ಜಿಲ್ಲಾಸುದ್ದಿ

ಬೀದರ್‌ನಲ್ಲಿ ಪೊಲೀಸರ ಭರ್ಜರಿ ಕಾರ್ಯಾಚರಣೆ: 10 ನಾಡ ಪಿಸ್ತೂಲ್, 36 ಜೀವಂತ ಗುಂಡು ಜಪ್ತಿ

ಬೀದರ್, ಅ.3- ಅಕ್ರಮ ಶಸ್ತ್ರಾಸ್ತ್ರಗಳ ಮಾರಾಟ ಮತ್ತು ಸಾಗಾಟದ ವಿರುದ್ಧ ಬೀದರ್ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಒಟ್ಟು 10 ನಾಡ ಪಿಸ್ತೂಲ್, 36 ಜೀವಂತ ಗುಂಡುಗಳು ಹಾಗೂ ಐದು ತಲವಾರುಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟೆ ತಿಳಿಸಿದ್ದಾರೆ.

ನಗರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಡ ಪಿಸ್ತೂಲ್‌ಗಳನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಶಸ್ತ್ರಾಸ್ತ್ರ ಮಾರಾಟಗಾರರು ಹಾಗೂ ಮಹಾರಾಷ್ಟ್ರ ಮೂಲದ ವ್ಯಕ್ತಿ ಸೇರಿದಂತೆ ಮೂವರು ಯುವಕರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಮಾಡುವ ಹುಚ್ಚಿಗಾಗಿ ನಾಡ ಪಿಸ್ತೂಲ್ ಖರೀದಿಸಿದ್ದರು ಎಂಬ ಆರೋಪದ ಮೇರೆಗೆ ಬೀದರ್‌ನ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಅವರಿಂದ ಮೂರು ನಾಡ ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಗರದ ಜ್ಞಾನಸುಧಾ ಶಾಲೆ ಬಳಿಯ ರಿಂಗ್ ರಸ್ತೆಯಲ್ಲಿ ಜುಲೈ 15ರಂದು ದ್ವಿಚಕ್ರ ವಾಹನದ ಮೂಲಕ ಅಕ್ರಮವಾಗಿ ನಾಡ ಪಿಸ್ತೂಲ್‌ಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರ ಕುರಿತು ಮಾಹಿತಿ ಪಡೆದ ಉಪನಗರ ಠಾಣೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ಆರೋಪಿಗಳನ್ನು ಬಂಧಿಸಿ ಐದು ನಾಡ ಪಿಸ್ತೂಲ್, 26 ಜೀವಂತ ಗುಂಡು ಹಾಗೂ ಐದು ತಲವಾರುಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಪ್ರಕರಣದ ತನಿಖೆ ಮುಂದುವರಿಸಿದ ಪೊಲೀಸರು ಅಕ್ರಮ ಶಸ್ತ್ರಾಸ್ತ್ರಗಳ ಪ್ರಮುಖ ಪೂರೈಕೆದಾರನಿಗಾಗಿ ಶೋಧ ನಡೆಸಿದ್ದರು. ಈ ವೇಳೆ ಮಹಾರಾಷ್ಟ್ರ ಮೂಲದ ಬಲಬೀರ್ ಸಿಂಗ್ ಅಲಿಯಾಸ್ ಶೇರ್ ಜಾಧವ್ ಎಂಬಾತನನ್ನು ಬಂಧಿಸಲಾಗಿದೆ. ಆತನಿಂದ ಎರಡು ಪಿಸ್ತೂಲ್ ಹಾಗೂ 12 ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಬಂಧಿತ ಬಲಬೀರ್ ಸಿಂಗ್ ವಿರುದ್ಧ ಮಹಾರಾಷ್ಟ್ರದ ವಿವಿಧ ಪೊಲೀಸ್ ಠಾಣೆಗಳಲ್ಲಿ ಶಸ್ತ್ರಾಸ್ತ್ರ ಕಾಯ್ದೆಗೆ ಸಂಬಂಧಿಸಿದ ಪ್ರಕರಣಗಳು ದಾಖಲಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಮಾಡುವ ಉದ್ದೇಶಕ್ಕಾಗಿ ನಾಡ ಪಿಸ್ತೂಲ್ ಖರೀದಿಸಿದ್ದರು ಎನ್ನಲಾದ ಬೀದರ್‌ನ ಮೂವರು ಯುವಕರನ್ನು ಬಂಧಿಸಲಾಗಿದ್ದು, ಅವರಿಂದ ಮೂರು ನಾಡ ಪಿಸ್ತೂಲ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರೊಂದಿಗೆ ಕಾರ್ಯಾಚರಣೆಯಲ್ಲಿ ಒಟ್ಟು 10 ನಾಡ ಪಿಸ್ತೂಲ್, 36 ಜೀವಂತ ಗುಂಡು ಹಾಗೂ ಐದು ತಲವಾರುಗಳು ಪೊಲೀಸರ ವಶಕ್ಕೆ ಬಂದಿವೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟೆ ಅವರ ಮಾರ್ಗದರ್ಶನದಲ್ಲಿ ಉಪನಗರ ಠಾಣೆ ಪೊಲೀಸರು ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ಅಕ್ರಮ ಶಸ್ತ್ರಾಸ್ತ್ರಗಳ ಜಾಲವನ್ನು ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸಿದ ಪೊಲೀಸ್ ಸಿಬ್ಬಂದಿಯ ಕಾರ್ಯಕ್ಕೆ ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಸುಮಾರು ₹4 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಚಂದ್ರಕಾಂತ ಪೂಜಾರಿ ಅವರ ಮುಂದಾಳತ್ವದಲ್ಲಿ ಪೊಲೀಸ್ ಉಪಾಧೀಕ್ಷಕ ಎನ್.ಡಿ. ಸನದಿ ನೇತೃತ್ವದಲ್ಲಿ ಪೊಲೀಸ್ ನಿರೀಕ್ಷಕ ಸಂತೋಷ ಎಲ್.ಟಿ. ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button