ಬಸವಾದಿ ಶಿವಶರಣರ ಹಿಂದೂ ಸಮಾವೇಶಕ್ಕೆ ವೀರಶೈವ ಲಿಂಗಾಯತ ಮಹಾಸಭಾ ಬೆಂಬಲ

ಕಲಬುರಗಿ, ಸೆ.21: ನಗರದ ಕಣ್ಣೇರಿ ಮಠದ ಪೀಠಾಧಿಪತಿಗಳಾದ ಪರಮಪೂಜ್ಯ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಸೆ.27ರಂದು ಸಂಜೆ 4 ಗಂಟೆಗೆ ಆಯೋಜಿಸಿರುವ ಬಸವಾದಿ ಶಿವಶರಣರ ಹಿಂದೂ ಸಮಾವೇಶಕ್ಕೆ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ ಎಂದು ಮಹಾಸಭಾ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಶಾಂತಕುಮಾರ ದುಧನಿ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದ ಎಲ್ಲ ವರ್ಗದ ಜನರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಕಲ್ಯಾಣ ಕರ್ನಾಟಕದ ಹೆಬ್ಬಾಗಿಲು ಕಲಬುರಗಿಯಲ್ಲಿ ಆಯೋಜಿಸಿರುವ ಸಮಾವೇಶ ಅತ್ಯಂತ ಅರ್ಥಪೂರ್ಣವಾಗಿದೆ ಎಂದರು.
12ನೇ ಶತಮಾನದ ಬಸವಾದಿ ಶಿವಶರಣರ ಕಾಯಕ, ದಾಸೋಹ ಹಾಗೂ ಸಮ ಸಮಾಜದ ಆಶಯಗಳನ್ನು ಜನರಿಗೆ ತಲುಪಿಸುವುದು ಮತ್ತು ಎಲ್ಲರನ್ನು ಒಗ್ಗೂಡಿಸುವುದು ಸಮಾವೇಶದ ಪ್ರಮುಖ ಉದ್ದೇಶವಾಗಿದೆ ಎಂದು ತಿಳಿಸಿದರು.
ಕಣ್ಣೇರಿ ಪರಮಪೂಜ್ಯರು ಸಮಾಜದಲ್ಲಿ ಕೃಷಿಯ ಮಹತ್ವ ಹಾಗೂ ಹಿಂದೂ ಧರ್ಮದ ಏಕತೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಬಸವ ಪರಂಪರೆ, ಬಸವಾದಿ ಶಿವಶರಣರ ಸಂದೇಶ ಹಾಗೂ ಹಿಂದೂ ಸಮಾಜದ ಏಕತೆಯ ದೃಷ್ಟಿಯಿಂದ ನಡೆಯುತ್ತಿರುವ ಈ ಐತಿಹಾಸಿಕ ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿದರು.
ಈಗಾಗಲೇ ಮಹಾಸಭಾದ ಪದಾಧಿಕಾರಿಗಳು ಸಮಾವೇಶದ ಕುರಿತು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಗ್ರಾಮ, ಪಟ್ಟಣ ಹಾಗೂ ಕಲಬುರಗಿ ಮಹಾನಗರದ ವಿವಿಧ ವಾರ್ಡ್ಗಳಲ್ಲಿ ಸಭೆಗಳನ್ನು ನಡೆಸುವ ಮೂಲಕ ಸಮಾವೇಶದ ಮಹತ್ವವನ್ನು ಜನರಿಗೆ ತಿಳಿಸಲಾಗುತ್ತಿದೆ. ಸಮಾಜದ ಎಲ್ಲ ವರ್ಗಗಳಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿರುವುದು ಸಂತಸದ ಸಂಗತಿ ಎಂದು ಶಾಂತಕುಮಾರ ದುಧನಿ ಹೇಳಿದರು.
ಸಮಾವೇಶ ಐತಿಹಾಸಿಕವಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ನೂರಾರು ಪರಮಪೂಜ್ಯರು ಭಾಗವಹಿಸಲಿದ್ದಾರೆ. ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಅವರು ಕೋರಿದರು.
ಸುದ್ದಿಗೋಷ್ಠಿಯಲ್ಲಿ ಅಶೋಕ ಮಾನಕರ್, ಈರಣ್ಣ ಗೋಳೆದ್, ರಾಜುಗೌಡ ನಾಗನಳ್ಳಿ, ಚಂದ್ರಕಾಂತ ಬೆಣೂರ, ನಾಗಲಿಂಗಯ್ಯ ಮಠಪತಿ, ಶರಣಬಸವ ಟೆಂಗಳಿ, ಶರಣು ಸಜ್ಜನ್, ಚನ್ನಪ್ಪ ದಿಗಾಂವಿ, ವೀರು ಸ್ವಾಮಿ, ಅಣವೀರ ಪಾಟೀಲ, ರವಿ ಮಹಾಗಾಂವ, ಅಶೋಕ ಇಂಡಿ, ಭಾಗಣ್ಣ ಸ್ವಾದಿ, ವೀರೇಶ ನೀಲಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.



