ಕಲಬುರಗಿಯಲ್ಲಿ ಬೃಹತ್ ಗಾಂಧೀಜಿ ಪ್ರತಿಮೆ: ಅ.2ರಂದು ಲೋಕಾರ್ಪಣೆಗೆ ಆಗ್ರಹ

ಕಲಬುರಗಿ, ಸೆ.26: ನಗರದ ಟೌನ್ಹಾಲ್ ಆವರಣದ ಮುಂಭಾಗ ನಿರ್ಮಾಣಗೊಳ್ಳುತ್ತಿರುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಬೃಹತ್ ಪ್ರತಿಮೆಯನ್ನು ಅಕ್ಟೋಬರ್ 2ರಂದು ಗಾಂಧೀಜಿ ಜಯಂತಿಯಂದು ಲೋಕಾರ್ಪಣೆ ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಮಂಜುನಾಥ ನಾಲವಾರಕರ್ ಆಗ್ರಹಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಮುರುಗೇಶ ನಿರಾಣಿ ಅವರಿಗೆ ಮಹಾತ್ಮ ಗಾಂಧೀಜಿ ಅವರ ಬೃಹತ್ ಪ್ರತಿಮೆ ಸ್ಥಾಪಿಸುವಂತೆ ಮನವಿ ಸಲ್ಲಿಸಲಾಗಿತ್ತು. ಈ ಮನವಿಗೆ ಸ್ಪಂದಿಸಿದ ಹಾಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಟೌನ್ಹಾಲ್ ಮುಂಭಾಗ ಬೃಹತ್ ಪ್ರತಿಮೆ ನಿರ್ಮಾಣಕ್ಕೆ ಈಗಾಗಲೇ ಕ್ರಮ ಕೈಗೊಂಡಿದ್ದಾರೆ ಎಂದು ಹೇಳಿದರು.
ಹೀಗಾಗಿ ನಿರ್ಮಾಣ ಹಂತದಲ್ಲಿರುವ ಬೃಹತ್ ಗಾಂಧೀಜಿ ಪ್ರತಿಮೆಯನ್ನು ಅಕ್ಟೋಬರ್ 2ರಂದು ಲೋಕಾರ್ಪಣೆ ಮಾಡಬೇಕು. ಇಲ್ಲವಾದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಮಂಜುನಾಥ ನಾಲವಾರಕರ್ ಎಚ್ಚರಿಸಿದರು.
ವೈಜನಾಥ ಪಾಟೀಲ ಪ್ರತಿಮೆ ನಿರ್ಮಾಣಕ್ಕೂ ಆಗ್ರಹ
ಸಂವಿಧಾನದ 371(ಜೆ) ಕಲಂ ತಿದ್ದುಪಡಿಯ ರೂವಾರಿಯಾಗಿದ್ದ ದಿ. ವೈಜನಾಥ ಪಾಟೀಲ ಅವರ ಪ್ರತಿಮೆಯನ್ನೂ ಟೌನ್ಹಾಲ್ ಆವರಣದಲ್ಲಿ ನಿರ್ಮಿಸಲು ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.
ಇದೇ ವೇಳೆ, ಕಲ್ಯಾಣ ಕರ್ನಾಟಕ ಉತ್ಸವ-2026ರ ಅಂಗವಾಗಿ ವಿವಿಧ ಕಾಲೇಜುಗಳಲ್ಲಿ ಹೈದರಾಬಾದ್ ಕರ್ನಾಟಕ ವಿಮೋಚನಾ ಹೋರಾಟ ಕುರಿತು ಚಿಂತನಾ-ಮಂಥನ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಈ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಸೆ.28ರಂದು ಸಂಜೆ 5 ಗಂಟೆಗೆ ನಗರದ ಕಲಾಮಂಡಳಿಯ ಅನ್ನಪೂರ್ಣ ಕ್ರಾಸ್ನಲ್ಲಿ ನಡೆಯಲಿದೆ. 371(ಜೆ) ಕಲಂ ತಿದ್ದುಪಡಿಗಾಗಿ ಹೋರಾಟ ನಡೆಸಿದ ಹೋರಾಟಗಾರರನ್ನು ಗುರುತಿಸಿ ‘ಕಲ್ಯಾಣ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಚಿನ್ ಫರತಾಬಾದ್, ಶರಣು ಹೊಸಮನಿ, ಅರವಿಂದ ನಾಟೀಕರ್, ಸುರೇಶ್ ಹೊನಗುಂಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



