ಸಂಗೀತ ಕಲಾವಿದರು ಸಮೃದ್ಧ ಸಮಾಜದ ಆಸ್ತಿ: ಜ್ಯೋತಿ ಪಾಟೀಲ
ಗ್ರಾಮೀಣ ಸಂಗೀತದ ಸಂರಕ್ಷಣೆ ಎಲ್ಲರ ಜವಾಬ್ದಾರಿ: ಜ್ಯೋತಿ ಪಾಟೀಲ

ಕಲಬುರಗಿ, ಸೆ.28: ಗ್ರಾಮೀಣ ಭಾಗದ ಸಂಗೀತ ನಮ್ಮ ಹಳ್ಳಿಯ ಧ್ವನಿ ಮಾತ್ರವಲ್ಲ, ಅದು ನಮ್ಮ ಮಣ್ಣಿನ ಆತ್ಮ. ಆ ಆತ್ಮವನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ಶ್ರೀರಾಮ ಕನ್ನಡ ಕಾನ್ವೆಂಟ್ ಶಾಲೆಯ ಮುಖ್ಯ ಗುರುಗಳಾದ ಜ್ಯೋತಿ ಪಾಟೀಲ ಹೇಳಿದರು.
ತಾಲ್ಲೂಕಿನ ಉಪಳಾಂವ ಗ್ರಾಮದ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಆವರಣದಲ್ಲಿ ಶ್ರೀದೇವಿ ಸರಸ್ವತಿ ಕಲಾ ಬಳಗ ಸಂಘದ ವತಿಯಿಂದ ಆಯೋಜಿಸಿದ್ದ ಮಧುರ ಗಾಯನ ಸಂಗೀತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಸಂಗೀತ ನಮ್ಮ ಮಣ್ಣಿನ ಧ್ವನಿಯಾಗಿದ್ದು, ಅದು ಕೇವಲ ಹಾಡುಗಳಲ್ಲ. ಹಳ್ಳಿಯ ಜನರ ಜೀವನ, ಭಾವನೆ, ಸಂಸ್ಕೃತಿ ಹಾಗೂ ಮಣ್ಣಿನ ಪರಿಮಳವನ್ನು ಸಾರುವ ಜೀವಂತ ಪರಂಪರೆಯಾಗಿದೆ. ಸಂಗೀತ ಕಲಾವಿದರು ಸಮೃದ್ಧ ಸಮಾಜದ ಆಸ್ತಿ. ಇಂತಹ ಕಲಾ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಬೆಳೆಸುವ ಕಾರ್ಯವಾಗಬೇಕು ಎಂದು ಅವರು ಹೇಳಿದರು.
ಗ್ರಾಮೀಣ ಪ್ರದೇಶದಲ್ಲಿ ಸಂಗೀತ ಮತ್ತು ಕಲಾ ಚಟುವಟಿಕೆಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯಬೇಕು. ಸ್ಥಳೀಯ ಕಲಾವಿದರಿಗೆ ಸೂಕ್ತ ವೇದಿಕೆಗಳನ್ನು ಕಲ್ಪಿಸುವ ಮೂಲಕ ಅವರ ಪ್ರತಿಭೆಯನ್ನು ಗುರುತಿಸಿ ಗೌರವಿಸಬೇಕು ಎಂದು ಜ್ಯೋತಿ ಪಾಟೀಲ ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕ ಕುಪೇಂದ್ರ ಹುಲಸೂರೆ, ನ್ಯಾಯವಾದಿ ಹನುಮಂತರಾಯ ಅಟ್ಟೂರು, ಶ್ರೀರಾಮ ಕನ್ನಡ ಕಾನ್ವೆಂಟ್ ಶಾಲೆಯ ಸಂಸ್ಥಾಪಕ ಅಧ್ಯಕ್ಷ ಗೌಡೇಶ ಬಿರೇದಾರ, ಬಸವರಾಜ ಧರಿ ಸೇರಿದಂತೆ ಹಲವರು ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಸಂಘದ ಅಧ್ಯಕ್ಷ ಶರಣು ಕಟ್ಟಿಮನಿ ಸಾಗನೂರು ಅಧ್ಯಕ್ಷತೆ ವಹಿಸಿದ್ದರು.
ಸಂಗೀತ ಕಲಾವಿದರಾದ ಗುರುಶಾಂತಯ್ಯ ಸ್ಥಾವರಮಠ, ಆನಂದಕುಮಾರ ಪೂಜಾರಿ, ಸೋಮಯ್ಯ ಸಿಂದನೂರು, ಬಸಯ್ಯ ಗುತೇದಾರ, ತೊಟ್ಟಯ್ಯ ಅಬ್ಬೆತೂರ ಮಕೂರ, ಶ್ರೀಶೈಲ ಯಳಸಂಗಿ ಹಾಗೂ ವೀರಯ್ಯ ಸ್ವಾಮಿ ಮಾಡಿಯಾಳ ಸೇರಿದಂತೆ ಹಲವರು ಸಂಗೀತ ಸೇವೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮದ ಅನೇಕರು ಭಾಗವಹಿಸಿ ಸಂಗೀತ ಕಾರ್ಯಕ್ರಮವನ್ನು ಆಸ್ವಾದಿಸಿದರು.



