ಉಗ್ರರ ಜೊತೆ ಸಂಪರ್ಕ ಶಂಕೆ: ಯಣಕೂರು ಗ್ರಾಮದ ಯುವಕ ಬಂಧನ

ಬೀದರ್, ಅ.3- ದೇಶದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ ಆರೋಪದ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಇತ್ತೀಚೆಗೆ ಇಬ್ಬರನ್ನು ಬಂಧಿಸಲಾಗಿತ್ತು. ಇದರ ಬೆನ್ನಲ್ಲೇ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಶಂಕೆಯ ಮೇರೆಗೆ ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಯಣಕೂರು ಗ್ರಾಮದ ಯುವಕನೊಬ್ಬನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಅಧಿಕಾರಿಗಳು ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ಬಂಧಿಸಿರುವುದಾಗಿ ತಿಳಿದುಬಂದಿದೆ.
ಯಣಕೂರು ಗ್ರಾಮದ ವಿಶಾಲ್ ಮೈತ್ರೆ ಎಂಬಾತನನ್ನು ಗುರುವಾರ ರಾಷ್ಟ್ರೀಯ ತನಿಖಾ ಸಂಸ್ಥೆಯ ತಂಡ ವಶಕ್ಕೆ ಪಡೆದಿದೆ. ಬಂಧಿತ ಯುವಕನಿಗೆ ಅಪರಾಧ ಹಿನ್ನೆಲೆ ಇರುವ ಕುರಿತು ಕೂಡ ಮಾಹಿತಿ ಲಭ್ಯವಾಗಿದ್ದು, ಈ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪಾಕಿಸ್ತಾನ ಮೂಲದ ಎಂದು ಹೇಳಲಾಗುತ್ತಿರುವ ಘೋಷಿತ ಉಗ್ರ ಶಹಜಾದ್ ಭಟ್ಟಿ ಹಾಗೂ ಇತರರೊಂದಿಗೆ ವಿಶಾಲ್ ಮೈತ್ರೆ ಸಂಪರ್ಕ ಹೊಂದಿದ್ದಾನೆ ಎಂಬ ಶಂಕೆಯ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಲಾರೆನ್ಸ್ ಭಯೋತ್ಪಾದಕ ಗ್ಯಾಂಗ್‌ನಿಂದ ಹೊರಬಂದ ಶಹಜಾದ್ ಭಟ್ಟಿ ಉಗ್ರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾನೆ ಎಂಬ ಆರೋಪಗಳಿವೆ. ಆತನೊಂದಿಗೆ ಸಂಪರ್ಕ ಹೊಂದಿರುವ ಶಂಕೆಯ ಹಿನ್ನೆಲೆಯಲ್ಲಿ ಬೀದರ್ ಮೂಲದ ಯುವಕನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬಂಧಿತ ವಿಶಾಲ್ ಮೈತ್ರೆ ವಿರುದ್ಧ ಈ ಹಿಂದೆ ಯಾವುದೇ ಅಪರಾಧ ಪ್ರಕರಣಗಳಿವೆಯೇ, ಉಗ್ರ ಸಂಘಟನೆಗಳೊಂದಿಗೆ ಆತನಿಗೆ ನೇರ ಸಂಪರ್ಕವಿದೆಯೇ ಹಾಗೂ ಇತರರೊಂದಿಗೆ ಯಾವ ರೀತಿಯ ಸಂಪರ್ಕ ಹೊಂದಿದ್ದಾನೆ ಎಂಬುದರ ಕುರಿತು ತನಿಖೆ ನಡೆಯುತ್ತಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಪ್ರಕ್ರಿಯೆ ಮುಂದುವರಿದಿದ್ದು, ತನಿಖೆ ಪೂರ್ಣಗೊಂಡ ಬಳಿಕ ಹೆಚ್ಚಿನ ಮಾಹಿತಿ ನೀಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟೆ ತಿಳಿಸಿದ್ದಾರೆ.



