ಜಿಲ್ಲಾಸುದ್ದಿ

ರಾಜ್ಯಮಟ್ಟದ ಕ್ವಿಜ್ ಸ್ಪರ್ಧೆ: ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸಲು ಅರುಣಕುಮಾರ್ ಕರೆ

ಕಲಬುರಗಿ, ಸೆ.26: ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಸುವ ಅಗತ್ಯವಿದ್ದು, ಕೇವಲ ಅಂಕ ಗಳಿಕೆಗೆ ಸೀಮಿತವಾಗದೆ ವಿವಿಧ ಜ್ಞಾನಾಧಾರಿತ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಬೇಕು ಎಂದು ಕಲ್ಯಾಣ ಕರ್ನಾಟಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಪ್ರೊ. ಅರುಣಕುಮಾರ್ ಪಾಟೀಲ ಕರೆ ನೀಡಿದರು.

ಇನ್‌ಟ್ಯಾಕ್ ಕಲಬುರಗಿ ಅಧ್ಯಾಯ ಹಾಗೂ ಮಿಲೇನಿಯಂ ಇಂಗ್ಲಿಷ್ ಮತ್ತು ಕನ್ನಡ ಮಾಧ್ಯಮ ಶಾಲೆಗಳ ಸಂಯುಕ್ತ ಆಶ್ರಯದಲ್ಲಿ ನಡೆದ ‘ಹೆರಿಟೇಜ್ ಕ್ವಿಜ್-2026’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಸಪ್ರಶ್ನೆ ಸೇರಿದಂತೆ ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ವಿದ್ಯಾರ್ಥಿಗಳ ಸಾಮಾನ್ಯ ಜ್ಞಾನ ವೃದ್ಧಿಯಾಗುವುದರ ಜೊತೆಗೆ ಅವರಲ್ಲಿ ಆತ್ಮವಿಶ್ವಾಸ ಹಾಗೂ ಸ್ಪರ್ಧಾತ್ಮಕ ಮನೋಭಾವ ಬೆಳೆಯುತ್ತದೆ. ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ವಿವಿಧ ವೇದಿಕೆಗಳಲ್ಲಿ ಪ್ರದರ್ಶಿಸಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ನಿವೃತ್ತ ಪ್ರಾಧ್ಯಾಪಕ ಡಾ. ಕಲ್ಲಿನಾಥ ಪಾಟೀಲ ಮಾತನಾಡಿ, ಇನ್‌ಟ್ಯಾಕ್ ಸಂಸ್ಥೆಯು ನಿರಂತರವಾಗಿ ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಶೈಕ್ಷಣಿಕ ಪ್ರವಾಸ, ಪಾರಂಪರಿಕ ನಡಿಗೆ, ಚಿತ್ರಕಲಾ ಸ್ಪರ್ಧೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ರಸಪ್ರಶ್ನೆ ಸ್ಪರ್ಧೆಗಳು ಮಕ್ಕಳ ಸಾಮಾನ್ಯ ಜ್ಞಾನ ಹೆಚ್ಚಿಸುವುದರ ಜೊತೆಗೆ ಅವರ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುತ್ತವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಧ್ಯಾಪಕ ಡಾ. ಬಿ.ಎಸ್. ಗುಳಶೆಟ್ಟಿ ಮಾತನಾಡಿ, ಇಂದಿನ ಜಗತ್ತಿಗೆ ಹೊಂದಿಕೊಳ್ಳುವ ಅಗತ್ಯ ಜ್ಞಾನವನ್ನು ವಿದ್ಯಾರ್ಥಿಗಳು ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ಗಳಿಸಬಹುದು ಎಂದು ಹೇಳಿದರು.

ಡಾ. ಶಂಭುಲಿಂಗ ಎಸ್. ವಾಣಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಶಶಿಶೇಖರ ರೆಡ್ಡಿ ವಂದಿಸಿದರು.

ನಗರದ ಒಂಬತ್ತು ಶಾಲೆಗಳ ಸುಮಾರು 125 ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಲಿಖಿತ ಪರೀಕ್ಷೆಯ ಮೂಲಕ ಹತ್ತು ತಂಡಗಳನ್ನು ಆಯ್ಕೆ ಮಾಡಿ, ಬಳಿಕ ಐದು ಸುತ್ತುಗಳಲ್ಲಿ ಮೌಖಿಕ ಪ್ರಶ್ನೋತ್ತರ ಸ್ಪರ್ಧೆ ನಡೆಸಲಾಯಿತು.

ಅಪ್ಪಾ ಪಬ್ಲಿಕ್ ಶಾಲೆಯ 9ನೇ ತರಗತಿಯ ಎಸ್.ವಿ. ದರ್ಶನ್ ಹಾಗೂ ಮಹಮ್ಮದ್ ಅಬೂಬಕರ್ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದ ಕ್ವಿಜ್ ಸ್ಪರ್ಧೆಗೆ ಆಯ್ಕೆಯಾದರು. ಮಿಲೇನಿಯಂ ಆಂಗ್ಲ ಶಾಲೆಯ ಸೋಹನ್ ಹಾಗೂ ನಯನ್ ದ್ವಿತೀಯ ಸ್ಥಾನ ಪಡೆದರೆ, ಎಸ್.ಎಂ. ಶಾಲೆಯ ಮುಜಾಮಿಲ್ ಹಾಗೂ ಮನೀಷ್ ಎಂ. ತೃತೀಯ ಸ್ಥಾನ ಪಡೆದರು.

ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಇನ್‌ಟ್ಯಾಕ್ ವತಿಯಿಂದ ಪ್ರಮಾಣಪತ್ರ ಹಾಗೂ ಸಾಮಾನ್ಯ ಜ್ಞಾನ ಪುಸ್ತಕ ವಿತರಿಸಲಾಯಿತು.

Related Articles

Leave a Reply

Your email address will not be published. Required fields are marked *

Back to top button