ಜಿಲ್ಲಾಸುದ್ದಿ

ಶಾಲೆಗಳಿಗೆ ಸಿಇಒ ದಿಢೀರ್ ಭೇಟಿ: ಶೂ, ಸಾಕ್ಸ್ ಗುಣಮಟ್ಟ ಪರಿಶೀಲನೆ

ಕಲಬುರಗಿ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ರಾಹುಲ್ ಎಸ್. ಸಂಕನೂರು ಅವರು ಶನಿವಾರ (ಸೆ.26) ಜಿಲ್ಲೆಯ ವಿವಿಧ ಸರ್ಕಾರಿ ಶಾಲೆಗಳಿಗೆ ದಿಢೀರ್ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ವಿತರಿಸಿರುವ ಶೂ ಹಾಗೂ ಸಾಕ್ಸ್‌ಗಳ ಗುಣಮಟ್ಟ ಮತ್ತು ಅಳತೆಗಳನ್ನು ಪರಿಶೀಲಿಸಿದರು.
ಕಲಬುರಗಿ ತಾಲೂಕಿನ ಕರ್ನಾಟಕ ಪಬ್ಲಿಕ್ ಶಾಲೆ, ಅವರಾದ (ಬಿ) ಹಾಗೂ ಕಮಲಾಪುರ ತಾಲೂಕಿನ ಸರ್ಕಾರಿ ಪ್ರೌಢಶಾಲೆ, ಮಹಾಗಾಂವ ಕ್ರಾಸ್‌ ಶಾಲೆಗಳಿಗೆ ಭೇಟಿ ನೀಡಿದ ಅವರು, ವಿದ್ಯಾರ್ಥಿಗಳಿಗೆ ವಿತರಿಸಿರುವ ಶೂ ಮತ್ತು ಸಾಕ್ಸ್‌ಗಳ ಗುಣಮಟ್ಟವನ್ನು ಪರಿಶೀಲಿಸಿದರು. ಅಲ್ಲದೆ, ಶೂ ಮತ್ತು ಸಾಕ್ಸ್‌ಗಳ ಸರಬರಾಜು ಹಾಗೂ ವಿತರಣೆಯ ಕುರಿತು ಮುಖ್ಯ ಶಿಕ್ಷಕರಿಂದ ಮಾಹಿತಿ ಪಡೆದರು.


ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಸಿಇಒ, ಶೂ ಮತ್ತು ಸಾಕ್ಸ್‌ಗಳ ಅಳತೆಯಲ್ಲಿ ವ್ಯತ್ಯಾಸವಾಗಿದೆಯೇ, ಗುಣಮಟ್ಟ ಹೇಗಿದೆ ಎಂಬುದರ ಕುರಿತು ಮಾಹಿತಿ ಪಡೆದುಕೊಂಡರು. ಶಾಲೆಯಲ್ಲಿದ್ದ ಎಸ್‌ಡಿಎಂಸಿ ಸದಸ್ಯರು ಹಾಗೂ ಶಿಕ್ಷಕರೊಂದಿಗೂ ಮಾತನಾಡಿದರು.
ಭೇಟಿಯ ಸಂದರ್ಭದಲ್ಲಿ ಹಾಜರಿದ್ದ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಶಂಕರಮ್ಮ ಡವಳಗಿ ಹಾಗೂ ಉತ್ತರ ವಲಯದ ಶೂ–ಸಾಕ್ಸ್ ನೋಡಲ್ ಅಧಿಕಾರಿ ಸಿದ್ದಲಿಂಗ ರಾಮಗೊಂಡ ಅವರಿಗೆ, ಅಳತೆಯಲ್ಲಿ ವ್ಯತ್ಯಾಸ ಕಂಡುಬಂದಲ್ಲಿ ತಾಲೂಕು ಹಂತದಲ್ಲಿಯೇ ತುರ್ತಾಗಿ ಆಂತರಿಕ ಬದಲಾವಣೆ ಮಾಡಿಕೊಡಲು ಕ್ರಮ ಕೈಗೊಳ್ಳುವಂತೆ ಸಿಇಒ ಸೂಚಿಸಿದರು.


ಉಪನಿರ್ದೇಶಕಿ ಶಂಕರಮ್ಮ ಡವಳಗಿ, ನೋಡಲ್ ಅಧಿಕಾರಿ ಸಿದ್ದಲಿಂಗ ರಾಮಗೊಂಡ ಸೇರಿದಂತೆ ಶಿಕ್ಷಣ ಇಲಾಖೆಯ ಇತರೆ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button