ಶ್ರಾವಣ ಮಾಸದ ಮುಕ್ತಾಯ: ಹಡಪದ ಅಪ್ಪಣ್ಣನ ಸನ್ನಿಧಿಯಲ್ಲಿ ಭಕ್ತಿಯ ವೈಭವ
ಕಾಂಡ (ಬಿಲ್ವಪತ್ರೆ) ಇಳಿಸುವ ಮೂಲಕ ಧಾರ್ಮಿಕ ಕಾರ್ಯಕ್ರಮಗಳಿಗೆ ಸಮಾರೋಪ

ಶಹಾಬಾದ: ನಗರದ ಬಸವೇಶ್ವರ ನಗರದಲ್ಲಿರುವ ಶರಣ ನಿಜಸುಖಿ ಹಡಪದ ಅಪ್ಪಣ್ಣ ದೇವಸ್ಥಾನದಲ್ಲಿ ಶ್ರಾವಣ ಮಾಸದ ಅಂಗವಾಗಿ ಹಮ್ಮಿಕೊಂಡಿದ್ದ ವಿವಿಧ ಧಾರ್ಮಿಕ ಹಾಗೂ ಭಕ್ತಿಪರ ಕಾರ್ಯಕ್ರಮಗಳಿಗೆ ಕಾಂಡ (ಬಿಲ್ವಪತ್ರೆ) ಇಳಿಸುವ ಮೂಲಕ ಸಡಗರ-ಸಂಭ್ರಮದ ಸಮಾರೋಪ ನೆರವೇರಿತು.
ಶ್ರಾವಣ ಮಾಸದ ಅಂಗವಾಗಿ ದೇವಸ್ಥಾನದಲ್ಲಿ ವಿಶೇಷ ಪೂಜೆ, ರುದ್ರಾಭಿಷೇಕ, ಭಜನಾ ಕಾರ್ಯಕ್ರಮ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದು, ಕೊನೆಯ ದಿನವೂ ದೇವಸ್ಥಾನ ಭಕ್ತರಿಂದ ಕಿಕ್ಕಿರಿದು ತುಂಬಿತ್ತು. ಯರಗೋಳದ ಶ್ರೀ ಸಂಗಮೇಶ್ವರ ಸ್ವಾಮಿಗಳು ಹಾಗೂ ಶಹಾಬಾದದ ಶ್ರೀ ಬಾಲ ಬ್ರಹ್ಮಚಾರಿ ರಾಜಶಿವಯೋಗಿ ಮಹಾಸ್ವಾಮಿಗಳ ಸಮ್ಮುಖದಲ್ಲಿ ಶರಣ ನಿಜಸುಖಿ ಹಡಪದ ಅಪ್ಪಣ್ಣನವರ ಮೂರ್ತಿಗೆ ರುದ್ರಾಭಿಷೇಕ, ವಿಶೇಷ ಪೂಜೆ ಹಾಗೂ ಮಹಾ ಮಂಗಳಾರತಿ ನೆರವೇರಿಸಲಾಯಿತು.
ನಾಡಿನ ಒಳಿತಿಗಾಗಿ ಪ್ರಾರ್ಥನೆ
ಚಿತ್ತಾಪುರದ ಕಂಬಳೇಶ್ವರ ಮಠದ ಶ್ರೀ ಷ.ಬ್ರ. ಸೋಮಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿ, ನಾಡಿನಲ್ಲಿ ಉತ್ತಮ ಮಳೆಯಾಗಿ ರೈತರ ಸಂಕಷ್ಟಗಳು ದೂರವಾಗಲಿ. ರೈತರ ಬದುಕಿನ ಅವಿಭಾಜ್ಯ ಅಂಗವಾಗಿರುವ ಎತ್ತುಗಳು ಸೇರಿದಂತೆ ನಾಡಿನ ಜನತೆ ಎದುರಿಸುತ್ತಿರುವ ಎಲ್ಲ ಸಂಕಷ್ಟಗಳು ನಿವಾರಣೆಯಾಗಲಿ. ಶರಣ ನಿಜಸುಖಿ ಹಡಪದ ಅಪ್ಪಣ್ಣನವರ ಆಶೀರ್ವಾದ ಸದಾ ನಾಡಿನ ಮೇಲಿರಲಿ ಎಂದು ಹಾರೈಸಿದರು.
