ಕಲಬುರಗಿಯಲ್ಲಿ ಗೋ ಸಾರಥಿ ಆ್ಯಪ್ ಮೂಲಕ ಕುಳಿತಲ್ಲೇ ಆಟೋ, ಕ್ಯಾಬ್ ಬುಕ್ಕಿಂಗ್ ಸೌಲಭ್ಯ
ಆಟೋದಿಂದ ಸೆಡಾನ್, ಎಸ್ಯುವಿವರೆಗೆ ವಿವಿಧ ವಾಹನಗಳ ಆಯ್ಕೆ; ಡಿಜಿಟಲ್ ಪಾವತಿಗೂ ಅವಕಾಶ

ಕಲಬುರಗಿ, ಸೆ.25: ನಗರದ ಸಾರ್ವಜನಿಕರಿಗೆ ಕುಳಿತಲ್ಲೇ ಆಟೋ ಹಾಗೂ ಕ್ಯಾಬ್ ಬುಕ್ ಮಾಡಿಕೊಳ್ಳುವ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ‘ಗೋ ಸಾರಥಿ’ ಆ್ಯಪ್ ಸೇವೆ ಜಾರಿಗೆ ತರಲಾಗಿದೆ ಎಂದು ಆ್ಯಪ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗುರುರಾಜ್ ಸಾಹುಕಾರ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ್ಯಪ್ ಮೂಲಕ ತ್ವರಿತವಾಗಿ ವಾಹನ ಬುಕ್ ಮಾಡಿಕೊಂಡು ಸಮಯ ಉಳಿಸಿಕೊಳ್ಳಬಹುದು. ಆಟೋ, ಮಿನಿಕ್ಯಾಬ್, ಕಾರು, ಸೆಡಾನ್, ಎಸ್ಯುವಿ, ಟ್ರಕ್, ಟ್ಯಾಕ್ಸಿ ಸೇರಿದಂತೆ ವಿವಿಧ ಮಾದರಿಯ ವಾಹನಗಳನ್ನು ಆಯ್ಕೆ ಮಾಡಿಕೊಂಡು ಪ್ರಯಾಣಿಸಬಹುದು ಎಂದರು.
ಬುಕ್ ಮಾಡಿರುವ ವಾಹನದ ಸ್ಥಳ ಹಾಗೂ ಅಂದಾಜು ಆಗಮನದ ಸಮಯದ ಮಾಹಿತಿಯನ್ನು ಪ್ರಯಾಣಿಕರು ಆ್ಯಪ್ನಲ್ಲಿಯೇ ಪಡೆಯಬಹುದು. ನಗರದ ಅನೇಕ ಸ್ಥಳಗಳಲ್ಲಿ ಸೇವೆ ಲಭ್ಯವಿದ್ದು, ಅಗತ್ಯವಿರುವ ಸ್ಥಳಕ್ಕೆ ಸುಲಭವಾಗಿ ಪ್ರಯಾಣಿಸಲು ಅನುಕೂಲವಾಗಲಿದೆ ಎಂದು ಹೇಳಿದರು.
ಹೊರಗಿನ ವಾಹನಗಳಿಗೆ ಪಾವತಿಸುವ ಮೊತ್ತಕ್ಕಿಂತ ಕಡಿಮೆ ದರದಲ್ಲಿ ಸೇವೆ ಪಡೆಯುವ ಅವಕಾಶವಿದ್ದು, ಪ್ರಯಾಣದ ದೂರ ಮತ್ತು ಸಮಯವನ್ನು ಆಧರಿಸಿ ದರ ನಿಗದಿಯಾಗಲಿದೆ. ಬಜೆಟ್ ಪ್ರಯಾಣದಿಂದ ಹಿಡಿದು ಐಷಾರಾಮಿ ಕಾರುಗಳವರೆಗೆ ವಿವಿಧ ಆಯ್ಕೆಗಳು ಗ್ರಾಹಕರಿಗೆ ಲಭ್ಯವಿರುತ್ತವೆ ಎಂದರು.
ಆ್ಯಪ್ನಲ್ಲಿ ತುರ್ತು ಸಹಾಯ ಗುಂಡಿಯೂ ಇದ್ದು, ಸುರಕ್ಷಿತ ಹಾಗೂ ಆರಾಮದಾಯಕ ಪ್ರಯಾಣಕ್ಕೆ ಆದ್ಯತೆ ನೀಡಲಾಗಿದೆ. ಪ್ರಯಾಣಿಸುವ ವಾಹನ ಹಾಗೂ ಚಾಲಕರ ಸಂಪೂರ್ಣ ಮಾಹಿತಿಯು ಆ್ಯಪ್ನಲ್ಲಿ ಲಭ್ಯವಿರುತ್ತದೆ. ನಗದು ಪಾವತಿಯ ಅಗತ್ಯವಿಲ್ಲದೆ ಡಿಜಿಟಲ್ ಪಾವತಿ ಮಾಡುವ ಅವಕಾಶವೂ ಇದೆ ಎಂದು ತಿಳಿಸಿದರು.
