ಜಿಲ್ಲಾಸುದ್ದಿ

ಸ್ವಚ್ಛತೆ ಮತ್ತು ಆರೋಗ್ಯ ಕಾಪಾಡುವುದು ಎಲ್ಲರ ಜವಾಬ್ದಾರಿ: ಪ್ರೊ. ಬಟ್ಟು ಸತ್ಯನಾರಾಯಣ

ಕಲಬುರಗಿ, ಅ.೧: ಸ್ವಚ್ಛತೆ ಮತ್ತು ಆರೋಗ್ಯ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಟ್ಟು ಸತ್ಯನಾರಾಯಣ ಹೇಳಿದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯವು ವೇದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಸಹಯೋಗದೊಂದಿಗೆ ಸ್ವಚ್ಛತಾ ಹಿ ಸೇವಾ ಅಭಿಯಾನದ ಅಂಗವಾಗಿ ಪೌರಕಾರ್ಮಿಕರಿಗಾಗಿ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ಪೌರಕಾರ್ಮಿಕರ ಸುರಕ್ಷತೆ ಹಾಗೂ ಸಮ್ಮಾನ್ ಶಿಬಿರದಲ್ಲಿ ಉಚಿತ ಆರೋಗ್ಯ ತಪಾಸಣೆ, ಆರೋಗ್ಯ ಜಾಗೃತಿ ಮತ್ತು ಆರೋಗ್ಯ ಕಿಟ್‌ಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತೆ, ಆರೋಗ್ಯ ಮತ್ತು ನೈರ್ಮಲ್ಯ ಕಾಪಾಡುವುದು ಎಲ್ಲರ ಸಾಮೂಹಿಕ ಜವಾಬ್ದಾರಿಯಾಗಿದೆ. ಸ್ವಚ್ಛ ಹಾಗೂ ಆರೋಗ್ಯಕರ ಪರಿಸರ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ವಿಶ್ವವಿದ್ಯಾಲಯದ ಆವರಣವನ್ನು ಸ್ವಚ್ಛವಾಗಿಡುವಲ್ಲಿ ಪೌರಕಾರ್ಮಿಕರು ಸಲ್ಲಿಸುತ್ತಿರುವ ಸೇವೆ ಶ್ಲಾಘನೀಯವಾಗಿದೆ ಎಂದು ಹೇಳಿದರು.

ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ್ ಮಾತನಾಡಿ, ಆರೋಗ್ಯಕರ ಜೀವನ ಹಾಗೂ ಪರಿಸರಕ್ಕೆ ಸ್ವಚ್ಛತೆ ಮತ್ತು ವೈಯಕ್ತಿಕ ನೈರ್ಮಲ್ಯ ಅತ್ಯಗತ್ಯ. ವೈಯಕ್ತಿಕ ಸ್ವಚ್ಛತೆ, ಆರೋಗ್ಯಕರ ಆಹಾರ ಪದ್ಧತಿ ಹಾಗೂ ಮನೆ, ಕೆಲಸದ ಸ್ಥಳ ಮತ್ತು ವಿಶ್ವವಿದ್ಯಾಲಯದ ಆವರಣವನ್ನು ಸ್ವಚ್ಛವಾಗಿಡುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.

ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕರು ಹಾಗೂ ಸ್ವಚ್ಛತಾ ಹಿ ಸೇವಾ ನೋಡಲ್ ಅಧಿಕಾರಿ ಡಾ. ಗಣಪತಿ ಬಿ. ಸಿನೂರ್ ಅವರು ವೈಯಕ್ತಿಕ ನೈರ್ಮಲ್ಯ ಹಾಗೂ ಸ್ವಚ್ಛ ಪರಿಸರದ ಮಹತ್ವವನ್ನು ವಿವರಿಸಿದರು. ಉತ್ತಮ ಆರೋಗ್ಯವು ಸ್ವಚ್ಛತೆಯಿಂದಲೇ ಆರಂಭವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಿಯುಕೆ ವೈದ್ಯಾಧಿಕಾರಿ ಡಾ. ಜ್ಯೋತಿ ತೆಗನೂರು, ಡಾ. ರೋಹಿತ್ ಕುಮಾರ್ ಬಿ., ವೇದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಡಾ. ವೀರೇಶ್, ಡಾ. ಶ್ರದ್ಧಾ ಸೇರಿದಂತೆ ವೈದ್ಯಕೀಯ ತಂಡದ ಸದಸ್ಯರು ಭಾಗವಹಿಸಿದ್ದರು.

ವಿಶ್ವವಿದ್ಯಾಲಯದ ಪೌರಕಾರ್ಮಿಕರು ಹಾಗೂ ಕಾಡಗಂಚಿ, ಸುಂಟನೂರು ಮತ್ತು ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳು ಆರೋಗ್ಯ ತಪಾಸಣೆ, ವೈದ್ಯಕೀಯ ಸಲಹೆ ಹಾಗೂ ಉಚಿತ ಔಷಧಿಗಳ ಸೌಲಭ್ಯ ಪಡೆದುಕೊಂಡರು.

ಸ್ವಚ್ಛ ಹಾಗೂ ಆರೋಗ್ಯಕರ ಕ್ಯಾಂಪಸ್ ನಿರ್ವಹಣೆಯಲ್ಲಿ ಪೌರಕಾರ್ಮಿಕರು ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ, 80 ಪೌರಕಾರ್ಮಿಕರಿಗೆ ಆರೋಗ್ಯ ಮತ್ತು ಸ್ವಚ್ಛತಾ ಕಿಟ್‌ಗಳನ್ನು ವಿತರಿಸಲಾಯಿತು.

ಸಹಾಯಕ ಪ್ರಾಧ್ಯಾಪಕಿ ಡಾ. ಶ್ರೀಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. ಸಂಗೀತ ಮತ್ತು ಲಲಿತಕಲೆಗಳ ವಿಭಾಗದ ವಿದ್ಯಾರ್ಥಿಗಳಿಂದ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಆರಂಭವಾಗಿ, ರಾಷ್ಟ್ರಗೀತೆಯ ಗಾಯನದೊಂದಿಗೆ ಮುಕ್ತಾಯಗೊಂಡಿತು.

sswnews

https://sswnewskannada.com

Related Articles

Leave a Reply

Your email address will not be published. Required fields are marked *

Back to top button