ಪೇಠಶಿರೂರಿನ ಶ್ರೀ ಮ.ನಿ.ಪ್ರ. ಸಿದ್ಧಲಿಂಗ ಮಹಾಸ್ವಾಮಿಗಳು ಮಾತನಾಡಿ, ಶಹಾಬಾದ ನಗರದಲ್ಲಿ ಶರಣ ಹಡಪದ ಅಪ್ಪಣ್ಣನವರ ದೇವಸ್ಥಾನ ಭವ್ಯವಾಗಿ ಬೆಳೆಯುತ್ತಿರುವುದು ಸಂತಸದ ಸಂಗತಿ. ದೇವಸ್ಥಾನದ ಪೂಜ್ಯರಾದ ಶ್ರೀ ಬಾಲ ಬ್ರಹ್ಮಚಾರಿ ರಾಜಶಿವಯೋಗಿ ಮಹಾಸ್ವಾಮಿಗಳು ಹಗಲು-ರಾತ್ರಿ ಅಪ್ಪಣ್ಣನವರ ಸೇವೆಯೊಂದಿಗೆ ಸಮಾಜದ ಜನರ ಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಸಮಾಜದ ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ನೀಡಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಶ್ರೀ ಮಲ್ಲಣ್ಣಪ್ಪ ಅಲ್ಲಮಪ್ರಭು ಪೀಠ ಹಾಗೂ ಎಸ್. ತೋನಸನಹಳ್ಳಿ ಪೂಜ್ಯರು ಉಪಸ್ಥಿತರಿದ್ದರು.
ಇಡೀ ರಾತ್ರಿ ಮೊಳಗಿದ ಭಜನಾ ಗಾಯನ
ಶ್ರಾವಣ ಮಾಸದ ಅಂಗವಾಗಿ ದೇವಸ್ಥಾನದಲ್ಲಿ ಇಡೀ ರಾತ್ರಿ ಭಜನಾ ಸಪ್ತಾಹ ನಡೆಯಿತು. ಜೇವರ್ಗಿ ತಾಲೂಕು ಹಡಪದ ಲಿಂಗಮ್ಮ ತಾಯಿ ಮಹಿಳಾ ಘಟಕದ ತಾಲೂಕಾಧ್ಯಕ್ಷೆ ಶ್ರೀಮತಿ ಸಾವಿತ್ರಮ್ಮ ಹಡಪದ ಅವರ ನೇತೃತ್ವದ ಭಜನಾ ಮಂಡಳಿ, ಹಳೇ ಶಹಾಬಾದದ ಸಂತೋಷ ಪಾಟೀಲ್ ಸಂಗಡಿಗರು ಹಾಗೂ ಬಸವೇಶ್ವರ ನಗರದ ವಿವಿಧ ಭಜನಾ ಮಂಡಳಿಗಳು ಭಕ್ತಿಗೀತೆ ಹಾಗೂ ಭಜನೆಗಳನ್ನು ನಡೆಸಿಕೊಟ್ಟವು.
ಬೆಳಗಿನ ಜಾವವೂ ಪೂಜ್ಯರ ಸಮ್ಮುಖದಲ್ಲಿ ಹಡಪದ ಅಪ್ಪಣ್ಣನವರ ಮೂರ್ತಿಗೆ ವಿಶೇಷ ಪೂಜೆ, ರುದ್ರಾಭಿಷೇಕ ಹಾಗೂ ಮಹಾ ಮಂಗಳಾರತಿ ನೆರವೇರಿಸಲಾಯಿತು.
500ಕ್ಕೂ ಹೆಚ್ಚು ಭಕ್ತರಿಗೆ ಪ್ರಸಾದ
ಕಾರ್ಯಕ್ರಮದ ಬಳಿಕ 500ಕ್ಕೂ ಹೆಚ್ಚು ಹಡಪದ ಅಪ್ಪಣ್ಣ ಸಮಾಜದ ಬಂಧುಗಳು ಹಾಗೂ ದೇವಸ್ಥಾನದ ಸುತ್ತಮುತ್ತಲಿನ ಭಕ್ತರು ಅನ್ನಪ್ರಸಾದ ಸ್ವೀಕರಿಸಿದರು. ಶ್ರಾವಣ ಮಾಸದ ಧಾರ್ಮಿಕ ಕಾರ್ಯಕ್ರಮಗಳ ಸಮಾರೋಪವು ಭಕ್ತರಲ್ಲಿ ಆಧ್ಯಾತ್ಮಿಕ ಭಾವನೆ ಹಾಗೂ ಸಮಾಜದ ಒಗ್ಗಟ್ಟಿಗೆ ಸಾಕ್ಷಿಯಾಯಿತು.
