ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿಗೆ ನಾಳೆ ಹೃದಯಾಭಿನಂದನೆ

ಕಲಬುರಗಿ, ಅ.1– ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹೃದಯಾಭಿನಂದನಾ ಸಮಾರಂಭವನ್ನು ಅ.3ರಂದು ಬೆಳಿಗ್ಗೆ 11.15ಕ್ಕೆ ನಗರದ ಕನ್ನಡ ಭವನದಲ್ಲಿ ಆಯೋಜಿಸಲಾಗಿದೆ ಎಂದು ಪರಿಷತ್ ಜಿಲ್ಲಾ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ತಿಳಿಸಿದ್ದಾರೆ.
ಶಿಕ್ಷಕರ ಸೇವೆ ಮತ್ತು ತ್ಯಾಗವನ್ನು ಸ್ಮರಿಸುವ ಕಾರ್ಯವನ್ನು ಪ್ರತಿಯೊಬ್ಬರೂ ಮಾಡಬೇಕು. ಹೆತ್ತ ತಾಯಿಯ ನಂತರ ಜೀವನದ ಮೌಲ್ಯಗಳು, ಶಿಕ್ಷಣ ಹಾಗೂ ಬದುಕಿನ ಮಾರ್ಗವನ್ನು ತೋರಿಸುವವರು ಶಿಕ್ಷಕರು. ಹೀಗಾಗಿ ಶಿಕ್ಷಕರನ್ನು ಸಮಾಜದ ರಕ್ಷಕರು ಎಂದು ಕರೆಯುತ್ತೇವೆ. ಶಿಕ್ಷಕರನ್ನು ಸದಾ ಗೌರವಿಸುವ ಕಾರ್ಯವನ್ನು ಕನ್ನಡ ಸಾಹಿತ್ಯ ಪರಿಷತ್ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಸಾಹಿತ್ಯ ಪ್ರೇರಕ ನೀಲಕಂಠರಾವ್ ಅವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಮಹೇಶ ಹೂಗಾರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಸಂತೋಷ ಗಂಗೂ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಭೋಜನಗೌಡ ಪಾಟೀಲ, ನ್ಯಾಯವಾದಿ ಆರತಿ ತಿವಾರಿ ಹಾಗೂ ವಿಜಯಕುಮಾರ ಪಾಟೀಲ ಕಲ್ಲಹಂಗರಗಾ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.



