ಜಿಲ್ಲಾಸುದ್ದಿ

ಕೆಟ್ಟು ನಿಂತ ಸ್ಲೀಪರ್ ಬಸ್: ವಿದ್ಯಾರ್ಥಿನಿಗೆ ₹33,700 ಪರಿಹಾರ

ಕಲಬುರಗಿ, ಅ.3- ಮಾರ್ಗಮಧ್ಯೆ ಸ್ಲೀಪರ್ ಬಸ್ ಕೆಟ್ಟು ನಿಂತರೂ ಪ್ರಯಾಣಿಕರಿಗೆ ಪರ್ಯಾಯ ಸಾರಿಗೆ ವ್ಯವಸ್ಥೆ ಮಾಡದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯೊಬ್ಬರು ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗವು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ಪರಿಹಾರ ನೀಡುವಂತೆ ಆದೇಶಿಸಿದೆ.

ಬಸ್ ಕೆಟ್ಟು ನಿಂತಿದ್ದರಿಂದ ಸಂಕಷ್ಟಕ್ಕೀಡಾದ ವಿದ್ಯಾರ್ಥಿನಿಗೆ ಬಾಡಿಗೆ ಕಾರಿನ ವೆಚ್ಚವನ್ನು ಶೇಕಡಾ 6ರ ಬಡ್ಡಿದರದೊಂದಿಗೆ ಮರುಪಾವತಿಸುವಂತೆ ಆಯೋಗ ಆದೇಶಿಸಿದೆ. ಇದರ ಜೊತೆಗೆ ಮಾನಸಿಕ ವೇದನೆ ಹಾಗೂ ಸೇವಾ ಕೊರತೆಯ ಪರಿಹಾರವಾಗಿ ₹10,000 ಮತ್ತು ವ್ಯಾಜ್ಯ ವೆಚ್ಚವಾಗಿ ₹5,000 ಪಾವತಿಸುವಂತೆ ಸೂಚಿಸಲಾಗಿದೆ.

ಬಸ್ ಕೆಟ್ಟು ನಿಂತ ನಂತರ ಅಧಿಕಾರಿಗಳು ಪರ್ಯಾಯ ಸಾರಿಗೆ ವ್ಯವಸ್ಥೆ ಮಾಡದ ಹಿನ್ನೆಲೆಯಲ್ಲಿ ಉಂಟಾದ ತೊಂದರೆಯನ್ನು ಉಲ್ಲೇಖಿಸಿ ವಿದ್ಯಾರ್ಥಿನಿಯೊಬ್ಬರು ಆಯೋಗಕ್ಕೆ ದೂರು ಸಲ್ಲಿಸಿದ್ದರು. ದೂರಿನ ವಿಚಾರಣೆ ನಡೆಸಿದ ಆಯೋಗ ಇದೀಗ ಮಹತ್ವದ ಆದೇಶ ನೀಡಿದೆ.

ಬೀದರ್‌ನ ವಿದ್ಯಾರ್ಥಿನಿ ತೇಜಸ್ವಿನಿ ಬಸವರಾಜ್ ಅವರು 2025ರ ನವೆಂಬರ್ 16ರಂದು ಬೀದರ್‌ನಿಂದ ದಾವಣಗೆರೆಗೆ ಪ್ರಯಾಣಿಸಲು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಸ್ಲೀಪರ್ ಬಸ್‌ನಲ್ಲಿ ಆಸನ ಕಾಯ್ದಿರಿಸಿದ್ದರು. ಬಸ್ ಸಂಜೆ 6 ಗಂಟೆಗೆ ಬೀದರ್‌ನಿಂದ ಹೊರಟು ಮರುದಿನ ಬೆಳಿಗ್ಗೆ 6 ಗಂಟೆಗೆ ದಾವಣಗೆರೆ ತಲುಪಬೇಕಿತ್ತು.