ಪ್ರತಿ ಪ್ರಯಾಣದ ನಂತರ ಪ್ರಯಾಣಿಕರು ವಾಹನ ಚಾಲಕರಿಗೆ ಶ್ರೇಯಾಂಕ ನೀಡಬಹುದು. ಇದರಿಂದ ಉತ್ತಮ ಸೇವೆ ಮತ್ತು ಜವಾಬ್ದಾರಿಯುತ ಚಾಲನೆಗೆ ಉತ್ತೇಜನ ದೊರೆಯಲಿದೆ ಎಂದರು.
ಆ್ಯಪ್ನಲ್ಲಿ ಯಾವುದೇ ಸಮಸ್ಯೆ ಅಥವಾ ತೊಂದರೆ ಎದುರಾದರೆ ಸಹಾಯವಾಣಿ ಹಾಗೂ ಬೆಂಬಲ ವ್ಯವಸ್ಥೆ ಮೂಲಕ ಪರಿಹಾರ ಒದಗಿಸಲಾಗುವುದು. ಬಳಕೆದಾರರು ತಮ್ಮ ಅನುಕೂಲಕ್ಕೆ ತಕ್ಕಂತೆ ಸಮಯ ಆಯ್ಕೆ ಮಾಡಿಕೊಂಡು ಸೇವೆ ಪಡೆಯಬಹುದು. ಹೆಚ್ಚಿನ ಸಮಯ ಕೆಲಸ ಮಾಡುವ ಮೂಲಕ ಹೆಚ್ಚುವರಿ ಆದಾಯ ಗಳಿಸುವ ಅವಕಾಶವೂ ಚಾಲಕರಿಗೆ ಇದೆ ಎಂದು ಹೇಳಿದರು.
ಪ್ರಯಾಣಿಕರೊಂದಿಗೆ ಉತ್ತಮ ಸ್ನೇಹ ಹಾಗೂ ಬಾಂಧವ್ಯ ಬೆಳೆಸಿಕೊಂಡು ಹೆಚ್ಚಿನ ಅನುಕೂಲ ಕಲ್ಪಿಸಿಕೊಳ್ಳಬಹುದು. ಜಾಹೀರಾತು ಪ್ರಚಾರದ ಮೂಲಕವೂ ಹೆಚ್ಚುವರಿ ಆದಾಯ ಗಳಿಸುವ ಅವಕಾಶವಿದೆ. ಸ್ಮಾರ್ಟ್ಫೋನ್ ಹೊಂದಿರುವವರು ಯಾವುದೇ ಆರಂಭಿಕ ವೆಚ್ಚವಿಲ್ಲದೆ ಆದಾಯ ಗಳಿಕೆ ಆರಂಭಿಸಬಹುದು. ದೂರ ಪ್ರಯಾಣದಲ್ಲಿ ಹೆಚ್ಚಿನ ಆದಾಯ ಪಡೆಯುವ ಅವಕಾಶವಿದ್ದು, ಗ್ರಾಹಕರ ಬೇಡಿಕೆಯ ಆಧಾರದ ಮೇಲೆ ಹೆಚ್ಚುವರಿ ಹಣವನ್ನು ಸೇವಾ ಶುಲ್ಕವಾಗಿ ಪಡೆಯಬಹುದು ಎಂದರು.
ಗೋ ಸಾರಥಿ ಆ್ಯಪ್ ಮೂಲಕ ನೇರವಾಗಿ ಗ್ರಾಹಕರ ವಾಹನ ಬುಕ್ಕಿಂಗ್ ಸೇವೆ ಪಡೆಯಬಹುದಾಗಿದೆ. ಚಾಲಕರು ಹಾಗೂ ವಾಹನ ಮಾಲೀಕರಿಗೆ ತರಬೇತಿ ಮತ್ತು ವಾಹನ ನೋಂದಣಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ಒದಗಿಸಲಾಗುವುದು ಎಂದು ತಿಳಿಸಿದರು.
ಸೈನಿಕರು ಹಾಗೂ ಗರ್ಭಿಣಿಯರು ಗೋ ಸಾರಥಿ ಆ್ಯಪ್ ಮೂಲಕ ನೋಂದಣಿ ಮಾಡಿಕೊಂಡಲ್ಲಿ ಅವರಿಗೆ ಆದ್ಯತೆಯ ಪ್ರಯಾಣ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಗುರುರಾಜ್ ಸಾಹುಕಾರ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಜಗನ್ನಾಥ ಶೆಳ್ಳಗಿ, ಬಸವರಾಜ ಕುಲಕರ್ಣಿ, ಮಂಜುನಾಥ ಮಠಪತಿ, ರಾಜು ಕಡೆಯಚೂರ್, ಶರಣಗೌಡ ಬಿರಾಳ್, ವಿವೇಕ ನರೋಣಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.



