ಕಾಂಗ್ರೆಸ್ ಮುಖಂಡ ಲಚ್ಚಪ್ಪ ಜಮಾದಾರ್ ಕುರಿತು ಅವಹೇಳನಕಾರಿ ಪೋಸ್ಟ್: ಆಂದೋಲಾಶ್ರೀ, ಸಿದ್ರಾಮಯ್ಯ ಹಿರೇಮಠ ವಿರುದ್ಧ ದೂರು

ಅಫಜಲಪುರ, ಅ.8– ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ಕೋಳಿ ಕಬ್ಬಲಿಗ ಎಸ್ಟಿ ಹೋರಾಟ ಸಮಿತಿ ಮತ್ತು ದ್ರಾಕ್ಷಿ ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಜಿ ನಿರ್ದೇಶಕ ಲಚ್ಚಪ್ಪ ಎಸ್. ಜಮಾದಾರ್ ಅವರ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಹಾಗೂ ಮಾನಹಾನಿಕರ ಪೋಸ್ಟ್ಗಳನ್ನು ಪ್ರಕಟಿಸಲಾಗಿದೆ ಎಂದು ಆರೋಪಿಸಿ ದೂರು ನೀಡಲಾಗಿದೆ.
ಕಳೆದ ಸೆಪ್ಟೆಂಬರ್ 3 ಮತ್ತು 4ರಂದು ಶಿವಸೇನಾ ಪಕ್ಷದ ಹೆಸರಿನ ಫೇಸ್ಬುಕ್ ಖಾತೆಯಿಂದ ಲಚ್ಚಪ್ಪ ಜಮಾದಾರ್ ಅವರನ್ನು ಗುರಿಯಾಗಿಸಿಕೊಂಡು ಅವಹೇಳನಕಾರಿ ಪೋಸ್ಟ್ಗಳನ್ನು ಪ್ರಕಟಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಶಿವಸೇನಾ ಪಕ್ಷದ ರಾಜ್ಯಾಧ್ಯಕ್ಷ ಸಿದ್ದಲಿಂಗಯ್ಯ ಕರುಣಯ್ಯ ಗದ್ದುಗೆ (ಆಂದೋಲಾಶ್ರೀ) ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಸಿದ್ರಾಮಯ್ಯ ಹಿರೇಮಠ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪಟ್ಟಣದ ಲಕ್ಷ್ಮೀ ಗುಡಿ ಸಮೀಪದ ನಿವಾಸಿ ಹಾಗೂ ಲಚ್ಚಪ್ಪ ಜಮಾದಾರ್ ಅವರ ಅಭಿಮಾನಿ ನಾಗಪ್ಪ ಅವರ ಪುತ್ರ ಪ್ರಭು ಘತ್ತರಗಿ ಅವರು ಈ ಕುರಿತು ದೂರು ಸಲ್ಲಿಸಿದ್ದಾರೆ.
ರೈತರ ಪರ ನಡೆಯುತ್ತಿರುವ ಹೋರಾಟದಲ್ಲಿ ಭಾಗವಹಿಸಿದ್ದ ಲಚ್ಚಪ್ಪ ಎಸ್. ಜಮಾದಾರ್ ಹಾಗೂ ಜಿಲ್ಲಾಧಿಕಾರಿ ಇಕ್ರಮ್ ಪಾಷಾ ಅವರೊಂದಿಗಿರುವ ಛಾಯಾಚಿತ್ರವನ್ನು ಬಳಸಿಕೊಂಡು, ಅವಹೇಳನಕಾರಿ ಶೀರ್ಷಿಕೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಪ್ರಕಟಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಇದೇ ರೀತಿಯಲ್ಲಿ ರಾಜ್ಯ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಛಾಯಾಚಿತ್ರವನ್ನು ಬಳಸಿಕೊಂಡು ಅವಹೇಳನಕಾರಿ ಮತ್ತು ಮಾನಹಾನಿಕರ ಅರ್ಥ ಬರುವ ಮತ್ತೊಂದು ಪೋಸ್ಟ್ ಪ್ರಕಟಿಸಲಾಗಿದೆ ಎಂದು ದೂರಲಾಗಿದೆ.
ಇದಲ್ಲದೆ, ಸಿದ್ರಾಮಯ್ಯ ಹಿರೇಮಠ ಅವರ ಫೇಸ್ಬುಕ್ ಖಾತೆಯಲ್ಲಿಯೂ ಅವಹೇಳನಕಾರಿ ಪದಗಳು ಹಾಗೂ ಚಿತ್ರಗಳನ್ನು ಬಳಸಿ ಪೋಸ್ಟ್ಗಳನ್ನು ಹರಿಬಿಡಲಾಗಿದೆ ಎಂದು ಆರೋಪಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾದ ಈ ಪೋಸ್ಟ್ಗಳು ಹಾಗೂ ಸುದ್ದಿಗೋಷ್ಠಿಯಲ್ಲಿ ನೀಡಿದ ಹೇಳಿಕೆಗಳಿಂದ ಲಚ್ಚಪ್ಪ ಜಮಾದಾರ್ ಅವರ ಸಾಮಾಜಿಕ ಗೌರವ ಮತ್ತು ಪ್ರತಿಷ್ಠೆಗೆ ಧಕ್ಕೆ ಉಂಟಾಗಿದೆ ಎಂದು ದೂರುದಾರರು ತಿಳಿಸಿದ್ದಾರೆ.
