ಚೌಡದಾನಪುರ ಅಭಿವೃದ್ಧಿಗೆ ಆಗ್ರಹಿಸಿ ಸೆ.28ರಂದು ಕಲಬುರಗಿಯಲ್ಲಿ ಪ್ರತಿಭಟನೆ

ಕಲಬುರಗಿ, ಸೆ.26: ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲ್ಲೂಕಿನ ಚೌಡದಾನಪುರದಲ್ಲಿರುವ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಮೂಲ ಗದ್ದುಗೆ ಹಾಗೂ ಐಕ್ಯಮಂಟಪವನ್ನು ಕೂಡಲಸಂಗಮ ಮಾದರಿಯಲ್ಲಿ ಅಭಿವೃದ್ಧಿಪಡಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸೆ.28ರಂದು ಕಲಬುರಗಿಯಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಅಂಬಿಗರ ಸೇವಾದಳದ ಜಿಲ್ಲಾಧ್ಯಕ್ಷ ಆನಂದ ಕದ್ದರಗಿ ತಿಳಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಅವರು 12ನೇ ಶತಮಾನದ ಪ್ರಮುಖ ವಚನಕಾರರು ಹಾಗೂ ಶರಣರಾಗಿದ್ದು, ಬಸವಣ್ಣನವರ ಸಮಕಾಲೀನರಾಗಿದ್ದರು. ತಮ್ಮ ವಚನಗಳ ಮೂಲಕ ಸಾಮಾಜಿಕ ಅಸಮಾನತೆ, ಅಂಧನಂಬಿಕೆ ಮತ್ತು ಡಾಂಭಿಕತೆಯನ್ನು ಪ್ರಶ್ನಿಸಿದ್ದರು ಎಂದು ಹೇಳಿದರು.
ಜಗಜ್ಯೋತಿ ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ, ಚೆನ್ನಬಸವಣ್ಣ, ಸಿದ್ಧರಾಮ, ಮಡಿವಾಳ ಮಾಚಿದೇವ ಹಾಗೂ ಮೋಳಿಗೆ ಮಾರಯ್ಯ ಸೇರಿದಂತೆ ಸಮಕಾಲೀನ ಶರಣರೊಂದಿಗೆ ಅಂಬಿಗರ ಚೌಡಯ್ಯನವರೂ ಶರಣ ಚಳವಳಿ ಹಾಗೂ ವಚನ ಸಾಹಿತ್ಯಕ್ಕೆ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಅವರು ತಿಳಿಸಿದರು.
ಅಂಬಿಗರ ಚೌಡಯ್ಯ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ಆಗ್ರಹ
ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಗದ್ದುಗೆ ಹಾಗೂ ಐತಿಹಾಸಿಕ ಸ್ಥಳದ ಸಮಗ್ರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರವು ಕಾನೂನುಬದ್ಧವಾಗಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು ಎಂಬುದು ಪ್ರಮುಖ ಬೇಡಿಕೆಯಾಗಿದೆ ಎಂದು ಆನಂದ ಕದ್ದರಗಿ ಹೇಳಿದರು.
ಚೌಡದಾನಪುರದಲ್ಲಿರುವ ಮೂಲ ಗದ್ದುಗೆ ಮತ್ತು ಐತಿಹಾಸಿಕ ಸ್ಥಳವನ್ನು ಸಂರಕ್ಷಿಸಬೇಕು. ಕೂಡಲಸಂಗಮ ಮಾದರಿಯಲ್ಲಿ ಸಮಗ್ರ ಅಭಿವೃದ್ಧಿಗೆ ಕ್ರಿಯಾ ಯೋಜನೆ ರೂಪಿಸಿ, ಮೂಲಸೌಕರ್ಯ ಕಲ್ಪಿಸಬೇಕು. ಅಂಬಿಗರ ಚೌಡಯ್ಯನವರ ವಚನ ಸಾಹಿತ್ಯ ಹಾಗೂ ಶರಣ ಪರಂಪರೆಯ ಅಧ್ಯಯನ ಮತ್ತು ವಸ್ತುಸಂಗ್ರಹಾಲಯ ಕೇಂದ್ರ ಸ್ಥಾಪಿಸಬೇಕು. ಭಕ್ತರು ಹಾಗೂ ಪ್ರವಾಸಿಗರಿಗೆ ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.
ಪ್ರತಿ ವರ್ಷ ಜಯಂತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ನಡೆಸಬೇಕು. ವಿವಿಧ ಇಲಾಖೆಗಳ ಅನುದಾನ ಹಾಗೂ ಯೋಜನೆಗಳನ್ನು ಸಮನ್ವಯಗೊಳಿಸಿ ಗದ್ದುಗೆ ಪ್ರದೇಶವನ್ನು ಧಾರ್ಮಿಕ, ಐತಿಹಾಸಿಕ ಹಾಗೂ ಸಾಂಸ್ಕೃತಿಕ ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿದರು.
ಅಂಬಿಗರ ಚೌಡಯ್ಯನವರ ಮೂಲ ಗದ್ದುಗೆ ಹೆಸರಿನಲ್ಲಿ ಭವ್ಯ ಪ್ರವೇಶದ್ವಾರ ನಿರ್ಮಿಸುವುದು ಸೇರಿದಂತೆ ಅಗತ್ಯವಿದ್ದಲ್ಲಿ ಪ್ರತ್ಯೇಕ ಕಾಯ್ದೆ ಅಥವಾ ತಿದ್ದುಪಡಿ ಕಾಯ್ದೆ ರೂಪಿಸಿ, ಸರ್ಕಾರದ ಆದೇಶ ಅಥವಾ ಅಧಿಸೂಚನೆ ಮೂಲಕ ಪ್ರಾಧಿಕಾರಕ್ಕೆ ಕಾನೂನುಬದ್ಧ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿದರು.
ಸೆ.28ರಂದು ಪಾದಯಾತ್ರೆ
ಈ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸೆ.28ರಂದು ಸೋಮವಾರ ಬೆಳಿಗ್ಗೆ 11 ಗಂಟೆಗೆ ಅನ್ನಪೂರ್ಣ ಕ್ರಾಸ್‌ನಲ್ಲಿರುವ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ನಿರ್ಮಾಣ ಸ್ಥಳದಿಂದ ಪಾದಯಾತ್ರೆ ಆರಂಭಿಸಿ ಜಿಲ್ಲಾಧಿಕಾರಿ ಕಚೇರಿವರೆಗೆ ತೆರಳಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಆನಂದ ಕದ್ದರಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂತೋಷ ಬಣ್ನೂರು, ರಾಘವೇಂದ್ರ ಜೋಕೆ, ಮಹಾಂತೇಶ ಹರವಾಳ, ಶರಣು ಕಿರಸವಾಳಗಿ, ಬಸವರಾಜ ಮಳ್ಳಿ, ಮಲ್ಲಿಕಾರ್ಜುನ ಗುಡುಬಾ, ಮಲ್ಲಿನಾಥ ಚಿಂಚನಸೂರ, ದಿಗಂಬರ ಮಾಘಣಗೇರಿ, ಪ್ರವೀಣ ಚಿಕ್ಕಲ್, ನಿಂಗಣ್ಣ ಬಾಗಿಲೆ, ಕೃಷ್ಣ ಸಾಗರ ಚಿತ್ತಮಗೇರಿ, ಗೊಲ್ಲಾಳಪ್ಪ ಜಮಾದಾರ, ರಾಜು ಸೊನ್ನ, ದೇವು ಮೇಲುಕುಂದಿ, ಶರಣು ಇಂಗಳಗಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



