ಸ್ವಂತ ವೆಚ್ಚದಲ್ಲಿ ಸಹಕಾರಿ ಸಂಘದ ಕಟ್ಟಡ ಮರುನಿರ್ಮಾಣ

ಅಫಜಲಪುರ, ಸೆ.27: ತಾಲೂಕಿನ ದೇವಲ ಗಾಣಗಾಪುರದಲ್ಲಿ ಕೃಷಿ ಪತ್ತಿನ ಸಹಕಾರಿ ಸಂಘದ ಕಚೇರಿ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ಭಾನುವಾರ ನಡೆಯಿತು.
ಸಹಕಾರಿ ಸಂಘದ ಅಧ್ಯಕ್ಷ ಪ್ರಿಯಾಂಕ ಭಟ್ ನಾಗೇಶ್ ಭಟ್ ಪೂಜಾರಿ ಅವರು ತಮ್ಮ ಹಿರಿಯರಾದ ಅಚ್ಚುತ ಭಟ್ ಪೂಜಾರಿ ಅವರ ಸ್ಮರಣಾರ್ಥ ಸ್ವಂತ ₹10 ಲಕ್ಷ ವೆಚ್ಚದಲ್ಲಿ ಹಾಳಾಗಿದ್ದ ಕಟ್ಟಡವನ್ನು ಮರುನಿರ್ಮಿಸಿದ್ದಾರೆ.
ಕಟ್ಟಡವನ್ನು ಶಾಸಕ ಎಂ.ವೈ. ಪಾಟೀಲ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಸಹಕಾರಿ ಸಂಘದ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಕಟ್ಟಡದ ಸುತ್ತಲೂ ಶೀಘ್ರದಲ್ಲೇ ಕಾಂಪೌಂಡ್ ನಿರ್ಮಿಸುವುದರ ಜೊತೆಗೆ ವ್ಯಾಪಾರ ಮಳಿಗೆಗಳನ್ನು ನಿರ್ಮಿಸಿಕೊಡಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಶಿವಕುಮಾರ ನಟಿಕಾರ್, ಅರವಿಂದ ಗುತ್ತೇದಾರ್, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಅಜಯ್ ಪಾಟೀಲ, ಪ್ರಕಾಶ ಜಮಾದಾರ, ಗ್ರಾಮಸ್ಥರಾದ ಮಹಾದೇವ ಗುತ್ತೇದಾರ್, ಲಕ್ಷ್ಮಣ ಹೇರೂರು, ಮಾರುತಿ ಮೂರನೇತಿ, ಬಲವಂತ ಜಕ್ಕಬಾ, ನಾಗೇಶ್ ಭಟ್ ಪೂಜಾರಿ, ಅನ್ವರ್ ತಾಂಬೂಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ರೈತರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.