ಕಾರ್ಯಕ್ರಮದಲ್ಲಿ ಕಲಬುರಗಿ ಜಿಲ್ಲಾ ಗೌರವಾಧ್ಯಕ್ಷ ಬಸವರಾಜ ಹಡಪದ ಸುಗೂರ ಎನ್., ರಾಜ್ಯ ಹಡಪದ ಸಮಾಜದ ಮಾಜಿ ಸಂಘಟನಾ ಕಾರ್ಯದರ್ಶಿ ಬಸವರಾಜ ಹಳ್ಳಿ ಶಹಾಬಾದ, ಜಿಲ್ಲಾಧ್ಯಕ್ಷ ಈರಣ್ಣ ಸಿ. ಹಡಪದ ಸಣ್ಣೂರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ಹಡಪದ ನೀಲೂರ, ಜಿಲ್ಲಾ ಉಪಾಧ್ಯಕ್ಷ ರುದ್ರಮಣಿ ಅಪ್ಪಣ್ಣ ಬಟಗೇರಾ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ. ಹಡಪದ ಸುಗೂರ ಎನ್., ಕಲಬುರಗಿ ನಗರಾಧ್ಯಕ್ಷ ಮಲ್ಲಿಕಾರ್ಜುನ ಸಾವಳಗಿ, ಕಲಬುರಗಿ ತಾಲೂಕಾಧ್ಯಕ್ಷ ಚಂದ್ರಶೇಖರ ತೋನಸನಹಳ್ಳಿ, ಪ್ರಧಾನ ಕಾರ್ಯದರ್ಶಿ ವಿನೋದ ಅಂಬಲಗಾ, ಶಹಾಬಾದ ತಾಲೂಕಾಧ್ಯಕ್ಷ ಸಿದ್ರಾಮ ಹಡಪದ ಯಾಗಾಪುರ, ಪ್ರಧಾನ ಕಾರ್ಯದರ್ಶಿ ಶಿವಲಿಂಗ ಶಹಾಬಾದ, ಜೇವರ್ಗಿ ತಾಲೂಕಾಧ್ಯಕ್ಷ ತಿಪ್ಪಣ್ಣ ಹಡಪದ ನರಿಬೋಳ ಸೇರಿದಂತೆ ಸಮಾಜದ ಮುಖಂಡರು, ಹಿರಿಯರು ಹಾಗೂ ಭಕ್ತರು ಭಾಗವಹಿಸಿದ್ದರು.
ಸಮಾಜದ ಹಿರಿಯರಾದ ಶಿವಶರಣಪ್ಪ ಹಡಪದ ಹಾಗರಗಿ, ಶಿವಶರಣಪ್ಪ ಹಡಪದ ಯಳವಂತಗಿ, ನಾಗಣ್ಣ ಮುತ್ತಕೋಡ, ದೂಳಪ್ಪ ಹಡಪದ ಹಳೇ ಶಹಾಬಾದ, ಸೋಮಣ್ಣ ಹಡಪದ ನರಿಬೋಳ, ಬಸಣ್ಣ ಹಡಪದ ಹಳೇ ಶಹಾಬಾದ, ಭೀಮಾಶಂಕರ ಹಡಪದ ಶಹಾಬಾದ, ಭಾಗಣ್ಣ ಹಡಪದ ದಂಡಗುಂಡ, ಮಹಾದೇವ ಹಡಪದ ರಾವೂರ, ಬಸವರಾಜ ಹಡಪದ ನಂದೆಳ್ಳಿ, ನಾಗರಾಜ ಹಡಪದ ಸಾತನೂರ, ರೇವಣಸಿದ್ದ ಕೋರವಾರ, ಸುನೀಲ್ ಕುಮಾರ್ ಹಡಪದ ಬಾಗಹಿಪ್ಪರರ್ಗಾ, ಶಿವಾಜಿ ಹಡಪದ ಶಹಾಬಾದ, ತೋಟೇಂದ್ರ ಹಡಪದ, ಭಾಗಣ್ಣ ಹಡಪದ ಮುತ್ತಕೋಡ, ಮಹೇಶ್ ಹಡಪದ ನಡುವಿನಹಳ್ಳಿ, ಪ್ರಸಾದ ಹಡಪದ, ಶ್ರೀಮಂತ ಹಡಪದ ಅವನೂರ, ರಮೇಶ್ ಹಡಪದ ಕುಕ್ಕುಂದಾ, ಶಂಕರ ಹರವಾಳ, ಮೌನೇಶ ಕೂಡ್ಲಿ, ಶ್ರೀನಿವಾಸ್ ನೇದಲಗಿ, ಕಲ್ಯಾಣಿ ಪೂಜಾರಿ, ವೆಂಕಟೇಶ ಸುರಪುರ, ಸಿದ್ರಾಮಪ್ಪ ಅಕ್ಕಲಕೋಟೆ, ನಾಗು ನಾಯ್ಕೋಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



