ಜಿಲ್ಲಾಸುದ್ದಿ

ಗುಣಮಟ್ಟದ, ಸಂಸ್ಕಾರಯುತ ಶಿಕ್ಷಣಕ್ಕೆ ಅಜೀತಕುಮಾರ್ ಪೊಲೀಸ್ ಪಾಟೀಲ ಕರೆ

ಕಲಬುರಗಿ, ಸೆ.21: ಬದಲಾಗುತ್ತಿರುವ ಕಾಲಘಟ್ಟಕ್ಕೆ ಅನುಗುಣವಾಗಿ ಶಿಕ್ಷಣ ಪದ್ಧತಿಗಳಲ್ಲೂ ಸಾಕಷ್ಟು ಬದಲಾವಣೆಗಳಾಗುತ್ತಿದ್ದು, ಮಕ್ಕಳಿಗೆ ಕೇವಲ ಪಠ್ಯಾಧಾರಿತ ಶಿಕ್ಷಣ ನೀಡುವುದಷ್ಟೇ ಅಲ್ಲದೆ ಮೌಲ್ಯಗಳು, ಸಂಸ್ಕಾರ, ಮಾನವೀಯತೆ ಹಾಗೂ ಜೀವನ ಕೌಶಲ್ಯಗಳನ್ನು ಒಳಗೊಂಡ ಗುಣಮಟ್ಟದ ಶಿಕ್ಷಣ ನೀಡುವುದು ಇಂದಿನ ಅಗತ್ಯವಾಗಿದೆ ಎಂದು ಮರತೂರ ಗ್ರಾಮದ ಹಿರಿಯ ಮುಖಂಡ ಅಜೀತಕುಮಾರ್ ಪೊಲೀಸ್ ಪಾಟೀಲ ಹೇಳಿದರು.

ನಗರದ ಹೊರವಲಯದ ಮರತೂರ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಮಿತಾಕ್ಷರ ಮಿತ್ರ ಬಳಗ ಹಾಗೂ ಪ್ರಜ್ಞಾ ಫೌಂಡೇಷನ್ ವತಿಯಿಂದ ಆಯೋಜಿಸಿದ್ದ ಶಾಲಾ ಮಕ್ಕಳಿಗೆ ಶಾಲಾ ಬ್ಯಾಗ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಕ್ಕಳ ಶಿಕ್ಷಣಕ್ಕೆ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕು. ಗ್ರಾಮೀಣ ಪ್ರದೇಶದ ಮಕ್ಕಳಲ್ಲಿಯೂ ಅಪಾರ ಪ್ರತಿಭೆ ಇದ್ದು, ಅವರಿಗೆ ಅಗತ್ಯವಾದ ಶೈಕ್ಷಣಿಕ ಸೌಲಭ್ಯ, ಪ್ರೋತ್ಸಾಹ ಹಾಗೂ ಮಾರ್ಗದರ್ಶನ ದೊರೆತರೆ ಭವಿಷ್ಯದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯ. ಸೌಲಭ್ಯ ಕಲ್ಪಿಸುವುದರ ಜತೆಗೆ ಮಕ್ಕಳಲ್ಲಿ ಆತ್ಮವಿಶ್ವಾಸ, ಶಿಸ್ತು, ಜವಾಬ್ದಾರಿ ಹಾಗೂ ಸಾಮಾಜಿಕ ಕಾಳಜಿಯನ್ನು ಬೆಳೆಸುವ ಕೆಲಸವೂ ನಡೆಯಬೇಕು ಎಂದು ಹೇಳಿದರು.

