Uncategorized

ತರಕಾರಿ ಖರೀದಿಗೆ ಹೋದಾಗ ಮನೆ ಬೀಗ ಮುರಿದು ಕಳವು

ಕಲಬುರಗಿ, ಅ.2– ತರಕಾರಿ ಖರೀದಿಗಾಗಿ ರಾತ್ರಿ ಮಾರುಕಟ್ಟೆಗೆ ತೆರಳಿದ್ದ ಸಂದರ್ಭದಲ್ಲಿ ಕಳ್ಳರು ಮನೆಯ ಬಾಗಿಲಿನ ಬೀಗ ಮುರಿದು ಸುಮಾರು ₹2.20 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಮಾಡಿಕೊಂಡು ಪರಾರಿಯಾಗಿರುವ ಘಟನೆ ನಗರದ ಹೀರಾಪುರ ಹೊಸ ಬಡಾವಣೆಯಲ್ಲಿ ನಡೆದಿದೆ.

ತಿಮ್ಮಾಪುರ ವೃತ್ತದ ಸಮೀಪದ ಛಾಯಾಚಿತ್ರ ಸ್ಟುಡಿಯೊ ಹೊಂದಿರುವ ಮೊಹಮ್ಮದ್ ಇಮ್ರಾನ್ ತಂದೆ ಮೊಹಮ್ಮದ್ ಅಲಿಮ್ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಮೊಹಮ್ಮದ್ ಇಮ್ರಾನ್ ಅವರು ಪತ್ನಿಯೊಂದಿಗೆ ರಾತ್ರಿ ಸುಮಾರು 10 ಗಂಟೆಗೆ ತರಕಾರಿ ತರಲು ಮನೆಯಿಂದ ಹೊರಗೆ ಹೋಗಿದ್ದರು.

ಈ ಸಂದರ್ಭದಲ್ಲಿ ಮನೆಯ ಬಾಗಿಲಿಗೆ ಬೀಗ ಹಾಕಲಾಗಿತ್ತು. ಇದನ್ನೇ ಗಮನಿಸಿದ ಕಳ್ಳರು ಸಮಯ ಸಾಧಿಸಿ ಮನೆಯ ಬಾಗಿಲಿನ ಬೀಗ ಮುರಿದು ಒಳನುಗ್ಗಿದ್ದಾರೆ. ಬಳಿಕ ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದು ದೋಚಿಕೊಂಡು ಪರಾರಿಯಾಗಿದ್ದಾರೆ.

ಕಳವಾಗಿರುವ ವಸ್ತುಗಳಲ್ಲಿ ₹60 ಸಾವಿರ ಮೌಲ್ಯದ 10 ಗ್ರಾಂ ತೂಕದ ಚಿನ್ನದ ನೆಕ್ಲೆಸ್, ₹30 ಸಾವಿರ ಮೌಲ್ಯದ ಮತ್ತೊಂದು ಚಿನ್ನದ ನೆಕ್ಲೆಸ್, ₹30 ಸಾವಿರ ಮೌಲ್ಯದ ಚಿನ್ನದ ಕಿವಿಯೋಲೆಗಳು, ₹30 ಸಾವಿರ ಮೌಲ್ಯದ ಮಂಗಳಸೂತ್ರ, ₹12 ಸಾವಿರ ಮೌಲ್ಯದ ಮತ್ತೊಂದು ಮಂಗಳಸೂತ್ರ, ₹12 ಸಾವಿರ ಮೌಲ್ಯದ ಉಂಗುರ ಹಾಗೂ ₹6 ಸಾವಿರ ಮೌಲ್ಯದ ಮತ್ತೊಂದು ಚಿನ್ನದ ಉಂಗುರ ಸೇರಿವೆ. ಇದರೊಂದಿಗೆ ₹40 ಸಾವಿರ ನಗದು ಕೂಡ ಕಳವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಒಟ್ಟು ಸುಮಾರು ₹2.20 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳುವಾಗಿದೆ. ಘಟನೆ ಕುರಿತು ಮನೆ ಮಾಲೀಕರು ಪೊಲೀಸರಿಗೆ ದೂರು ನೀಡಿದ್ದು, ಸಬ್‌ ಅರ್ಬನ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕಳ್ಳತನಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಿದ್ದಾರೆ.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Check Also
Close
Back to top button