ಜಿಲ್ಲಾಸುದ್ದಿ

ರಾಷ್ಟ್ರ ನಾಯಕರ ಆದರ್ಶಗಳು ಯುವಜನತೆಗೆ ದಾರಿದೀಪ: ಡಾ. ಧರ್ಮಣ್ಣ ಬಡಿಗೇರ್

ಜೇವರ್ಗಿ, ಅ.3- ಮಹಾತ್ಮ ಗಾಂಧೀಜಿ, ಭಗತ್‌ಸಿಂಗ್‌ ಹಾಗೂ ಲಾಲ್‌ಬಹದ್ದೂರ್ ಶಾಸ್ತ್ರಿ ಅವರ ಜೀವನ ಮತ್ತು ಆದರ್ಶಗಳು ಶಾಂತಿ, ಕ್ರಾಂತಿ ಹಾಗೂ ಸಮೃದ್ಧಿಯ ಸಂಕೇತವಾಗಿವೆ ಎಂದು ಪ್ರಾಚಾರ್ಯ ಡಾ. ಧರ್ಮಣ್ಣ ಕೆ. ಬಡಿಗೇರ್ ಹೇಳಿದರು.

ಪಟ್ಟಣದ ಶ್ರೀ ಮಹಾಲಕ್ಷ್ಮೀ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಮಾಜಿ ಪ್ರಧಾನಿ ಲಾಲ್‌ಬಹದ್ದೂರ್ ಶಾಸ್ತ್ರಿ ಹಾಗೂ ಕ್ರಾಂತಿಕಾರಿ ಹೋರಾಟಗಾರ ಭಗತ್‌ಸಿಂಗ್‌ ಅವರ ಜಯಂತ್ಯುತ್ಸವದ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಾತ್ಮ ಗಾಂಧೀಜಿ ಸತ್ಯ ಮತ್ತು ಅಹಿಂಸೆಯ ಮಾರ್ಗದ ಮೂಲಕ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಕು ನೀಡಿದರು. ಉಪ್ಪಿನ ಸತ್ಯಾಗ್ರಹ, ಅಸಹಕಾರ ಚಳವಳಿ ಸೇರಿದಂತೆ ಹಲವು ಹೋರಾಟಗಳ ಮೂಲಕ ಬ್ರಿಟಿಷರ ವಿರುದ್ಧ ಜನರನ್ನು ಸಂಘಟಿಸಿ ದೇಶದ ಸ್ವಾತಂತ್ರ್ಯಕ್ಕೆ ಮಹತ್ವದ ಕೊಡುಗೆ ನೀಡಿದರು. ಅವರ ಸರಳ ಜೀವನ ಮತ್ತು ಆದರ್ಶಗಳು ಇಂದಿಗೂ ಯುವಜನತೆಗೆ ಮಾರ್ಗದರ್ಶನವಾಗಿವೆ ಎಂದು ಹೇಳಿದರು.

ಕ್ರಾಂತಿಕಾರಿ ಹೋರಾಟಗಾರ ಭಗತ್‌ಸಿಂಗ್‌ ಅವರು ಅಪ್ರತಿಮ ದೇಶಪ್ರೇಮ ಮತ್ತು ತ್ಯಾಗದ ಪ್ರತೀಕವಾಗಿದ್ದಾರೆ. ಅತಿ ಚಿಕ್ಕ ವಯಸ್ಸಿನಲ್ಲಿಯೇ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿದ ಅವರು ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದರು. ಅವರ ದೇಶಪ್ರೇಮ, ಧೈರ್ಯ ಹಾಗೂ ತ್ಯಾಗದ ಆದರ್ಶಗಳನ್ನು ಇಂದಿನ ಯುವಜನತೆ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಡಾ. ಧರ್ಮಣ್ಣ ಬಡಿಗೇರ್ ತಿಳಿಸಿದರು.

ಮಾಜಿ ಪ್ರಧಾನಿ ಲಾಲ್‌ಬಹದ್ದೂರ್ ಶಾಸ್ತ್ರಿ ಅವರು ಸರಳತೆ, ಪ್ರಾಮಾಣಿಕತೆ ಮತ್ತು ಶುದ್ಧ ಆಡಳಿತಕ್ಕೆ ಹೆಸರಾಗಿದ್ದರು. ತಮ್ಮ ಆಡಳಿತಾವಧಿಯಲ್ಲಿ ದೇಶದ ಜನರ ಅಭಿವೃದ್ಧಿಗಾಗಿ ಹಲವು ಮಹತ್ವದ ಕಾರ್ಯಗಳನ್ನು ಕೈಗೊಂಡಿದ್ದರು. ಇಂತಹ ಮಹಾನ್ ರಾಷ್ಟ್ರ ನಾಯಕರ ಉದಾತ್ತ ಗುಣಗಳನ್ನು ಇಂದಿನ ಯುವ ಪೀಳಿಗೆ ಹಾಗೂ ರಾಜಕಾರಣಿಗಳು ಅಳವಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ, ಲಾಲ್‌ಬಹದ್ದೂರ್ ಶಾಸ್ತ್ರಿ ಹಾಗೂ ಭಗತ್‌ಸಿಂಗ್‌ ಅವರ ಭಾವಚಿತ್ರಗಳಿಗೆ ಕಾಲೇಜಿನ ಉಪನ್ಯಾಸಕ ಸುರೇಶ ಹಿರೇಮಠ ಪೂಜೆ ಸಲ್ಲಿಸಿದರು.

ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಸಿದ್ದಲಿಂಗ ಎಸ್. ಬಡಿಗೇರ್, ಆಂಗ್ಲ ಭಾಷೆ ಉಪನ್ಯಾಸಕರಾದ ಮಲ್ಲಿಕಾರ್ಜುನ ನೆದಲಗಿ, ಭೀಮಣ್ಣ ಡಿ. ಗಂವಾರ್, ಶಿವಕುಮಾರ ಕುಮ್ಮನಸಿರಸಗಿ, ಆನಂದ್, ಸಂಸ್ಥೆಯ ಅಧ್ಯಕ್ಷೆ ಮಂಜುಳಾ ಡಿ. ಬಡಿಗೇರ್, ಉಪನ್ಯಾಸಕಿಯರಾದ ನಾಗಮ್ಮ ಬಿರಾದಾರ್ ಜವಳಗಾ, ಶಕೀಲಾ ಬೇಗಂ, ರೂಪಾ ಆರ್. ಕಲ್ಲೂರ, ಸಾವಿತ್ರಿ ಜಿ. ಮನಗೂಳಿ, ಸಾವಿತ್ರಿ ಮಡಿವಾಳಕರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಶ್ರೀ ಮಹಾಲಕ್ಷ್ಮೀ ಮಹಿಳಾ ಪದವಿ ಕಾಲೇಜಿನ ಬಿ.ಎ. ಮತ್ತು ಬಿ.ಕಾಂ ವಿಭಾಗದ ವಿದ್ಯಾರ್ಥಿನಿಯರು ರಾಷ್ಟ್ರ ನಾಯಕರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button