ್ನು ನಾಮಕರಣ ಮಾಡಲಾಗಿದ್ದು, ನಾಮಫಲಕವೂ ಇದೆ. ಹೀಗಾಗಿ ಅದೇ ಸ್ಥಳದಲ್ಲಿ ಅವರ ಮೂರ್ತಿ ಸ್ಥಾಪಿಸಲು ಅಗತ್ಯ ಅನುಮತಿ ನೀಡಬೇಕು ಎಂದು ಪಾದಯಾತ್ರೆಯಲ್ಲಿ ಪಾಲ್ಗೊಂಡವರು ಒತ್ತಾಯಿಸಿದರು.
ವಿಠಲ್ ಹೇರೂರ್ ವೃತ್ತದಲ್ಲಿ ಹಲವು ವರ್ಷಗಳಿಂದ ಅವರ ಜಯಂತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಇತ್ತೀಚೆಗೆ ನಗರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪ್ರತಿಮೆಯನ್ನು ಅನುಮತಿಯಿಲ್ಲದೆ ಸ್ಥಾಪಿಸಲಾಗಿತ್ತು ಎಂಬ ವಿಚಾರದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಅದನ್ನು ತೆರವುಗೊಳಿಸಿರುವುದನ್ನು ಪ್ರತಿಭಟನಾಕಾರರು ಉಲ್ಲೇಖಿಸಿದರು.
ವಿಠಲ್ ಹೇರೂರ್ ಅವರ ಸೇವೆ ಮತ್ತು ಸಮಾಜಕ್ಕೆ ನೀಡಿದ ಕೊಡುಗೆಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು, ಅವರ ಮೂರ್ತಿ ಸ್ಥಾಪನೆಗೆ ಕೂಡಲೇ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.ಪ್ರೇಮ್ ಕೋಳಿ ನಿಂಗಪ್ಪ ಆರ್. ದೇವಣಗಾಂವ್ ಅವರ ನೇತೃತ್ವದಲ್ಲಿ ನಡೆದ ಪಾದಯಾತ್ರೆಯಲ್ಲಿ ಸಿದ್ದು ಜಮಾದಾರ್, ರಾಮು ಉಮ್ಮರ್ಗಿ, ಬೋಗೇಶ್ ಜಮಾದಾರ್, ಅವದೂತ್ ಬಂದರವಾಡ, ಸಂತೋಷ ಜಮಾದಾರ್, ಅಯ್ಯಪ್ಪ ಕುಡಗಿ, ಪ್ರವೀಣ್ ತೆಗ್ಗಳ್ಳಿ, ಸಿದ್ದು ತಳವಾರ್, ಮಲ್ಲು ಚಿನಮಳ್ಳಿ, ರಮೇಶ್ ಜಮಾದಾರ್, ಲಕ್ಷ್ಮಣ್ ಇಟಗಿ, ರಾಹುಲ್ ಘತ್ತರಗಿ, ಅಂಬರೇಶ್ ಜಮಾದಾರ್, ಶರಣು ಉದನೂರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು.