ಶಿಕ್ಷಣ ಪ್ರತಿಯೊಬ್ಬರ ಸಾಮಾಜಿಕ ಹೊಣೆ

ಶಿಕ್ಷಣ ತಜ್ಞ ಕೆ.ಎಂ. ವಿಶ್ವನಾಥ್ ಮಾತನಾಡಿ, ಗ್ರಾಮೀಣ ಹಾಗೂ ಹಿಂದುಳಿದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಅವಕಾಶಗಳನ್ನು ತಲುಪಿಸುವುದು ಪ್ರತಿಯೊಬ್ಬರ ಸಾಮಾಜಿಕ ಜವಾಬ್ದಾರಿಯಾಗಿದೆ. ಶಿಕ್ಷಣವು ಕೇವಲ ಉದ್ಯೋಗ ಪಡೆಯುವ ಸಾಧನವಲ್ಲ. ಅದು ವ್ಯಕ್ತಿತ್ವ ನಿರ್ಮಾಣ ಹಾಗೂ ಸಮಾಜದ ಅಭಿವೃದ್ಧಿಗೆ ಪ್ರಮುಖ ಆಧಾರವಾಗಿದೆ. ಮಕ್ಕಳ ಅಗತ್ಯಗಳನ್ನು ಗುರುತಿಸಿ, ಅವರಿಗೆ ಅಗತ್ಯವಾದ ಶೈಕ್ಷಣಿಕ ಸಾಮಗ್ರಿ ಹಾಗೂ ಮಾರ್ಗದರ್ಶನ ಒದಗಿಸುವ ಇಂತಹ ಕಾರ್ಯಕ್ರಮಗಳನ್ನು ಮುಂದುವರಿಸಬೇಕು ಎಂದರು.

ಪ್ರಜ್ಞಾ ಫೌಂಡೇಷನ್ ಅಧ್ಯಕ್ಷ ಕಾಶೀನಾಥ ಪೂಜಾರಿ ಮಾತನಾಡಿ, ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಸೇರಿದಂತೆ ಅಗತ್ಯ ಶೈಕ್ಷಣಿಕ ಸಾಮಗ್ರಿಗಳನ್ನು ಒದಗಿಸುವ ಮೂಲಕ ಅವರ ಕಲಿಕೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಇಂತಹ ಸಾಮಾಜಿಕ ಕಾಳಜಿಯ ಕಾರ್ಯಕ್ರಮಗಳು ಮಕ್ಕಳಲ್ಲಿ ಶಿಕ್ಷಣದ ಬಗ್ಗೆ ಆಸಕ್ತಿ ಹಾಗೂ ಆತ್ಮವಿಶ್ವಾಸ ಹೆಚ್ಚಿಸಲು ಸಹಕಾರಿಯಾಗುತ್ತವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಗುರು ಹೇಮನಾಥ ಜಾಧವ ಮಾತನಾಡಿ, ಸಮುದಾಯದ ಸಹಭಾಗಿತ್ವ ಮತ್ತು ಸಹಕಾರದಿಂದ ಶಾಲಾ ಮಕ್ಕಳಿಗೆ ಶಾಲಾ ಬ್ಯಾಗ್ ವಿತರಿಸುತ್ತಿರುವುದು ಸಂತಸದ ಸಂಗತಿ ಎಂದರು. ಶಾಲೆಯ ಹಿರಿಯ ಶಿಕ್ಷಕಿ ಸುಮಂಗಲಾ ಮಾತನಾಡಿ, ತಮ್ಮ ಶಾಲೆಯಲ್ಲಿ ಕಲಿತು ಬೆಳೆದ ವಿದ್ಯಾರ್ಥಿಗಳು ಇದೀಗ ಶಾಲೆಗೆ ಕೊಡುಗೆ ನೀಡುತ್ತಿರುವುದು ಹೆಮ್ಮೆಯ ವಿಷಯ. ಶಾಲಾ ಬ್ಯಾಗ್‌ಗಳು ಮಕ್ಕಳಿಗೆ ಅನುಕೂಲವಾಗಲಿವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಲೆಯ ವಿದ್ಯಾರ್ಥಿನಿಯರಿಗೆ ಶಾಲಾ ಬ್ಯಾಗ್‌ಗಳನ್ನು ವಿತರಿಸಲಾಯಿತು. ಮಿತಾಕ್ಷರ ಮಿತ್ರ ಬಳಗದ ಅಪ್ಪಾಸಾಬ್, ಶರಣು ಜಬರಿ, ಶಿವಮೂರ್ತಿ ಹಿರೇಮಠ, ಪ್ರದೀಪ್ ಸೇರಿದಂತೆ ಬಳಗದ ಸದಸ್ಯರು, ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು, ಗ್ರಾಮಸ್ಥರು ಹಾಗೂ ಪೋಷಕರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button