ಭಗತ್ಸಿಂಗ್ರಂತಹ ಮಕ್ಕಳು ನಮ್ಮ ಮನೆಗಳಲ್ಲಿ ಹುಟ್ಟಲಿ: ಸಾಹಿತಿ ನವಲಕಲ್

ಕಲಬುರಗಿ, ಅ.೧: ಸಾವನ್ನು ಪ್ರೀತಿಯಿಂದ ಸ್ವೀಕರಿಸಿದ ಕ್ರಾಂತಿಕಾರಿ ಭಗತ್ಸಿಂಗ್ ಅವರಂತಹ ಮಕ್ಕಳು ನಮ್ಮ ಮನೆಗಳಲ್ಲಿ ಹುಟ್ಟಬೇಕು ಎಂದು ಸಾಹಿತಿ ಮಹಾಂತೇಶ ನವಲಕಲ್ ಹೇಳಿದರು.
ನಗರದ ಕನ್ನಡ ಭವನದಲ್ಲಿ ಬುಧವಾರ ನಡೆದ ಧೀರ ಹುತಾತ್ಮ ಭಗತ್ಸಿಂಗ್ ಅವರ ೧೧೯ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಭಗತ್ಸಿಂಗ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.
ಬಹುರಾಷ್ಟ್ರೀಯ ಕಂಪನಿಗಳ ದಾಳಿಯಿಂದ ಇಂದು ರೈತರ ಜೀವನ ದುಸ್ತರವಾಗುತ್ತಿದೆ. ಇಂತಹ ಅನ್ಯಾಯದ ವಿರುದ್ಧ ಹೋರಾಡಲು ಭಗತ್ಸಿಂಗ್ ಅವರಂತಹ ಕ್ರಾಂತಿಕಾರಿಗಳ ಬದುಕು ನಮಗೆ ಪ್ರೇರಣೆಯಾಗಬೇಕು ಎಂದು ಹೇಳಿದರು.
ನಿವೃತ್ತ ಪ್ರಾಂಶುಪಾಲರು ಹಾಗೂ ಸಾಹಿತಿ ಶ್ರೀಮತಿ ಅಮೃತಾ ಕಟಕೆ ಮಾತನಾಡಿ, ಭಗತ್ಸಿಂಗ್ ಅವರಲ್ಲಿದ್ದ ಅನ್ಯಾಯದ ವಿರುದ್ಧ ಹೋರಾಡುವ ಮನೋಭಾವವನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮುಖ್ಯ ಭಾಷಣಕಾರರಾದ ಎಐಡಿವೈಒ ರಾಜ್ಯ ಉಪಾಧ್ಯಕ್ಷ ಜಗನ್ನಾಥ ಎಸ್. ಎಚ್. ಮಾತನಾಡಿ, ಪ್ರತಿವರ್ಷ ಮಹಾನ್ ವ್ಯಕ್ತಿಗಳ ಜನ್ಮದಿನವನ್ನು ಆಚರಿಸುವುದರ ಮೂಲಕ ಅವರ ವಿಚಾರಗಳಿಂದ ಪ್ರೇರಣೆ ಪಡೆಯುತ್ತಿದ್ದೇವೆ. ದೇಶಕ್ಕಾಗಿ ಹೋರಾಡಲು ಭಗತ್ಸಿಂಗ್ ಅವರಿಗೆ ಅಪಾರ ಜ್ಞಾನವೇ ಕಾರಣವಾಗಿತ್ತು. ಅವರು ಸದಾ ಅಧ್ಯಯನಶೀಲರಾಗಿದ್ದರು ಎಂದರು.
ಭಗತ್ಸಿಂಗ್ ಅವರ ಅಧ್ಯಯನದಿಂದ ದೇಶದ ಸ್ಥಿತಿಗತಿಗಳನ್ನು ಅರಿತುಕೊಂಡ ಅವರು, ಸಮಾಜವಾದಿ ಭಾರತವೇ ದೇಶದ ಎಲ್ಲ ಸಮಸ್ಯೆಗಳಿಗೆ ಪರಿಹಾರ ಎಂಬ ನಿಲುವಿಗೆ ಬಂದಿದ್ದರು. ‘ಕ್ರಾಂತಿಯ ಖಡ್ಗವು ವಿಚಾರಗಳ ಸಾಣೆಯ ಮೇಲೆ ಹರಿತಗೊಳ್ಳುತ್ತದೆ’ ಎಂಬ ಅವರ ಮಾತು ಇಂದಿಗೂ ಪ್ರಸ್ತುತವಾಗಿದೆ ಎಂದು ಹೇಳಿದರು.
