ಜಿಲ್ಲಾಸುದ್ದಿ

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಹೆಚ್ಚುವರಿ ಹೊಣೆ ರಮೇಶ್ ಸಂಗಾಗೆ

ಕಲಬುರಗಿ, ಸೆ.25: ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯ ಹೆಚ್ಚುವರಿ ಪ್ರಭಾರವನ್ನು ಕಲಬುರಗಿ ಜಿಲ್ಲೆಯ ರಮೇಶ್ ಸಂಗಾ ಅವರು ಶುಕ್ರವಾರ ವಹಿಸಿಕೊಂಡಿದ್ದಾರೆ.

ಕರ್ನಾಟಕ ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸೇವೆ–6 ವಿಭಾಗದ ಅಧಿಸೂಚನೆಯಂತೆ, ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಹಡಗಲಿ ಅರುಣಕುಮಾರ್ ಅವರನ್ನು ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಯಮಗಳ ಸಚಿವರ ಅವಧಿಯವರೆಗೆ ಸಚಿವರ ಆಪ್ತ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ಈ ಹಿನ್ನೆಲೆಯಲ್ಲಿ ಅರುಣಕುಮಾರ್ ಅವರನ್ನು ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯ ಕರ್ತವ್ಯದಿಂದ ಬಿಡುಗಡೆ ಮಾಡಲಾಗಿದ್ದು, ಅವರ ಸ್ಥಾನಕ್ಕೆ ಕರ್ನಾಟಕ ಒಕ್ಕಲಿಗ ಸಮುದಾಯಗಳ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿರುವ ರಮೇಶ್ ಸಂಗಾ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಹೆಚ್ಚುವರಿ ಪ್ರಭಾರದಲ್ಲಿ ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.

ಈ ಹಿಂದೆ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ರಮೇಶ್ ಸಂಗಾ ಅವರು ಬಳಿಕ ಬೆಂಗಳೂರಿಗೆ ವರ್ಗಾವಣೆಯಾಗಿ ವಿವಿಧ ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ವೀರಶೈವ ಲಿಂಗಾಯತ ಸಮುದಾಯದ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುವ ನಿಗಮದ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯ ಹೆಚ್ಚುವರಿ ಹೊಣೆಗಾರಿಕೆಯನ್ನು ರಮೇಶ್ ಸಂಗಾ ವಹಿಸಿಕೊಂಡಿರುವುದಕ್ಕೆ ಅವರ ಅಭಿಮಾನಿಗಳು ಹಾಗೂ ಹಿತೈಷಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button