ನಿಗದಿತ ಸಮಯಕ್ಕೆ ಬಸ್ ಬೀದರ್‌ನಿಂದ ಹೊರಟರೂ ಹುಮನಾಬಾದ್ ಸಮೀಪದಲ್ಲಿ ಕೆಟ್ಟು ನಿಂತಿತು. ಬಳಿಕ ಬಸ್ ಅನ್ನು ಕಲಬುರಗಿ ಡಿಪೋಗೆ ಕೊಂಡೊಯ್ಯಲಾಯಿತು. ಬಸ್ ದುರಸ್ತಿ ಮಾಡುವ ಪ್ರಯತ್ನಗಳು ವಿಫಲವಾದ ಹಿನ್ನೆಲೆಯಲ್ಲಿ ಪ್ರಯಾಣಿಕರು ತೊಂದರೆಗೀಡಾದರು.

ಮರುದಿನ ಪರೀಕ್ಷೆ ಇದ್ದ ಕಾರಣ ತುರ್ತಾಗಿ ದಾವಣಗೆರೆಗೆ ತೆರಳಬೇಕಿದ್ದ ತೇಜಸ್ವಿನಿ ಅವರು ಪರ್ಯಾಯ ಪ್ರಯಾಣದ ವ್ಯವಸ್ಥೆ ಮಾಡುವಂತೆ ಸಾರಿಗೆ ಸಂಸ್ಥೆಯ ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೆ ಅಧಿಕಾರಿಗಳು ಪರ್ಯಾಯ ವ್ಯವಸ್ಥೆ ಮಾಡದ ಹಿನ್ನೆಲೆಯಲ್ಲಿ ಕಲಬುರಗಿಯಿಂದ ದಾವಣಗೆರೆಗೆ ತೆರಳಲು ₹18,700 ಪಾವತಿಸಿ ಬಾಡಿಗೆ ಕಾರು ಪಡೆಯಬೇಕಾಯಿತು.

ನಂತರ ತೇಜಸ್ವಿನಿ ಅವರು ಗ್ರಾಹಕರ ಆಯೋಗವನ್ನು ಸಂಪರ್ಕಿಸಿ, ಬಾಡಿಗೆ ಕಾರಿಗೆ ಖರ್ಚಾದ ಹಣ ಹಾಗೂ ಬಸ್ ಟಿಕೆಟ್ ಮೊತ್ತವನ್ನು ಮರುಪಾವತಿಸುವಂತೆ ಮತ್ತು ತಮಗಾದ ಮಾನಸಿಕ ವೇದನೆಗೆ ಪರಿಹಾರ ನೀಡುವಂತೆ ಮನವಿ ಸಲ್ಲಿಸಿದ್ದರು.

ಆಯೋಗದ ಅಧ್ಯಕ್ಷೆ ಮಾಲತಿ ಗುರುಣ್ಣ ಹಾಗೂ ಸದಸ್ಯ ಎಂ. ಲೋಕೇಶ್ ಅವರನ್ನು ಒಳಗೊಂಡ ಪೀಠವು ಪ್ರಕರಣದ ವಿಚಾರಣೆ ನಡೆಸಿತು. 2026ರ ಜನವರಿ 3ರಿಂದ ಪಾವತಿ ಮಾಡುವ ದಿನಾಂಕದವರೆಗೆ ಶೇಕಡಾ 6ರ ಬಡ್ಡಿಯೊಂದಿಗೆ ₹18,700 ಮೊತ್ತವನ್ನು ತೇಜಸ್ವಿನಿ ಅವರಿಗೆ ಮರುಪಾವತಿಸುವಂತೆ ಕೆಕೆಆರ್‌ಟಿಸಿಗೆ ಆದೇಶಿಸಿದೆ.

ಇದರ ಜೊತೆಗೆ ಮಾನಸಿಕ ವೇದನೆ ಹಾಗೂ ಸೇವಾ ಕೊರತೆಗೆ ಪರಿಹಾರವಾಗಿ ₹10,000 ಮತ್ತು ವ್ಯಾಜ್ಯ ವೆಚ್ಚವಾಗಿ ₹5,000 ಪಾವತಿಸುವಂತೆ ಕೆಕೆಆರ್‌ಟಿಸಿಯ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಬೆಂಗಳೂರು ಸಾರಿಗೆ ಸಂಸ್ಥೆಯ ಸೇವಾ ವ್ಯವಸ್ಥಾಪಕರಿಗೆ ಆಯೋಗ ನಿರ್ದೇಶನ ನೀಡಿದೆ.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button