ಭಗತ್ಸಿಂಗ್ ಹುತಾತ್ಮರಾಗಿ ಸುಮಾರು ಎಂಭತ್ತು ವರ್ಷಗಳು ಕಳೆದರೂ, ದೇಶದಲ್ಲಿ ಜಾತೀಯತೆ, ಧರ್ಮಾಂಧತೆ ಹಾಗೂ ಮೂಢನಂಬಿಕೆಗಳು ಮುಂದುವರಿದಿವೆ. ಯುವಜನತೆ ಇಂತಹ ಅಡೆತಡೆಗಳನ್ನು ಎದುರಿಸಿ ಮುನ್ನಡೆಯಲು ಭಗತ್ಸಿಂಗ್ ಅವರೇ ಆದರ್ಶವಾಗಿದ್ದಾರೆ. ಅವರ ಕನಸಿನ ಸಮಾಜವಾದಿ ಭಾರತವನ್ನು ನಿರ್ಮಿಸಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸಬೇಕು ಎಂದು ಕರೆ ನೀಡಿದರು.
ಎಐಡಿವೈಒ ಜಿಲ್ಲಾ ಅಧ್ಯಕ್ಷ ತುಳಜಾರಾಮ ಎನ್.ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಎಐಎಂಎಸ್ಎಸ್ ಜಿಲ್ಲಾ ಅಧ್ಯಕ್ಷೆ ಶ್ರೀಮತಿ ಗುಂಡಮ್ಮ ಮಡಿವಾಳ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ಅನಂತ ನಾರಾಯಣ ಮಹಾದೇವ ಅವರ ನಿರ್ದೇಶನದ ‘ಫುಲೆ’ ಚಲನಚಿತ್ರ ಪ್ರದರ್ಶನ ನಡೆಯಿತು. ಬಳಿಕ ಮಹಾನ್ ಚೇತನರಾದ ಜ್ಯೋತಿಬಾ ಫುಲೆ ಹಾಗೂ ಸಾವಿತ್ರಿಬಾಯಿ ಫುಲೆ ಅವರ ಹೋರಾಟಮಯ ಬದುಕು ಮತ್ತು ಮಹಿಳಾ ಶಿಕ್ಷಣಕ್ಕಾಗಿ ಅವರು ನಡೆಸಿದ ಹೋರಾಟದ ಕುರಿತು ಸಂವಾದ ನಡೆಯಿತು. ಸಂವಾದವನ್ನು ಶ್ರೀಮತಿ ಅಮೃತಾ ಕಟಕೆ ನಡೆಸಿಕೊಟ್ಟರು.
ಅಭಿವ್ಯಕ್ತಿಯ ಪ್ರಗತಿಪರ ಸಾಂಸ್ಕೃತಿಕ ವೇದಿಕೆಯ ಜಿಲ್ಲಾ ಸಂಚಾಲಕಿ ಶ್ರೀಮತಿ ಅಶ್ವಿನಿ ಎ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಆರ್.ಕೆ. ವೀರಭದ್ರಪ್ಪ, ರಾಮಣ್ಣ ಇಬ್ರಾಹಿಂಪುರ, ಎಸ್.ಎಂ. ಶರ್ಮಾ, ಮಹೇಶ್ ಎಸ್.ಜಿ., ಗಣಪತರಾವ್ ಕೆ. ಮಾನೆ, ಡಾ. ಸೀಮಾ ದೇಶಪಾಂಡೆ, ಹನುಮಂತ ಎಸ್.ಎಚ್., ಮಹೇಶ್ ನಾಡಗೌಡ, ಸಂತೋಷಕುಮಾರ್ ಹಿರೇಮಠ, ಮಹೇಶ್ ಎಸ್.ಬಿ., ಈಶ್ವರ ಕುಂಬಾರ, ಭಾಗಣ್ಣ ಬುಕ್ಕಾ, ಪ್ರೀತಿ ದೊಡ್ಮನಿ, ಗೋವಿಂದ ಯಳವಾರ, ಪುಟ್ಟರಾಜ ಲಿಂಗಶೆಟ್ಟಿ, ಹರೀಶ್ ಸಂಗಾಣಿ, ಶಿವಲಿಂಗಮ್ಮ, ಭೀಮಾಶಂಕರ ಆಂದೋಲಾ, ನಾಗರಾಜ ರಾವೂರ, ಯುವರಾಜ ರಾಠೋಡ ಸೇರಿದಂತೆ ನೂರಾರು ಮಂದಿ ಉಪಸ್ಥಿತರಿದ್ದರು.



