ಪ್ರತಿ ಲೀಟರ್ಗೆ ₹8ರಿಂದ ₹10 ಹೆಚ್ಚಿಸಲು ಹಾಲು ಉತ್ಪಾದಕರ ಆಗ್ರಹ

ಬೀದರ್, ಸೆ.22: ಹಾಲು ಒಕ್ಕೂಟಗಳು ಹಾಲು ಉತ್ಪಾದಕರಿಂದ ಖರೀದಿಸುವ ಹಾಲಿನ ದರವನ್ನು ಪ್ರತಿ ಲೀಟರ್ಗೆ ₹8ರಿಂದ ₹10ರಷ್ಟು ಹೆಚ್ಚಿಸಬೇಕು ಎಂದು ಕಲಬುರಗಿ, ಬೀದರ್ ಹಾಗೂ ಯಾದಗಿರಿ ಹಾಲು ಒಕ್ಕೂಟಗಳ ನಿರ್ದೇಶಕರು, ಜಿಲ್ಲೆಯ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಹಾಲು ಉತ್ಪಾದಕರು ಒತ್ತಾಯಿಸಿದರು.
ಈ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಬರೆದ ಮನವಿ ಪತ್ರವನ್ನು ನಗರದ ಮಂಗಳವಾರ ನಿಯೋಜನೆಗೆ ಹೆಚ್ಚುವರಿ ಜಿಲ್ಲಾಧಿಕಾರಿ ಸುರೇಖಾ ಅವರಿಗೆ ಸಲ್ಲಿಸಿದರು.
ಜಿಲ್ಲೆಯ ಹಾಲು ಉತ್ಪಾದಕರು ಪ್ರತಿದಿನ ಹಾಲು ಒಕ್ಕೂಟಗಳಿಗೆ ಹಾಲು ಪೂರೈಸುತ್ತಿದ್ದಾರೆ. ಆದರೆ ಹೈನುಗಾರಿಕೆಗೆ ಅಗತ್ಯವಿರುವ ಪಶು ಆಹಾರ, ಹಿಂಡಿ, ಮೇವು, ಔಷಧಿ, ಪಶು ನಿರ್ವಹಣೆ, ಕೂಲಿ ಕಾರ್ಮಿಕರ ವೇತನ ಸೇರಿದಂತೆ ಇತರ ವೆಚ್ಚಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಇದಕ್ಕೆ ಹೋಲಿಸಿದರೆ ಹಾಲಿನ ಖರೀದಿ ದರ ಮಾತ್ರ ಸಮರ್ಪಕವಾಗಿ ಹೆಚ್ಚಳವಾಗಿಲ್ಲ ಎಂದು ಅವರು ಗಮನ ಸೆಳೆದರು.
ಹಾಲಿನ ಖರೀದಿ ದರ ಕಡಿಮೆಯಿರುವುದರಿಂದ ಹಾಲು ಉತ್ಪಾದಕರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಹೈನುಗಾರಿಕೆಯನ್ನು ಮುಂದುವರಿಸುವುದು ಕಷ್ಟಕರವಾಗುತ್ತಿದೆ. ಜಿಲ್ಲೆಯ ಗ್ರಾಮೀಣ ಪ್ರದೇಶದ ರೈತರು ಹಾಗೂ ಹಾಲು ಉತ್ಪಾದಕರ ಹಿತ ರಕ್ಷಣೆಗಾಗಿ ಹಾಲಿಗೆ ನ್ಯಾಯಯುತ ಬೆಲೆ ನೀಡುವುದು ಅಗತ್ಯವಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಹಾಲು ಉತ್ಪಾದಕರ ಕುಟುಂಬಗಳ ಆರ್ಥಿಕ ಸ್ಥಿರತೆ ಹಾಗೂ ರಾಜ್ಯದ ಹೈನುಗಾರಿಕೆ ಕ್ಷೇತ್ರದ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು, ಹಾಲಿನ ಖರೀದಿ ದರವನ್ನು ತಕ್ಷಣ ಹೆಚ್ಚಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ಒಕ್ಕೂಟದ ಮಾಜಿ ಅಧ್ಯಕ್ಷರು ಹಾಗೂ ಹಾಲು ನಿರ್ದೇಶಕರಾದ ಮಲ್ಲಿಕಾರ್ಜುನ ಬಿರಾದಾರ್, ರೇವಣಸಿದ್ದಪ್ಪ ವಿ. ಪಾಟೀಲ, ನಿರ್ದೇಶಕರಾದ ಭೀಮರಾವ್ ಎ. ಬಲತೆ, ನಾಗರಾಜ್ ಪಾಟೀಲ, ಮಾಜಿ ನಿರ್ದೇಶಕರಾದ ಶ್ರೀಕಾಂತ ದಾನಿ, ವಿಜಯಲಕ್ಷ್ಮಿ ಪಾಟೀಲ ಸೇರಿದಂತೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ನೂರಾರು ಹಾಲು ಉತ್ಪಾದಕರು ಉಪಸ್ಥಿತರಿದ್ದರು.