ಸೆಪ್ಟೆಂಬರ್ 3 ಮತ್ತು 4ರಂದು ಶಿವಸೇನಾ ಪಕ್ಷದ ಹೆಸರಿನ ಫೇಸ್ಬುಕ್ ಖಾತೆಯಿಂದ ರೈತರ ಪರ ನಡೆಯುತ್ತಿದ್ದ ಹೋರಾಟದಲ್ಲಿ ಭಾಗವಹಿಸಿದ್ದ ಲಚ್ಚಪ್ಪ ಜಮಾದಾರ್ ಹಾಗೂ ಜಿಲ್ಲಾಧಿಕಾರಿಗಳೊಂದಿಗಿನ ಛಾಯಾಚಿತ್ರವನ್ನು ಬಳಸಿಕೊಂಡು, ಯಾವುದೇ ಸಂಬಂಧಿತ ಕಾರಣ ಅಥವಾ ವಾಸ್ತವಾಂಶವಿಲ್ಲದೆ ಅವಹೇಳನಕಾರಿ ಶೀರ್ಷಿಕೆಯೊಂದಿಗೆ ಪೋಸ್ಟ್ ಹರಿಬಿಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಅದೇ ರೀತಿ, ರಾಜ್ಯದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಛಾಯಾಚಿತ್ರವನ್ನು ಬಳಸಿಕೊಂಡು ಕರ್ನಾಟಕದ ಗೃಹ ಸಚಿವರ ವಿರುದ್ಧ ಅವಹೇಳನಕಾರಿ ಹಾಗೂ ಮಾನಹಾನಿಕರ ಅರ್ಥ ಬರುವ ರೀತಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಪ್ರಕಟಿಸಲಾಗಿದೆ ಎಂದು ಆರೋಪಿಸಲಾಗಿದೆ.
ಸಿದ್ರಾಮಯ್ಯ ಹಿರೇಮಠ ಅವರ ಫೇಸ್ಬುಕ್ ಖಾತೆಯಲ್ಲಿಯೂ ಅವಹೇಳನಕಾರಿ ಬರಹಗಳೊಂದಿಗೆ ವಿವಿಧ ಚಿತ್ರಗಳನ್ನು ಪ್ರಕಟಿಸಿ ಸಂಬಂಧಪಟ್ಟ ವ್ಯಕ್ತಿಗಳ ಬಗ್ಗೆ ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯ ಮೂಡಿಸುವ ಪ್ರಯತ್ನ ಮಾಡಲಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ.
ಇದಲ್ಲದೆ, ಶಿವಸೇನಾ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಕಲಬುರಗಿ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಲಚ್ಚಪ್ಪ ಎಸ್. ಜಮಾದಾರ್ ಅವರ ಹೆಸರನ್ನು ಪ್ರಸ್ತಾಪಿಸಿ ಅವಾಚ್ಯವಾಗಿ ನಿಂದಿಸುವ ರೀತಿಯಲ್ಲಿ ಮಾತನಾಡಿದ್ದಾರೆ. ಯಾವುದೇ ಸೂಕ್ತ ದಾಖಲೆ, ಪುರಾವೆ ಅಥವಾ ವಾಸ್ತವಾಂಶವಿಲ್ಲದೆ ಅವರು ಅಕ್ರಮ ವ್ಯವಹಾರಗಳಲ್ಲಿ ತೊಡಗಿದ್ದಾರೆ ಎಂಬ ಆರೋಪಗಳನ್ನು ಸಾರ್ವಜನಿಕವಾಗಿ ಮಾಡಿರುವುದು ಖಂಡನೀಯ ಎಂದು ದೂರುದಾರರು ತಿಳಿಸಿದ್ದಾರೆ.
ಲಚ್ಚಪ್ಪ ಎಸ್. ಜಮಾದಾರ್ ಅವರು ಸಾಮಾಜಿಕ ಸೇವೆ ಹಾಗೂ ರೈತರ ಪರವಾಗಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ವಿವಿಧ ವರ್ಗ, ಸಮುದಾಯ ಹಾಗೂ ಸರ್ವಧರ್ಮದ ಜನರೊಂದಿಗೆ ಸಹೋದರತ್ವದ ಭಾವನೆಯಿಂದ ಬದುಕುತ್ತಿರುವ ವ್ಯಕ್ತಿಯಾಗಿದ್ದಾರೆ. ಇಂತಹ ವ್ಯಕ್ತಿಯ ಕುರಿತು ವಾಸ್ತವಾಂಶವಿಲ್ಲದ ಅವಹೇಳನಕಾರಿ ಹಾಗೂ ಮಾನಹಾನಿಕರ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣ ಮತ್ತು ಸುದ್ದಿಗೋಷ್ಠಿಯ ಮೂಲಕ ಸಾರ್ವಜನಿಕವಾಗಿ ಹರಿಬಿಟ್ಟಿರುವುದರಿಂದ ಅವರ ಗೌರವಕ್ಕೆ ಧಕ್ಕೆ ಉಂಟಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾದ ಪೋಸ್ಟ್ಗಳ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ದೂರುದಾರರು ಒತ್ತಾಯಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ತಿಳಿದುಬಂದಿದೆ.



